Rahul Gandhi: ಸಮುದ್ರಕ್ಕೆ ರಾಹುಲ್​ ಗಾಂಧಿ ಜಿಗಿದಿದ್ದಾಗಲೀ, ಘಟನೆಯ ಚಿತ್ರೀಕರಣವಾಗಲೀ ಪೂರ್ವನಿಯೋಜಿತವಲ್ಲ

Rahul Gandhi: ರಾಹುಲ್​ ಗಾಂಧಿ ನೀರಿಗೆ ಜಿಗಿದ ಬಳಿಕವೇ ಅವರೊಬ್ಬ ಅದ್ಭುತ ಈಜುಗಾರ ಎನ್ನುವುದು ಗೊತ್ತಾಯಿತು. ತಣ್ಣಗಿನ ಸಮುದ್ರದ ನೀರಿಗೆ ಯಾವುದೇ ಲೈಫ್​ ಜಾಕೆಟ್​ ಧರಿಸದೇ ಜಿಗಿಯಲು ಆತ್ಮವಿಶ್ವಾಸ ಬೇಕು. ನುರಿತ ಈಜುಗಾರರು ಮಾತ್ರ ಅಷ್ಟು ಧೈರ್ಯವಾಗಿ ಸಮುದ್ರಕ್ಕೆ ಧುಮುಕಬಲ್ಲರು.

Rahul Gandhi: ಸಮುದ್ರಕ್ಕೆ ರಾಹುಲ್​ ಗಾಂಧಿ ಜಿಗಿದಿದ್ದಾಗಲೀ, ಘಟನೆಯ ಚಿತ್ರೀಕರಣವಾಗಲೀ ಪೂರ್ವನಿಯೋಜಿತವಲ್ಲ
ರಾಹುಲ್​ ಗಾಂಧಿ ಮತ್ತು ವಿಡಿಯೋ ಚಿತ್ರೀಕರಿಸಿದ ಸೆಬಿನ್​ ಸಿರಿಯಾಕ್​
Skanda

| Edited By: sadhu srinath

Mar 01, 2021 | 1:28 PM

ಕೊಚ್ಚಿ: ಚುನಾವಣಾ ಪ್ರಚಾರದ ನಿಮಿತ್ತ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕಳೆದ ವಾರ ಕೇರಳದ ಕೊಲ್ಲಮ್​ನಲ್ಲಿ ಮೀನುಗಾರರ ಜೊತೆ ಕಾರ್ಯಕ್ರಮ ನಡೆಸಿದ್ದರು. ಸ್ಥಳೀಯ ಮೀನುಗಾರ ಸಮುದಾಯದ ಜನರ ಬದುಕು-ಬವಣೆಯನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಅವರೊಂದಿಗೆ ಒಡನಾಡಿದ ರಾಹುಲ್​ ಗಾಂಧಿ ನಂತರ ಮೀನುಗಾರರ ಜೊತೆ ಸಮುದ್ರಕ್ಕೆ ತೆರಳಿದ್ದಾಗ ಏಕಾಏಕಿ ನೀರಿಗೆ ಜಿಗಿದು ಅಚ್ಚರಿ ಮೂಡಿಸಿದ್ದರು. ರಾಹುಲ್​ ಗಾಂಧಿಯ ಈ ನಡೆಯ ಬಗ್ಗೆ ಟೀಕಿಸಿದ್ದ ಪ್ರತಿಪಕ್ಷಗಳು, ಮೀನುಗಾರರನ್ನು ಓಲೈಸಲು ಮಾಡುತ್ತಿರುವ ತಂತ್ರ ಎಂಬರ್ಥದಲ್ಲಿ ಜರಿದಿದ್ದವು. ಆದರೆ, ಈ ಘಟನೆಯ ಕುರಿತಾಗಿ ಇದೀಗ ಹೊರಬಂದಿರುವ ಮಾಹಿತಿಯ ಪ್ರಕಾರ ರಾಹುಲ್​ ಸಮುದ್ರಕ್ಕೆ ಜಿಗಿದಿರುವುದು ಪೂರ್ವ ನಿಯೋಜಿತವಲ್ಲ ಎಂದು ತಿಳಿದುಬಂದಿದೆ.

ಸದರಿ ಘಟನೆಯನ್ನು ಚಿತ್ರೀಕರಿಸಿರುವ ಸೆಬಿನ್​ ಸಿರಿಯಾಕ್ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಾಹುಲ್​ ಗಾಂಧಿ ಸಮುದ್ರಕ್ಕೆ ಜಿಗಿಯುವ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆ ಘಟನೆ ನಡೆದ ಕ್ಷಣದಲ್ಲಿ ಅಲ್ಲಿದ್ದವರಿಗೆಲ್ಲಾ ಅಚ್ಚರಿಯಾಯಿತು. ತಾವು ಧರಿಸಿದ್ದ ಮಾಸ್ಕ್​ ಹಾಗೂ ತಮ್ಮ ಮೊಬೈಲನ್ನು ಪಕ್ಕದಲ್ಲಿದ್ದ ಮೀನುಗಾರರೊಬ್ಬರ ಕೈಗೆ ನೀಡಿದ ರಾಹುಲ್​ ಗಾಂಧಿ, ಏಕಾಏಕಿ ನೀರಿಗೆ ಜಿಗಿದು ಬಿಟ್ಟರು ಎಂದು ಹೇಳಿದ್ದಾರೆ.

ರಾಹುಲ್​ ಗಾಂಧಿ ನೀರಿಗೆ ಜಿಗಿದ ಬಳಿಕವೇ ಅವರೊಬ್ಬ ಅದ್ಭುತ ಈಜುಗಾರ ಎನ್ನುವುದು ಗೊತ್ತಾಯಿತು. ತಣ್ಣಗಿನ ಸಮುದ್ರದ ನೀರಿಗೆ ಯಾವುದೇ ಲೈಫ್​ ಜಾಕೆಟ್​ ಧರಿಸದೇ ಜಿಗಿಯಲು ಆತ್ಮವಿಶ್ವಾಸ ಬೇಕು. ನುರಿತ ಈಜುಗಾರರು ಮಾತ್ರ ಅಷ್ಟು ಧೈರ್ಯವಾಗಿ ಸಮುದ್ರಕ್ಕೆ ಧುಮುಕಬಲ್ಲರು ಎಂದು ಹೇಳಿಕೊಂಡಿದ್ದಾರೆ. ನಾನು ಅವರೊಂದಿಗೆ ಕೇವಲ ಭಾಷಾಂತರ ಕಾರ್ಯಕ್ಕೆ ಸಹಾಯ ಮಾಡಲು ಹೋಗಿದ್ದೆ. ಅವರು ನನ್ನಿಂದ ಯಾವುದೇ ವಿಡಿಯೋ ಬಯಸಿರಲಿಲ್ಲ. ಆದರೆ, ಇದು ನನ್ನ ಅಚ್ಚುಮೆಚ್ಚಿನ ಕೆಲಸವಾದ್ದರಿಂದ ವಿಡಿಯೋ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಅವರು ಅಚಾನಕ್​ ಆಗಿ ಸಮುದ್ರಕ್ಕೆ ಜಿಗಿದಿದ್ದು ರೆಕಾರ್ಡ್​ ಆಗಿದೆ ಎಂದಿದ್ದಾರೆ.

ಈ ದೃಶ್ಯಾವಳಿಗಳನ್ನು ಚಿತ್ರೀಕರಿಸಿರುವ ಸೆಬಿನ್​ ಸಿರಿಯಾಕ್ ಕೇರಳದ ಪ್ರಸಿದ್ಧ ವಿಡಿಯೋ ಬ್ಲಾಗರ್​ ಆಗಿದ್ದು, 10 ಲಕ್ಷಕ್ಕೂ ಹೆಚ್ಚು ಜನ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಹಿಂಬಾಲಿಸುತ್ತಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, ನೀರಿಗೆ ಜಿಗಿದ ನಂತರ ಒದ್ದೆ ಬಟ್ಟೆಯಲ್ಲಿ ಎದ್ದು ಕಾಣುತ್ತಿದ್ದ ರಾಹುಲ್​ ಗಾಂಧಿಯವರ ಸಿಕ್ಸ್​​ ಪ್ಯಾಕ್ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ಆಗುತ್ತಿದೆ.

ಮೀನುಗಾರಿಕೆಗೆ ಸಂಬಂಧಪಟ್ಟ ಇಲಾಖೆ ರಚಿಸುವಾಗ ರಾಹುಲ್​ ರಜೆಯಲ್ಲಿದ್ದರು ಇನ್ನೊಂದೆಡೆ, ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ರಾಹುಲ್​ ಗಾಂಧಿಗೆ ಗೃಹ ಸಚಿವ ಅಮಿತ್​ ಶಾ ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರ ಇನ್ನೂ ಮೀನುಗಾರಿಕೆ ಇಲಾಖೆಯನ್ನೇಕೆ ಮಾಡಿಲ್ಲ ಎಂದು ಕೇಳಿದ್ದ ರಾಹುಲ್​ಗೆ ಪ್ರತ್ಯುತ್ತರ ನೀಡಿರುವ ಅಮಿತ್​ ಶಾ, ನಾವು 2019ರಲ್ಲೇ ಮೀನುಗಾರಿಕೆ ಇಲಾಖೆಯನ್ನು ಮಾಡಿದ್ದೇವೆ. ಆಗ ರಾಹುಲ್​ ರಜೆಯ ಮೇಲೆ ಬೇರೆ ಕಡೆಗೆ ತೆರಳಿದ್ದರು ಅನ್ನಿಸುತ್ತೆ. ಸರ್ಕಾರದ ಇಲಾಖೆಯ ಬಗ್ಗೆಯೇ ತಿಳಿಯದ ರಾಜಕಾರಣಿಯನ್ನು ಜನನಾಯಕ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ ಎಂದು ಚಾಟಿ ಬೀಸಿದ್ದಾರೆ. ಆದರೆ, ಆ ಬಗ್ಗೆ ಸ್ಪಷ್ಟನೆ ನೀಡಿರುವ ರಾಹುಲ್​ ಗಾಂಧಿ, ಯಾವುದೋ ಬೇರೆ ಇಲಾಖೆಯ ಭಾಗವಾಗಿ ಮೀನುಗಾರಿಕೆ ಬರುವುದು ಬೇಡ, ಅದಕ್ಕೊಂದು ಪ್ರತ್ಯೇಕ ಇಲಾಖೆಯೇ ಬೇಕು ಎಂದು ತಿಳಿಸಿದ್ಧಾರೆ.

ಇದನ್ನೂ ಓದಿ:

ಸಿಕ್ಸ್​​ ಪ್ಯಾಕ್​​ನಲ್ಲಿ ಮಿಂಚಿದ ರಾಹುಲ್​ ಗಾಂಧಿ; ಫಿಟ್​ನೆಸ್​ ಟಿಪ್ಸ್​ ಕೇಳಿದ ಸೆಲೆಬ್ರಿಟಿಗಳು

ಕೇರಳದಲ್ಲಿ ರಾಹುಲ್ ಗಾಂಧಿ; ಮೀನುಗಾರರ ಒಡನಾಟ, ಮತಬೇಟೆಯ ಉತ್ಸಾಹ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada