
ಬೆಳಗಾವಿ: ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ರೆ ಆತನ ಸಂಬಂಧಿಕರು ದುಃಖದಲ್ಲಿ ಎರಡ್ಮೂರು ದಿನ ಅತ್ತು ನಾಲ್ಕನೇ ದಿನಕ್ಕೆ ಸುಮ್ಮನಾಗುತ್ತಾರೆ. ಆದರೆ ಇಲ್ಲಿ ಎರಡು ಮೂಕಜೀವಿಗಳು ತನ್ನ ಮಾಲೀಕನ ಅಕಾಲಿಕ ನಿಧನದ ಬಳಿಕ ಊಟ ನೀರು ತೊರೆದು ಕೂತಿದ್ದಾರೆ. ಮನೆ ಮಾಲೀಕ ತೀರಿ ಹೋಗಿ 8 ದಿನ ಕಳೆದರೂ ಸಹ ತುತ್ತು ಅನ್ನವನ್ನು ಮುಟ್ಟದೆ ಮೂಕರೋಧನೆ ಮಾಡುತ್ತಿವೆ.
ಆದ್ರೆ ಕಳೆದ ಎಂಟು ದಿನಗಳ ಹಿಂದೆ ಶಂಕರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಯಜಮಾನನ ಸಾವಿನಿಂದ ಶ್ವಾನ ಹಾಗೂ ಕೋತಿ ಶೋಕಸಾಗರದಲ್ಲಿ ಮುಳುಗಿವೆ. 8 ದಿನಗಳಿಂದ ಆಹಾರ ಸೇವಿಸದೆ ಯಜಮಾನ ಬಂದೇ ಬರ್ತಾನೆ ಅಂತಾ ಕಾಯುತ್ತಿವೆ.
ಶಂಕರಪ್ಪ ಎಲ್ಲೇ ಹೋದರೂ ತಮ್ಮ ಜೊತೆಗೆ ಬರುತ್ತಿದ್ದ ಕಡ್ಡಿ ಹಾಗೂ ರಾಮುವನ್ನು ತುಂಬಾ ಪ್ರೀತಿಯಿಂದ ಸಾಕಿದ್ರು. ತಾನು ಮಲಗುವ ಕೋಣೆಯೊಳಗೂ ಸಹ ಬಿಟ್ಟುಕೊಳ್ಳುತ್ತಿದ್ದ ಶಂಕರಪ್ಪನಿಗೆ ಅವುಗಳು ನಿಜವಾದ ಸ್ನೇಹಿತರಾಗಿದ್ವು. ಅಷ್ಟೇ ಅಲ್ಲ, ಶಂಕರಪ್ಪ ತನ್ನ ಕಿರಾಣಿ ಅಂಗಡಿ ಮುಂಭಾಗದಲ್ಲೂ ಮೂರ್ನಾಲ್ಕು ಶ್ವಾನಗಳನ್ನ ಸಾಕಿದ್ರು. ಇದೀಗ ಶಂಕರಪ್ಪ ಕಣ್ಮುಚ್ಚಿದ ಬಳಿಕ ಅವರ ಸಾಕು ಪ್ರಾಣಿಗಳು ಊಟ ಸಹ ಮಾಡದೇ ಮೂಕವೇದನೆ ಅನುಭವಿಸ್ತಿವೆ.
ಮನುಷ್ಯ ತೀರಿ ಹೋದ ಮೂರೇ ದಿನಕ್ಕೆ ಹಾಲುತುಪ್ಪ ಬಿಟ್ಟು ಕೈತೊಳೆದುಕೊಳ್ಳುವ ಮನುಷ್ಯ ಸಂಬಂಧಗಳ ಮಧ್ಯೆ ಈ ಶ್ವಾನ ಹಾಗೂ ಕೋತಿ ಪಡುತ್ತಿರುವ ನೋವು, ತೋರುತ್ತಿರುವ ಸ್ವಾಮಿನಿಷ್ಠೆ ಎಂಥ ಕಲ್ಲುಹೃದಯವನ್ನು ಸಹ ಕರಗಿಸಿ ಬಿಡುತ್ತದೆ. -ಸಹದೇವ ಮಾನೆ