ಸವರನ್ ಗೋಲ್ಡ್ ಬಾಂಡ್ ಸ್ಕೀಮ್: ಮಾರ್ಚ್ 1ರಿಂದ 5ರ ಮಧ್ಯೆ ಚಿನ್ನ ಖರೀದಿ, ಗ್ರಾಮ್​​ಗೆ ರೂ. 4662

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸವರನ್ ಗೋಲ್ಡ್ ಬಾಂಡ್ ಯೋಜನೆ 2020- 21- XIIನೇ ಸರಣಿಯನ್ನು ಮಾರ್ಚ್ 1, 2021ರಿಂದ ಮಾರ್ಚ್ 5, 2021ರ ಮಧ್ಯೆ ಸಬ್​ಸ್ಕ್ರಿಪ್ಷನ್​ಗೆ ಬಿಡುಗಡೆ ಮಾಡಿದೆ. ಪ್ರತಿ ಗ್ರಾಮ್​ಗೆ 4,662 ರೂಪಾಯಿ ನಿಗದಿ ಮಾಡಿದೆ.

ಸವರನ್ ಗೋಲ್ಡ್ ಬಾಂಡ್ ಸ್ಕೀಮ್: ಮಾರ್ಚ್ 1ರಿಂದ 5ರ ಮಧ್ಯೆ ಚಿನ್ನ ಖರೀದಿ, ಗ್ರಾಮ್​​ಗೆ ರೂ. 4662
ಪ್ರಾತಿನಿಧಿಕ ಚಿತ್ರ
Srinivas Mata

|

Feb 28, 2021 | 12:12 PM


ಸವರನ್ ಗೋಲ್ಡ್ ಬಾಂಡ್ ಯೋಜನೆ 2020- 21- XIIನೇ ಸರಣಿಯು ಮಾರ್ಚ್ 1, 2021ರಿಂದ ಮಾರ್ಚ್ 5, 2021ರ ಮಧ್ಯೆ ಸಬ್​ಸ್ಕ್ರಿಪ್ಷನ್​ಗೆ ಲಭ್ಯವಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ವಿತರಣೆ ಬೆಲೆಯನ್ನು ವರದಿ ಮಾಡಿದ್ದು, ಪ್ರತಿ ಗ್ರಾಮ್​ಗೆ 4,662 ರೂಪಾಯಿ ನಿಗದಿ ಮಾಡಿದೆ. ಸವರನ್ ಗೋಲ್ಡ್ ಬಾಂಡ್ (SGB) ಯೋಜನೆಯು ಸರ್ಕಾರದ ಬಾಂಡ್. ಚಿನ್ನದ ಯೂನಿಟ್​ನಲ್ಲಿ ಮುಖಬೆಲೆ ಇರುತ್ತದೆ. ಇದರರ್ಥ ನಿಮ್ಮ ಬಳಿ ಇರುವ ಬಾಂಡ್ ಮೊತ್ತಕ್ಕೆ ಇಂತಿಷ್ಟು ತೂಕದ ಚಿನ್ನವು ನಿಮ್ಮ ಬಳಿ ಇದ್ದಂತಾಗುತ್ತದೆ.

ಈ ಬಾಂಡ್ ಮೆಚ್ಯೂರಿಟಿ ವೇಳೆಯಲ್ಲಿ ಚಿನ್ನದ ದರ ಎಷ್ಟಿರುತ್ತದೆ ಅದು ದೊರೆಯುತ್ತದೆ. ಜತೆಗೆ ಈ ಬಾಂಡ್​ಗೆ ಬಡ್ಡಿ ಸಹ ಸಿಗುತ್ತದೆ. ಇವುಗಳನ್ನು ಸಹ ಡಿಮ್ಯಾಟ್ ರೂಪದಲ್ಲಿ ಇಟ್ಟುಕೊಳ್ಳಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜತೆಗೆ ಭಾರತ ಸರ್ಕಾರ ಮಾತುಕತೆ ನಡೆಸಿದ ನಂತರ, ಯಾವ ಹೂಡಿಕೆದಾರರು ಆನ್​ಲೈನ್​​ನಲ್ಲಿ ಅಪ್ಲೈ ಮಾಡುತ್ತಾರೋ ಅಂಥವರಿಗೆ ಪ್ರತಿ ಗ್ರಾಮ್​ಗೆ ರೂ. 50ರಂತೆ ರಿಯಾಯಿತಿ ನೀಡುತ್ತಿದೆ. ಅಂದರೆ, ಯಾರು ಡಿಜಿಟಲ್ ಪಾವತಿ ಮಾಡಿ, ಈ ಬಾಂಡ್ ಖರೀದಿ ಮಾಡುತ್ತಾರೋ ಅಂಥವರಿಗೆ ಪ್ರತಿ ಗ್ರಾಮ್​​ಗೆ 4,612 ರೂಪಾಯಿ ಮಾತ್ರ ಆಗುತ್ತದೆ.

ಈ ಹಿಂದಿನ ಚಿನ್ನದ ಬಾಂಡ್ ಸಬ್​ಸ್ಕ್ರಿಪ್ಷನ್ ಫೆಬ್ರವರಿ 1ರಿಂದ 5ರ ಮಧ್ಯೆ ಇತ್ತು. ಆಗ ಪ್ರತಿ ಒಂದು ಗ್ರಾಮ್ ಚಿನ್ನಕ್ಕೆ 4,912 ರೂಪಾಯಿಯನ್ನು ನಿಗದಿ ಮಾಡಲಾಗಿತ್ತು. ವೈಯಕ್ತಿಕ ಹೂಡಿಕೆದಾರರಿಗೆ ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ ಸಬ್​ಸ್ಕ್ರಿಪ್ಷನ್ 1 ಗ್ರಾಮ್ ಹಾಗೂ ಗರಿಷ್ಠ ಮಿತಿ 4 ಕಿಲೋಗ್ರಾಮ್, ಹಿಂದೂ ಅವಿಭಕ್ತ ಕುಟುಂಬಕ್ಕೂ (HUF) 4 ಕೇಜಿ ಮತ್ತು ಟ್ರಸ್ಟ್ ಹಾಗೂ ಅದೇ ರೀತಿ ಸಂಸ್ಥೆಗಳಿಗೆ 20 ಕಿಲೋಗ್ರಾಮ್ ಮಿತಿ ಇದೆ.

ಸವರನ್ ಗೋಲ್ಡ್ ಬಾಂಡ್ ಮೆಚ್ಯೂರಿಟಿ ಅವಧಿ 8 ವರ್ಷಗಳು. ಎಂಟು ವರ್ಷಗಳ ನಂತರ ಈ ಹೂಡಿಕೆ ಮೇಲೆ ಬರುವ ಲಾಭಕ್ಕೆ ಆದಾಯ ತೆರಿಗೆಯ ಕ್ಯಾಪಿಟಲ್ ಗೇಯ್ನ್ಸ್​​ನಿಂದ ವಿನಾಯಿತಿ ಇದೆ. ಬಾಂಡ್ ವರ್ಗಾವಣೆಯಿಂದ ಆಗುವ ದೀರ್ಘಾವಧಿ ಬಂಡವಾಳ ಗಳಿಕೆಗೆ ಇಂಡೆಕ್ಸೇಷನ್ ಅನುಕೂಲಗಳಿವೆ.

ಏನಿದು ಸವರನ್ ಗೋಲ್ಡ್ ಬಾಂಡ್ ಯೋಜನೆ?
ಸವರನ್ ಗೋಲ್ಡ್ ಬಾಂಡ್ ಅನ್ನೋದು ಸರ್ಕಾರದ ಸೆಕ್ಯೂರಿಟೀಸ್. ಅದು ಚಿನ್ನದ ಗ್ರಾಮ್ ಲೆಕ್ಕದಲ್ಲಿ ಇರುತ್ತದೆ. ಯಾರು ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಅಂತಿರುತ್ತಾರೋ ಅವರಿಗೆ ಇದು ಉತ್ತಮ ಆಯ್ಕೆ. ಚಿನ್ನದ ಗಟ್ಟಿ ಅಥವಾ ಆಭರಣದ ಮೇಲೆ ಹೂಡಿಕೆ ಮಾಡುವುದರ ಬದಲಿಗೆ ಈ ಬಾಂಡ್​​ಗಳಿಗೆ ಹಣ ಹಾಕಬಹುದು. ಬಾಂಡ್ ಅನ್ನು ಸಬ್​ಸ್ಕ್ರಿಪ್ಷನ್​​ಗೆ ಬಿಡುಗೆ ಮಾಡುವಾಗ ನಗದು ಅಥವಾ ಆನ್​ಲೈನ್​​ನಲ್ಲಿ ಪಾವತಿ ಮಾಡಿ, ಖರೀದಿಸಬೇಕು. ಎಂಟು ವರ್ಷಗಳ ನಂತರ ಮೆಚ್ಯೂರಿಟಿ ಆಗುತ್ತದೆ. ಬಾಂಡ್​ಗೆ ಆಗಿನ ಬೆಲೆ ಎಷ್ಟಿರುತ್ತದೋ ಅಷ್ಟು ನಗದು ಸಿಗುತ್ತದೆ. ಈ ಬಾಂಡ್​ಗೆ ಹಾಕಿದ ಹಣವನ್ನು ಐದು ವರ್ಷಕ್ಕೆ ಮುಂಚೆ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಇದನ್ನು ಲಾಕಿಂಗ್ ಅವಧಿ ಎನ್ನಲಾಗುತ್ತದೆ. ಎಂಟು ವರ್ಷಕ್ಕೆ ಮುಂಚೆ ಹಣ ತೆಗೆದುಕೊಂಡರೆ ಅದಕ್ಕೆ ಆದಾಯ ತೆರಿಗೆ ಅನ್ವಯ ಆಗುತ್ತದೆ

ಇನ್ನು ಈ ಬಾಂಡ್​​ಗೆ ಹಾಕಿದ ಹಣಕ್ಕೆ ವಾರ್ಷಿಕ ಶೇಕಡಾ 2.5 ಬಡ್ಡಿ ಕೂಡ ದೊರೆಯುತ್ತದೆ. ಇದಕ್ಕೂ ಆದಾಯ ತೆರಿಗೆ ಅನ್ವಯ ಆಗಲಿದ್ದು, ಆಯಾ ವೈಯಕ್ತಿಕ ಹೂಡಿಕೆದಾರರ ತೆರಿಗೆ ಸ್ಲ್ಯಾಬ್ ಎಷ್ಟಿದೆ ಎಂಬುದು ಮುಖ್ಯವಾಗುತ್ತದೆ. ಈ ಬಾಂಡ್​ಗಳನ್ನು ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತರಣೆ ಮಾಡುತ್ತದೆ. ಆದ್ದರಿಂದ ಹೂಡಿಕೆಯ ಭದ್ರತೆಗೇನೂ ಆತಂಕ ಪಡಬೇಕಿಲ್ಲ. ಆದರೆ ಚಿನ್ನದ ದರ ಏರಿಳಿತದ ಪ್ರಭಾವ ಇದರ ಮೇಲಿರುತ್ತದೆ. ಬೆಲೆ ಇಳಿಕೆ ಆದಾಗ ಬಾಂಡ್ ದರವೂ ಇಳಿಕೆ ಆಗುತ್ತದೆ. ಆ ಅಪಾಯ ಇದ್ದೇ ಇದೆ.

ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada