ಬೆಂಗಳೂರು: ಕುಮಾರಸ್ವಾಮಿ ಜತೆಯಲ್ಲಿದ್ದುಕೊಂಡೇ ಕಾಂಗ್ರೆಸ್‌ನವರು ವಿಷ ಕೊಟ್ರು. ಮೈತ್ರಿ ಸರ್ಕಾರ ಬಿದ್ದಿದ್ದೇ ಕಾಂಗ್ರೆಸ್ ಕಾರಣದಿಂದ. ಇದು ಅವರ ಆಪರೇಷನ್ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
2006-08ರ ಅವಧಿಯಲ್ಲಿ ಬಿಜೆಪಿ ಜತೆ ಮೈತ್ರಿ ಸರ್ಕಾರವಿದ್ದಾಗ ಹೆಚ್‌ಡಿಕೆ ವರ್ಚಸ್ಸು ಹೆಚ್ಚಿತ್ತು. ಆದ್ರೆ, ಕಾಂಗ್ರೆಸ್ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ವೇಳೆ ಕುಮಾರಸ್ವಾಮಿಗೆ ಕಿರುಕುಳ ಕೊಟ್ಟಿದ್ದಾರೆ. ಕಾಂಗ್ರೆಸ್ ನಂಬಿದ್ರೆ ಕಥೆ ಅಷ್ಟೇ.. ಗೋವಿಂದಾ ಗೋವಿಂದಾ. ಇದನ್ನು ನಾನು ಹೇಳ್ತಿಲ್ಲ, ವಿರೋಧ ಪಕ್ಷದವರೇ ಹೇಳ್ತಿದ್ದಾರೆ ಎಂದು ಆರ್.ಅಶೋಕ್ ಲೇವಡಿ ಮಾಡಿದರು.
ಇದಕ್ಕೆ ಕುಮ್ಮಕ್ಕು ನೀಡುವಂತೆ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ, ಕುಮಾರಸ್ವಾಮಿ ಪರಸ್ಪರ ವಾಗ್ದಾಳಿ ವಿಚಾರವಾಗಿ ಮಾತನಾಡಿದ್ದಾರೆ. ಇಬ್ಬರು ನಾಯಕರು ಕೊನೆಗೂ ಸತ್ಯವನ್ನು ಒಪ್ಪಿಕೊಂಡಿದ್ದಾರೆ.ಇನ್ನು ಮುಂದೆಯಾದರೂ ಕುಮಾರಸ್ವಾಮಿ ಕಾಂಗ್ರೆಸ್‌ನಿಂದ ದೂರವಿದ್ದರೆ ಮರ್ಯಾದೆ ಉಳಿಯುತ್ತೆ ಎಂದು ಹೇಳಿದರು.
ಜೆಡಿಎಸ್, ಕಾಂಗ್ರೇಸ್ ಸಮ್ಮಿಶ್ರ ಸರ್ಕಾರ ಜನ ವಿರೋಧಿಯಾಗಿತ್ತು. ಎಚ್ಡಿಕೆ ಒಂದು ವರ್ಷ ಸಿಎಂ ಆಗಿರಲಿ ಎಂದು ಹಣೆ ಬರಹದಲ್ಲಿತ್ತು. ಆದ್ರೆ ವಿಧಿಬರಹ. ಯಾರೂ ಏನು ಮಾಡಲು ಆಗಲ್ಲ. ಬಿಎಸ್ವೈ ಪೂರ್ಣಾವಧಿ ಸಿಎಂ ಎಂದು ಅವರ ಹಣೆ ಬರಹದಲ್ಲಿ ಬರೆದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎಷ್ಟು ಬಾರಿ ಮದುವೆ ಹಾಗೂ ಎಷ್ಟು ಸಲ ಡೈವರ್ಸ್ ಆಗ್ತಾರೋ ಗೊತ್ತಿಲ್ಲ. ಇನ್ನಾದರೂ ಕುಮಾರಸ್ವಾಮಿ ಯಾವ ಕಡೆ ಬೇಕಾದ್ರು ಮುಖ ಮಾಡಲಿ.ಆದರೆ, ಕಾಂಗ್ರೆಸ್‌ನಿಂದ ದೂರ ಇರಲಿ ಎಂದು ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಇನ್ನು, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಸಂಪುಟ ವಿಸ್ತರಣೆಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜತೆ ಸಿಎಂ ಬಿ.ಎಸ್. ಯಡಿಯೂರಪ್ಪ ಚರ್ಚಿಸಲಿದ್ದಾರೆ. ಯಾವಾಗ ಸಂಪುಟ ವಿಸ್ತರಣೆ ಮಾಡಬೇಕೆಂದು ಸಿಎಂ ನಿರ್ಧರಿಸುತ್ತಾರೆ ಎಂದು ಹೇಳಿದರು.