ರಾಸಾಯನಿಕ ಭತ್ತದಿಂದ..ಸಾವಯವ ಬಾಳೆಯವರೆಗೆ; ಗದಗ ರೈತರ ‘ಹಸಿರು ಕೃಷಿ’ ಸಾಧನೆ

ಈ ಬಾಳೆ ಬೆಳೆಯಲು ರೈತರ ಶ್ರಮವೇನೂ ಕಡಿಮೆ ಇಲ್ಲ. ಎಕರೆಗೆ ಸುಮಾರು 40ರಿಂದ 70 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಸಹಾಯದಿಂದ ಬಡ ರೈತರು ಬಾಳೆ ಬೆಳೆದು ಶ್ರೀಮಂತರಾಗಿದ್ದಾರೆ.

ರಾಸಾಯನಿಕ ಭತ್ತದಿಂದ..ಸಾವಯವ ಬಾಳೆಯವರೆಗೆ; ಗದಗ ರೈತರ ‘ಹಸಿರು ಕೃಷಿ' ಸಾಧನೆ
ಹಮ್ಮಗಿಯಲ್ಲಿ ಬಾಳೆ ಬೆಳೆದ ರೈತರು
Follow us
Lakshmi Hegde
|

Updated on:Dec 10, 2020 | 4:07 PM

ಗದಗ: ಈ ರೈತರು ಕೆಲವು ವರ್ಷಗಳ ಹಿಂದೆ ಅಧಿಕ ರಾಸಾಯನಿಕ ಔಷಧಿ ಬಳಸಿ ಬೆಳೆ ಬೆಳೆದು ಭೂಮಿಯ ಒಡಲನ್ನು ವಿಷಕಾರಿ ಮಾಡುತ್ತಿದ್ದರು. ಆದರೆ ಈಗ ಅವರು ರಾಸಾಯನಿಕ ಕೃಷಿಗೆ ತಿಲಾಂಜಲಿ ಇಟ್ಟಿದ್ದಾರೆ. ರಾಸಾಯನಿಕ ಹಾಕಿ ಭತ್ತ ಬೆಳೆಯುತ್ತಿದ್ದ ಹಮ್ಮಗಿ ರೈತರು ಈಗ ಸಂಪೂರ್ಣ ಸಾವಯವ ಕೃಷಿಕರಾಗಿ ಬದಲಾಗಿದ್ದಾರೆ. ಇಡೀ ಗ್ರಾಮದ ರೈತರು ಸಾವಯವ ಬಾಳೆ ಬೆಳೆಯುವ ಮೂಲಕ ಯಶಸ್ಸು ಸಾಧಿಸಿದ್ದಾರೆ.

ಸೊಂಪಾಗಿ ಬೆಳೆದು ನಿಂತಿದೆ ಸಾವಯವ ಬಾಳೆ ಕಣ್ಣು ಹಾಯಿಸಿದೆಲ್ಲೆಲ್ಲಾ ಹಸಿರಿನಿಂದ ಕಂಗೊಳಿಸುತ್ತಿದೆ ಬಾಳೆ ತೋಟಗಳು. ವಿಷಕಾರಿ ಭತ್ತದ ಕೃಷಿ ಬಿಟ್ಟು ಸಾವಯವ ಬಾಳೆ ಬೆಳೆದು ಇಡೀ ಊರಿನ ರೈತರು ಮಾದರಿಯಾಗಿದ್ದಾರೆ. ಎಲ್ಲಿ ನೋಡಿದರೂ ಬಾಳೆ.. ಬಾಳೆ.. ಬಾಳೆ.. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಬಾಳೆ ಬೆಳೆ. ಈ ಹಸಿರು ಮೈಸಿರಿ ಕಂಡಿದ್ದು ಬರಗಾಲಕ್ಕೆ ಬೆಂಡಾದ ಗದಗ ಜಿಲ್ಲೆಯಲ್ಲಿ. ಇಲ್ಲಿನ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದಲ್ಲಿ. ಗ್ರಾಮದ ಸುತ್ತಮುತ್ತ ಎಲ್ಲಿ ಕಣ್ಣು ಹಾಯಿಸಿದ್ರೂ ಬಾಳೆ ತೋಟಗಳದ್ದೇ ಕಾರಬಾರು. ಈ ಭಾಗದಲ್ಲಿ ಈ ಮೊದಲು ಎಲ್ಲಿ ನೊಡಿದ್ರು ಭತ್ತ ಬೆಳೆಯೇ ಕಾಣಿಸುತ್ತಿತ್ತು. ಇದಕ್ಕಾಗಿ ಸಿಂಪಡಿಸುತ್ತಿದ್ದ ವಿಷಕಾರಿ ಗೊಬ್ಬರದಿಂದ ಭೂಮಿಯಲ್ಲಿ ವಿಷವೇ ತುಂಬಿಕೊಂಡಿತ್ತು.

ಹಮ್ಮಗಿ ಗ್ರಾಮದ ಬಾಳೆತೋಟ

ಆದರೆ ಈಗ ಊರಿಗೆ ಊರೇ ಸಾವಯವ ಕೃಷಿಯತ್ತ ವಾಲಲು ಕಾರಣ ತೋಟಗಾರಿಕೆ ಇಲಾಖೆ. ವಿಷಕಾರಿ ಗೊಬ್ಬರ, ಔಷಧಿ ಸಿಂಪಡಣೆಯಿಂದ ಭೂಮಿ ಹೇಗೆ ಹಾಳಾಗುತ್ತದೆ ಎಂಬುದನ್ನು ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈಗ ಇಡೀ ‌ಊರಿನ ರೈತರು ಬಾಳೆ ಬೆಳೆದು ಯಶಸ್ಸು ಸಾಧಿಸಿದ್ದಾರೆ. ಹಮ್ಮಗಿ ಗ್ರಾಮದಲ್ಲಿ 500-600 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಪಂಚಬಾಳೆ, ಯಾಲಕ್ಕಿ ಬಾಳೆ ಬೆಳೆ ಬೆಳೆದಿದ್ದಾರೆ. ಉತ್ತಮವಾದ ಸಾವಯವ ಗೊಬ್ಬರ ನೀಡಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ್ದಾರೆ. ಜತೆಗೆ ತೋಟಗಾರಿಕೆ ಇಲಾಖೆಯಿಂದ ಒಂದು ಎಕರೆಗೆ 40 ಸಾವಿರ ರೂಪಾಯಂತೆ ಸಬ್ಸಿಡಿ ರೂಪದಲ್ಲಿ ಹಣ ನೀಡಲಾಗುತ್ತದೆ. ಸುಮಾರು 4 ಅಡಿ ಉದ್ದದ ಬಾಳೆ ಗಿಡದಲ್ಲಿ 40 ರಿಂದ 45 ಕೆಜಿ ತೂಕದ ಗೊಣೆಗಳು ಕಾಣುತ್ತಿವೆ. ಬಾಳೆ ಬೆಳೆದ ರೈತರು ಫುಲ್ ಖುಷಿಯಲ್ಲಿದ್ದಾರೆ ಅನ್ನೋದು ರೈತ ಧರ್ಮರಾಜ್ ಮಾತು..

40 ರಿಂದ 70 ಸಾವಿರ ರೂ.ಖರ್ಚು ಈ ಬಾಳೆ ಬೆಳೆಯನ್ನು ಬೆಳೆಯಲು ರೈತರು ಎಕರೆಗೆ ಸುಮಾರು 40 ರಿಂದ 70 ಸಾವಿರ ರೂ. ಖರ್ಚು ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಸಹಾಯದಿಂದ ಬಡ ರೈತರು ಬಾಳೆ ಬೆಳೆದು ಶ್ರೀಮಂತರಾಗಿದ್ದಾರೆ. ತೋಟದಲ್ಲಿರುವ ಬಾಳೆ ಗಿಡಗಳು ಗೊನೆಗಳಿಂದ ತುಂಬಿದ್ದು, ರಸ್ತೆಯಲ್ಲಿ ತೆರಳುವವರ ಗಮನ ಸೆಳೆಯುತ್ತಿವೆ. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಸರ್ಕಾರದ ಯೋಜನೆ ಲಾಭ ಪಡೆದ ಭರ್ಜರಿ ಕೃಷಿ ಮಾಡಬಹುದು. ಸಾಲದ ಯಾವುದೇ ಗೊಡುವೆಯೂ ಇಲ್ಲದೆ ಮರಳಿ ಪ್ರಯತ್ನ ಮಾಡು ಎನ್ನುವಂತೆ ಸತತ ಪ್ರಯತ್ನದ ನಂತರ ಪಚ್ಚ ಬಾಳೆ ಮತ್ತು ಯಾಲಕ್ಕಿ ಬಾಳೆ ಬೆಳೆದು ಬಾಳು ಹಚ್ಚು ಹಸಿರು ಮಾಡಿಕೊಂಡು ಯಶಸ್ಸು ಮಾಡಿಕೊಂಡಿದ್ದಾರೆ. ಸುತ್ತಮುತ್ತಲಿನ ಹಳ್ಳಿಯ ರೈತರು ಹಮ್ಮಿಗಿ ರೈತರನ್ನು ನೋಡಿ ಖುಷಿ ಪಡುತ್ತಿದ್ದಾರೆ. ಮತ್ತು ಇದಕ್ಕೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಸಹ ನೆರವು ನೀಡಿದ್ದಾರೆ. ಹನಿ ನೀರಾವರಿ ಪೂರೈಕೆ ವೇಳೆ ಪೈಪ್‌ ಮೂಲಕವೇ ಸೂಕ್ಷ್ಮ ಪೋಷಕಾಂಶಗಳನ್ನು ಬಾಳೆ ಬುಡಕ್ಕೆ ತಲುಪಿಸುವ ವ್ಯವಸ್ಥೆ ಮಾಡುತ್ತಿರುವುದರಿಂದ ಬಾಳೆ ಬೆಳೆಗೆ ರೋಗ ರುಜಿನ ಭಾದೆಗಳು ಬರೋದಿಲ್ಲಎನ್ನುತ್ತಾರೆ ಅಧಿಕಾರಿಗಳು..

-ಸಂಜೀವ ಪಾಂಡ್ರೆ, ಗದಗ

Published On - 3:51 pm, Thu, 10 December 20