ರಸ್ತೆ ದುರಸ್ತಿಗಾಗಿ ತನ್ನ ವೃದ್ಧಾಪ್ಯ ವೇತನವನ್ನೇ ದಾನ ಮಾಡಿದ ಹಿರಿ ಜೀವ, ಎಲ್ಲಿ?

  • TV9 Web Team
  • Published On - 15:11 PM, 9 Aug 2020
ರಸ್ತೆ ದುರಸ್ತಿಗಾಗಿ ತನ್ನ ವೃದ್ಧಾಪ್ಯ ವೇತನವನ್ನೇ ದಾನ ಮಾಡಿದ ಹಿರಿ ಜೀವ, ಎಲ್ಲಿ?

ಕೋಲಾರ: ನಗರದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ ಸಹ ಇನ್ನೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ನಗರಸಭೆ ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಈಗಾಗಲೇ ಅಮೃತ ಸಿಟಿ ಯೋಜನೆಯಡಿ ಒಳಚರಂಡಿ ಕಾಮಗಾರಿ ನಡೆಸಲು, ರಸ್ತೆಯನ್ನ ಎರಡೆರಡು ಬಾರಿ ತೋಡಲಾಗಿತ್ತು. ಇದೀಗ ಅಗೆದ ರಸ್ತೆಯನ್ನ ಸರಿಯಾಗಿ ನೆಲಸಮ ಮಾಡದೆ ರಸ್ತೆಯ ಮೇಲೆ ಹಳ್ಳ-ಕೊಳ್ಳಗಳು ಹುಟ್ಟಿಕೊಂಡಿದೆ. ಇದರಿಂದ, ಬಡವಾಣೆಯ ಜನರು ಅವ್ಯವಸ್ಥೆಯಿಂದ ಬೇಸತ್ತು, ತಾವೇ ರಸ್ತೆಗೆ ಕಾಯಕಲ್ಪ ಮಾಡಿಕೊಂಡಿದ್ದಾರೆ.

ನಮ್ಮ ಏರಿಯಾ ರಸ್ತೆಗೆ ನಮ್ಮದೇ ಶ್ರಮ
ಚೌಡೇಶ್ವರಿ ನಗರದಿಂದ ಎನ್.ಎಚ್-75 ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನ ಬಡಾವಣೆಯ ಜನರು ತಾವೇ ಮುಂದೆ ನಿಂತು ದುರಸ್ತಿ ಮಾಡಿದ್ದಾರೆ. ಈ ಸಮಸ್ಯೆಗಳ ಕುರಿತು ಈ ಹಿಂದೆ ಜನಪ್ರತಿನಿಧಿಗಳಿಗೆ ತಿಳಿಸಿದ್ರು ಅವರು ಸ್ಪಂದಿಸಿದ ಹಿನ್ನೆಲೆಯಲ್ಲಿ ಬಡಾವಣೆಯ ಯುವಕರು ತಮ್ಮ ಸಂಪಾದನೆಯ ಹಣವನ್ನ ಹಾಗೂ ಹಿರಿಯ ನಾಗರೀಕರು ತಮ್ಮ ಪಿಂಚಣಿ ಹಣವನ್ನ ವ್ಯಯಿಸಿ ರಸ್ತೆ ಅಭಿವೃದ್ಧಿ ಮಾಡಿದ್ದಾರೆ.

ಕೂಡಿಟ್ಟ ಪಿಂಚಣಿ ಹಣವನ್ನು ರಸ್ತೆಗಾಗಿ ನೀಡಿದರು!
ಅಚ್ಚರಿಯೆಂದರೆ, ಇದೇ ಏರಿಯಾದ ಮುನಿಯಪ್ಪ ಎಂಬುವ ವೃದ್ಧ ತಾವು ಸಂಗ್ರಹಿಸಿದ್ದ ವೃದ್ಧಾಪ್ಯ ವೇತನದ ಹಣವನ್ನು ರಸ್ತೆ ಕಾಮಗಾರಿಗೆ ನೀಡಿದ್ದಾರೆ. ಹಲವಾರು ಬಾರಿ ಇದೇ ರಸ್ತೆಯಲ್ಲಿ ಓಡಾಡುವಾಗ ಬಿದ್ದು ಗಾಯಗೊಂಡಿದ್ದ ಮುನಿಯಪ್ಪ ಇನ್ನು ಯಾವತ್ತೂ ತನ್ನ ಹಾಗೆ ಇತರರಿಗೆ ಸಮಸ್ಯೆ ಆಗಬಾರದೆಂದು ಈ ಮೂಲಕ ಉದಾರತೆ ತೋರಿದ್ದಾರೆ. ಕೊರೊನಾ ಸಂಕಷ್ಟದ ಮಧ್ಯೆ ತಾವು ಉಳಿಸಿದ್ದ ಹಣವನ್ನೆಲ್ಲಾ ಒಟ್ಟುಗೂಡಿಸಿ, ಜೆಸಿಬಿ ಯಂತ್ರದ ಮೂಲಕ ರಸ್ತೆಯನ್ನ ಸರಿ ಮಾಡಿಕೊಂಡಿದ್ದಾರೆ.

ವಿಶೇಷತೆ ಎಂದ್ರೆ ನಗರದ ಬಹುತೇಕ ರಸ್ತೆಗಳು ಹಳ್ಳಕೊಳ್ಳಗಳಿಂದ ಕೂಡಿದ್ದು ಈ ಮೂಲಕ ಅವುಗಳ ದುರಸ್ತಿ ಸಹ ಮಾಡಲಾಗಿದೆ. ಎಲ್ಲೆಡೆ ರಸ್ತೆಗಳು ಹಳ್ಳಕೊಳ್ಳಗಳಿಂದ ಕೂಡಿದ್ದ ಪರಿಣಾಮ ಸಾರ್ವಜನಿಕರು ನಿತ್ಯ ಪರದಾಡುವಂತಾಗಿತ್ತು. ಆದರೆ, ಇದೀಗ ತಾನು ಮಾಡಿದ್ದು ಉತ್ತಮ ಎಂಬ ಮಾತಿನಂತೆ ಅಧಿಕಾರಿಗಳ  ಪೊಳ್ಳು ಭರವಸೆಗೆ ಕಾಯದೆ ತಮ್ಮ ರಸ್ತೆಗಳನ್ನ ತಾವೇ ಸರಿಪಡಿಸಿಕೊಂಡಿದ್ದಾರೆ. -ರಾಜೇಂದ್ರಸಿಂಹ