ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಆಕ್ಸ್​ಫರ್ಡ್​ ಪ್ರಕರಣ: ಉಡುಪಿ ಮೂಲದ ರಶ್ಮಿ ಬಗ್ಗೆ ಸಹಾನುಭೂತಿಯಿದೆ ಎಂದ ವಿದೇಶಾಂಗ ಸಚಿವ ಜೈಶಂಕರ್

|

Updated on: Mar 15, 2021 | 3:20 PM

ಕರ್ನಾಟಕದ ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿ ಸಮಂತ್​ ಅವರ ವಿರುದ್ಧ ಬ್ರಿಟನ್​ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ಅಪಪ್ರಚಾರ ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ಬಿಜೆಪಿ ನಾಯಕಿ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು.

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಆಕ್ಸ್​ಫರ್ಡ್​ ಪ್ರಕರಣ: ಉಡುಪಿ ಮೂಲದ ರಶ್ಮಿ ಬಗ್ಗೆ ಸಹಾನುಭೂತಿಯಿದೆ ಎಂದ ವಿದೇಶಾಂಗ ಸಚಿವ ಜೈಶಂಕರ್
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಮತ್ತು ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿ
Follow us on

ದೆಹಲಿ: ಬ್ರಿಟನ್​ನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ಕರ್ನಾಟಕ ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿ ಸಮಂತ್ ರಾಜೀನಾಮೆ ನೀಡಲು ಕಾರಣವಾದ ಬೆಳವಣಿಗೆಗಳನ್ನು ಭಾರತ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಗತ್ಯಬಿದ್ದಾಗ ಭಾರತವು ಅಲ್ಲಿನ ಸರ್ಕಾರದೊಂದಿಗೆ ಚರ್ಚೆ ನಡೆಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಸೋಮವಾರ ರಾಜ್ಯಸಭೆಯಲ್ಲಿ ಹೇಳಿದರು. ಮಹಾತ್ಮಾಗಾಂಧಿಯ ತವರಾಗಿರುವ ಭಾರತವು ಜನಾಂಗೀಯವಾದ ಅಥವಾ ನಿಂದನೆಗಳ ಬಗ್ಗೆ ಸುಮ್ಮನಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿ ಸಮಂತ್​ ಅವರ ವಿರುದ್ಧ ಬ್ರಿಟನ್​ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ಅಪಪ್ರಚಾರ ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ಬಿಜೆಪಿ ನಾಯಕಿ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ರಶ್ಮಿ ಅವರ ಕೆಲ ಹಳೆಯ ಹೇಳಿಕೆಗಳು ಜನಾಂಗೀಯ ನಿಂದನೆ ಮತ್ತು ಸಂವೇದನಾರಹಿತ ಛಾಯೆ ಹೊಂದಿದ್ದವು ಎಂದು ಹಲವರು ಆರೋಪಿಸಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು.

ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಜೈಶಂಕರ್, ಸದನದ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಮಹಾತ್ಮಾಗಾಂಧಿ ನೆಲವಾದ ಭಾರತವು ಜನಾಂಗೀಯವಾದ ಎಲ್ಲಿಯೇ ಇದ್ದರೂ, ಜನಾಂಗೀಯ ನಿಂದನೆ ಯಾವುದೇ ಸ್ವರೂಪದಲ್ಲಿ ನಡೆದರೂ ಪ್ರತಿಕ್ರಿಯಿಸದೇ ಇರಲು ಆಗುವುದಿಲ್ಲ ಎಂದು ನುಡಿದರು. ಬ್ರಿಟನ್ ನಮಗೆ ಮಿತ್ರರಾಷ್ಟ್ರ. ಆ ದೇಶದೊಂದಿಗೆ ಯಾವುದೇ ವಿಷಯದಲ್ಲಿ ವ್ಯವಹರಿಸುವಾಗ ಅತ್ಯಂತ ಎಚ್ಚರಿಕೆಯಿಂದ ಸಾಧಕ-ಬಾಧಕ ಗಮನಿಸಿ ಮುಂದಿನ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಅಗತ್ಯಬಿದ್ದಾಗ ಇಂಥ ವಿಷಯಗಳ ಬಗ್ಗೆ ಆ ದೇಶದ ಉನ್ನತ ವಲಯದಲ್ಲಿ ಚರ್ಚೆ ನಡೆಸುತ್ತೇವೆ. ಇಂಥ ಬೆಳವಣಿಗೆಗಳನ್ನು ಅತಿಸೂಕ್ಷ್ಮವಾಗಿ ಗಮನಿಸುತ್ತಿರುತ್ತೇವೆ. ಅಸಹನೆ ಮತ್ತು ಜನಾಂಗೀಯವಾದದ ವಿರುದ್ಧ ಹಲವು ಹೋರಾಟಗಳನ್ನು ನಾವು ಜಯಿಸಿದ್ದೇವೆ ಎಂದು ತಿಳಿಸಿದರು.

ಕರ್ನಾಟಕದ ಉಡುಪಿ ಮೂಲದ 22ರ ಹರೆಯದ ಯುವತಿ ಸಮಂತ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮೊದಲ ಭಾರತೀಯ ಮೂಲದ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರ ಹಿಂದಿನ ಹೇಳಿಕೆಗಳಲ್ಲಿರುವ ಜನಾಂಗೀಯ ನಿಂದನೆಯ ಸ್ವರೂಪದ ಬಗ್ಗೆ ಹಲವರು ಪ್ರಸ್ತಾಪಿಸಿದ್ದರು. ‘ನನ್ನ ಹಿಂದಿನ ಹೇಳಿಕೆಗಳು ಮತ್ತು ವರ್ತನೆಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು ರಶ್ಮಿ ಹೇಳಿಕೆ ನೀಡಿದ್ದರು. ಆದರೆ ದೊಡ್ಡಸಂಖ್ಯೆಯ ವಿದ್ಯಾರ್ಥಿಗಳು ಅವರ ಮೇಲಿನ ವಿಶ್ವಾಸ ಕಳೆದುಕೊಂಡ ಕಾರಣ, ಅನಿವಾರ್ಯವಾಗಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು.

‘ನನ್ನ ವಿರುದ್ಧ ಅನಗತ್ಯವಾಗಿ ಅಪಪ್ರಚಾರ ನಡೆಯಿತು. ಇಂಟರ್ನೆಟ್​ ಚತುರರು ನನ್ನ ಕುಟುಂಬವನ್ನೂ ಈ ವಿವಾದಕ್ಕೆ ಎಳೆತಂದರು. ಈ ಕೃತ್ಯದಲ್ಲಿ ಓರ್ವ ಬೋಧಕ ಸಿಬ್ಬಂದಿ ಸಹ ಶಾಮೀಲಾಗಿದ್ದಾರೆ. ನಾನು ಅನಿವಾರ್ಯವಾಗಿ ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣ ಮಾಡಿದರು’ ಎಂದು ರಶ್ಮಿ ಇತ್ತೀಚೆಗೆ ಅಲವತ್ತುಕೊಂಡಿದ್ದರು.

ಒತ್ತಾಯಕ್ಕೆ ಮಣಿದು ರಾಜೀನಾಮೆ ನೀಡಿದ್ದ ರಶ್ಮಿ
ಲಂಡನ್ನಿನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (Oxford Students Union) ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಉಡುಪಿಯ ಮಾಹೆ ವಿಶ್ವವಿದ್ಯಾಲಯದ ಎಂಐಟಿ ಹಳೆಯ ವಿದ್ಯಾರ್ಥಿನಿ ಎಂ.ಎಸ್. ರಶ್ಮಿ ಸಮಂತ್ ತಮ್ಮ ಸ್ಥಾನಕ್ಕೆ ಜನಾಂಗೀಯ ನಿಂದನೆಯ ಕಾರಣಕ್ಕಾಗಿ ರಾಜೀನಾಮೆ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮುನ್ನ ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದ ಕೆಲ ಪೋಸ್ಟ್​ಗಳು ಅವರಿಗೆ ಮುಳುವಾದವು. ಪೂರ್ವ ಏಷ್ಯಾ, ಯಹೂದಿ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ರಶ್ಮಿ ಸಮಂತ್ ಅವಹೇಳನ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಲಂಡನ್ನಿನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆದ್ದು, ಆ ಮೂಲಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದರು. ಚುನಾವಣೆಯಲ್ಲಿ ಒಟ್ಟು 4 ಮಂದಿ ಸ್ಪರ್ಧಿಸಿದ್ದರೂ, ರಶ್ಮಿ ಅವರು ಒಟ್ಟು 3708 ಮತಗಳಲ್ಲಿ 1966 (ಶೇ 53) ಮತಗಳನ್ನು ಗಳಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಅವರು ಗಳಿಸಿದ ಒಟ್ಟು ಮತಗಳು ಇತರ ಮೂರು ಮಂದಿ ಗಳಿಸಿದ ಒಟ್ಟು ಮತಗಳಿಗಿಂತಲೂ ಹೆಚ್ಚಾಗಿತ್ತು. ಆ ಮೂಲಕ ರಶ್ಮಿ ಇತಿಹಾಸ ಸೃಷ್ಟಿಸಿದ್ದರು.

ಮುಳುವಾದ ಪೋಸ್ಟ್ ಯಾವುದು?
2017ರಲ್ಲಿ ಅವರು ಮಾಡಿದ್ದ ಒಂದು ಪೋಸ್ಟ್ ಈ ಎಲ್ಲ ವಿವಾದಗಳಿಗೆ ಕಾರಣವಾಗಿದೆ. ಜರ್ಮನಿಯ ಬರ್ಲಿನ್​ನಲ್ಲಿಯ ‘ಬರ್ಲಿನ್ ಹೊಲೋಕಾಸ್ಟ್ ಮೆಮೊರಿಯಲ್’ ಎದುರು ತೆಗೆದುಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಅವರು, HOLLOWCASTS ಪದವನ್ನು ಒಡೆದು HOLLOW ಮತ್ತು CASTS ಪದಗಳನ್ನು ಪ್ರತ್ಯೇಕವಾಗಿ ಬರೆದುಕೊಂಡಿದ್ದರು. ಇದು ಸಂವೇದನಾರಹಿತ ಪೋಸ್ಟ್​ ಎಂದು ದೂರಲಾಗಿತ್ತು. ಇನ್ನೊಂದು ಪೋಸ್ಟ್​ನಲ್ಲಿ ಮಲೇಷ್ಯಾದ ಬೌದ್ಧ ದೇಗುಲದ ಮುಂದಿನ ಅವರ ಚಿತ್ರಕ್ಕೆ Ching Chang ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಚೀನಿ ಮೂಲದ ವಿದ್ಯಾರ್ಥಿಗಳಿಗೆ ಅವಹೇಳನಕಾರಿಯಾಗಿದೆ ಎಂದು ಆರೋಪ ಕೇಳಿಬಂದಿತ್ತು. ಈ ಪೋಸ್ಟ್​ಗಳೇ ಅವರ ಅಧ್ಯಕ್ಷ ಸ್ಥಾನವನ್ನೂ ಕಿತ್ತುಕೊಂಡವು.

ಇದನ್ನೂ ಓದಿ: ಲಂಡನ್ ಆಕ್ಸ್​ಫರ್ಡ್ ವಿದ್ಯಾರ್ಥಿ ಸಂಘಕ್ಕೆ ರಾಜೀನಾಮೆ ಸಲ್ಲಿಸಿದ ಉಡುಪಿ ಮೂಲದ ರಶ್ಮಿ ಸಾಮಂತ್! ಕಾರಣವೇನು?

ಇದನ್ನು ಓದಿ: ಲಂಡನ್: ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಉಡುಪಿ ಮೂಲದ ಮಹಿಳೆ

Published On - 3:19 pm, Mon, 15 March 21