ಸೀರೆ ಉಟ್ಟಾಗ ಹಾವು ಹಿಡಿಯೋದು ಕಷ್ಟ -ಉರಗ ತಜ್ಞೆಯ ಸಾಹಸಕ್ಕೆ ಸ್ಥಳೀಯರು ಫುಲ್​ ಫಿದಾ!

  • Publish Date - 4:29 pm, Sun, 13 September 20
ಸೀರೆ ಉಟ್ಟಾಗ ಹಾವು ಹಿಡಿಯೋದು ಕಷ್ಟ -ಉರಗ ತಜ್ಞೆಯ ಸಾಹಸಕ್ಕೆ ಸ್ಥಳೀಯರು ಫುಲ್​ ಫಿದಾ!

ಬೆಳಗಾವಿ: ಮದುವೆಗೆ ತೆರಳುವ ಬದಲು ಮನೆಯೊಂದರಲ್ಲಿ ಸಿಲುಕಿದ್ದ ನಾಗರಹಾವನ್ನು ಉರಗ ತಜ್ಞೆ ನಿರ್ಜರಾ ಚಿಟ್ಟಿ ಬರಿಗೈಯಲ್ಲೇ ರಕ್ಷಣೆ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ನಿರ್ಜರಾ ಹಾಗೂ ಆಕೆಯ ಪತಿ ಆನಂದ್​ ಮೂಲತಃ ವನ್ಯಜೀವಿ ತಜ್ಞರು. ಬೆಳಗಾವಿ ನಿವಾಸಿಗಳಾದ ದಂಪತಿ ತಮ್ಮ ಸಂಬಂಧಿಕರ ಮದುವೆಗೆ ತೆರಳಲು ನಿನ್ನೆ ಸಜ್ಜಾಗುತ್ತಿದ್ದರಂತೆ. ಈ ನಡುವೆ ದಂಪತಿಗೆ ನಮ್ಮ ಮನೆಯಲ್ಲಿ ನಾಗರಹಾವು ಒಂದು ಸಿಲುಕಿಕೊಂಡಿದೆ. ದಯವಿಟ್ಟು ಬಂದು ಅದನ್ನು ಅಲ್ಲಿಂದ ಹೊರೆತೆಗೆಯಿರಿ ಅಂತಾ ನಗರದ ನಿವಾಸಿಯೊಬ್ಬರ ಫೋನ್​ ಕರೆ ಬಂದಿದೆ.

ಮದುವೆಗೆ ತಯಾರಾಗಿದ್ದ ನಿರ್ಜರಾ ಮರುಯೋಚಿಸದೆ ಸಮಾರಂಭಕ್ಕಾಗಿ ಉಟ್ಟ ಸೀರೆಯಲ್ಲೇ ಹಾವು ಸಿಲುಕಿದ್ದ ಮನೆಗೆ ಧಾವಿಸಿದ್ದಾರೆ. ಅವಸರದಲ್ಲಿ ತಮ್ಮ ನಿವಾಸದಲ್ಲಿದ್ದ ಹಾವು ರಕ್ಷಣಾ ಸಾಧನಗಳನ್ನು ಸಹ ತೆಗೆದುಕೊಂಡು ಹೋಗಿರಲಿಲ್ಲ.

ಆದರೆ, ಇದರ ಬಗ್ಗೆ ಕಿಂಚಿತ್ತು ಚಿಂತಿಸದ ನಿರ್ಜರಾ ತಮ್ಮ ಫೋನ್​ನ ಟಾರ್ಚ್​ಲೈಟ್​ ಬಳಸಿ ಸಣ್ಣದೊಂದು ಕಡ್ಡಿಯ ಸಹಾಯದಿಂದ ಕಪಾಟಿನ ಹಿಂದೆ ಅವಿತುಕೊಂಡಿದ್ದ ನಾಗರಹಾವನ್ನು ಹೊರಗೆಳೆದರು. ಬಳಿಕ ಅದನ್ನು ಬರಿಗೈಯಲ್ಲೇ ಹಿಡಿದು ಅಲ್ಲಿಂದ ಹೊರತಂದರು.

ನಿರ್ಜರಾ ಇದೆಲ್ಲಾ ಕಾರ್ಯವನ್ನು ತಾವು ಮದುವೆಗೆಂದು ಉಟ್ಟ ಸೀರೆಯಲ್ಲೇ ನಿಭಾಯಿಸಿದ್ದು ವನ್ಯಜೀವಿ ತಜ್ಞೆಯ ಸಾಹಸಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ಈ ವೇಳೆ ಹಾವು ಹಿಡಿಯೋದು ದೊಡ್ಡ ವಿಷಯವಲ್ಲ. ಆದರೆ, ಸೀರೆ ಉಟ್ಟಿರುವಾಗ ಕೊಂಚ ಕಷ್ಟವಾಗುತ್ತದೆ ಎಂದು ನಿರ್ಜರಾ ವಿಡಿಯೋದಲ್ಲಿ ಹೇಳಿದ್ದಾರೆ.

Click on your DTH Provider to Add TV9 Kannada