ಫೇಸ್ಬುಕ್ನಲ್ಲಿ ನಕಲಿ ಅಕೌಂಟ್ ತೆರೆದು ಹಣ ದೋಚುತ್ತಿದ್ದ ನಕಲಿ ಪೊಲೀಸ್ ಕಮಿಷನರ್ ಅಂದರ್, ಯಾವೂರಲ್ಲಿ?
ಅದು ಬೇರೆ ಸುಂದರಿಯರ ಫೋಟೋ. ಇಂತಹ ಅಕೌಂಟ್ನಿಂದ ರಿಕ್ವೆಸ್ಟ್ ಬಂದ್ರೆ ಯಾರು ತಾನೆ ಆಕ್ಸೆಪ್ಟ್ ಮಾಡಲ್ಲ ಹೇಳಿ..? ಈ ದೌರ್ಬಲ್ಯವನ್ನೇ ಅಸ್ತ್ರವಾಗಿಸಿಕೊಂಡಿದ್ದ ಹುಡುಗರು ಸಾಕಷ್ಟು ಹಣ ವಸೂಲು ಮಾಡಿದ್ದರು.
ಮಂಗಳೂರು: ಅವ್ರು ತಮಗೆ ಬೇಕಾದಾಗ ಬೆಂಗಳೂರು ಪೊಲೀಸ್ ಕಮಿಷನರ್ ಆಗ್ತಾರೆ. ಮಂಗಳೂರು ಕಮಿಷನರ್ ಆಗ್ತಾರೆ. ಇನ್ನು ಡಿಸಿಪಿ, ಇನ್ಸ್ಪೆಕ್ಟರ್ಗಳು ಕೂಡ ಆಗ್ತಾರೆ. ಅವರಿಬ್ಬರೂ 20ರ ಹರೆಯದ ಯುವಕರು. ಸರಿಯಾಗಿ ಮೀಸೆ ಚಿಗುರದ ವಯಸ್ಸನಲ್ಲಿ ಮಾಡಿದ್ದ ಹಣ ಮಾಡಲು ಅಡ್ಡದಾರಿ ಹಿಡಿದಿದ್ರು. ಅದು ಹೇಗೆ ಅಂತೀರ..?
ಯಾವುದೋ ಫೇಕ್ ನೇಮ್ನಲ್ಲಿ ಫೇಸ್ಬುಕ್ ಅಕೌಂಟ್. ಅದು ಬೇರೆ ಸುಂದರಿಯರ ಫೋಟೋ. ಇಂತಹ ಅಕೌಂಟ್ನಿಂದ ರಿಕ್ವೆಸ್ಟ್ ಬಂದ್ರೆ ಯಾರು ತಾನೆ ಆಕ್ಸೆಪ್ಟ್ ಮಾಡಲ್ಲ ಹೇಳಿ..? ಪಡ್ಡೆ ಹುಡುಗರೇ ಆಗಿರಲಿ, ಇಲ್ಲ ಹಣ್ಣು ಹಣ್ಣು ಮುದುಕರೇ ಇರಲಿ. ವಯಸ್ಸಾದ ಉದ್ಯಮಿಗಳೇ ಆಗಿರಲಿ. ಈ ಅಕೌಂಟ್ನಿಂದ ಎಲ್ಲರನ್ನೂ ಟಾರ್ಗೆಟ್ ಮಾಡಿ ರಿಕ್ವೆಸ್ಟ್ ಕಳುಹಿಸ್ತಿದ್ರು. ಆದ್ರೆ ಅಸಲಿಗೆ ಇದು ರಿಯಲ್ ಅಕೌಂಟ್ ಅಲ್ಲವೇ ಅಲ್ಲ ಬದಲಾಗಿ ಒಂದು ಫೇಕ್ ಅಕೌಂಟ್.
20 ವರ್ಷದ ಹರೆಯದ ಯುವಕರಿಂದ ಹಣಕ್ಕಾಗಿ ಬ್ಲಾಕ್ ಮೇಲ್..! ಬೆಂಗಳೂರು ನಿವಾಸಿಗಳಾದ ಗೋಕಲ್ ರಾಜ್ ಹಾಗೂ ಪವನ್ ಫೇಕ್ ಫೇಸ್ಬುಕ್ ಅಕೌಂಟ್ ಸೇರಿದಂತೆ ವಿವಿಧ ಫೇಕ್ ಐಡಿ ಕ್ರಿಯೇಟ್ ಮಾಡುತ್ತಿದ್ದರು. ಚಂದದ ಯುವತಿಯರ ಫೋಟೊ ಜೊತೆ ಆದೇ ಯುವತಿಯ ಬೆತ್ತಲೆ ಫೋಟೊ ಸಂಗ್ರಹ ಮಾಡ್ತಿದ್ರು. ಇನ್ನು ಈಕೆ ಸೌಂದರ್ಯಕ್ಕೆ ಸೋತು ರಿಕ್ವೆಸ್ಟ್ ಆಕ್ಸೆಪ್ಟ್ ಮಾಡಿದ್ರೆ ಮಸೇಜ್ ಕೂಡ ಬರ್ತಿತ್ತು. ಬಳಿಕ ಲವಿಡವಿ ಶುರುವಾಗಿ ಬೆತ್ತಲೆ ಫೋಟೋ ಎಕ್ಸ್ ಚೇಂಜ್ವರೆಗೂ ಹೋಗ್ತಿತ್ತು. ಬೆತ್ತಲೆ ಫೋಟೊ ಇಟ್ಕೊಂಡು ಬ್ಲಾಕ್ ಮೇಲ್ ಮಾಡೋದು ಇವ್ರ ಉದ್ದೇಶವಾಗಿರ್ತಿತ್ತು.
ಹೀಗೆ ಮಂಗಳೂರಿನ ಉದ್ಯಮಿಯೊಬ್ಬರಿಗೆ ಸಾಕ್ಷಿರಾಜ್ ಹೆಸರಲ್ಲಿ ಮೆಸೇಜ್ ಮಾಡಿದ್ದಾರೆ. ಬೆತ್ತಲೆ ಫೋಟೊ ಕಳುಹಿಸಿ ಉದ್ಯಮಿ ಬೆತ್ತಲೆ ಫೋಟೊ ಸೆಂಡ್ ಮಾಡಿಸಿಕೊಂಡಿದ್ದಾರೆ. ಇನ್ನು ಉದ್ಯಮಿಗೆ ಮಂಗಳೂರು ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಅಂತ ಕರೆ ಮಾಡಿದ್ದಾರೆ. ಬೆತ್ತಲೆ ಫೋಟೊ ಕಳುಹಿಸ್ತೀಯಾ ಅಂತಾ ಗದರಿಸಿದ್ದಾರೆ. ಆಕೆ ಕೇಳಿದ ಹಣ ಕೊಟ್ಟು ಸುಮ್ಮನಾಗು ಇಲ್ಲಾಂದ್ರೆ ಅರೆಸ್ಟ್ ಮಾಡುತ್ತೇವೆ ಅಂತಾ ಬೆದರಿಸಿದ್ದಾರೆ. ಉದ್ಯಮಿ ಅದನ್ನು ನಂಬಿ ಹಣ ಕೊಟ್ಟಿದ್ದಾನೆ. ಮತ್ತೆ ಮತ್ತೆ ಹಣಕ್ಕೆ ಡಿಮ್ಯಾಂಡ್ ಮಾಡಿದಾಗ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಆಗಲೇ ಈ ನಕಲಿ ಕಮಿಷನರ್ ಬಣ್ಣ ಬಯಲಾಗಿದೆ.
ಈ ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗದ ಪೊಲೀಸರೂ ತನಿಖೆ ನಡೆಸಿದ್ದಾರೆ. ಪೊಲೀಸರು ಟ್ರಾಪ್ ಮಾಡಿ ಇಬ್ಬರನ್ನು ಸದ್ಯ ಬಂಧಿಸಿದ್ದಾರೆ. ಇನ್ನು ಇವರು ಹೀಗೆ ಸಾಕಷ್ಟು ಜನರಿಗೆ ವಂಚನೆ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಉದ್ಯಮಿಗಳು, ರಾಜಕಾರಣಿಗಳ ಮಕ್ಕಳು ಸೇರಿದಂತೆ ದೊಡ್ಡದೊಡ್ಡ ಕುಳಗಳಿಗೆ ಈ ರೀತಿ ಫೋಟೊ ಎಕ್ಸ್ ಚೇಂಜ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ಹಲವರಿಗೆ ಬೆಂಗಳೂರು ಪೊಲೀಸ್ ಕಮಿಷನರ್, ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ಅಂತಾ ಕರೆ ಮಾಡಿ ಹಣ ಪೀಕಿದ್ದಾರೆ ಎನ್ನಲಾಗಿದೆ.
Published On - 12:29 pm, Thu, 26 November 20