ಉತ್ತರ ಕರ್ನಾಟಕದ ಶಾಸಕರು ಮುಗ್ಧರು, ಬೆಂಗಳೂರಿನವರಂತೆ ಸ್ಮಾರ್ಟ್ ಅಲ್ಲ; ಶೇ. 60ರಷ್ಟು ಶಾಸಕರಿಗೆ ಇದೆ ಅದೇ ಪ್ರವೃತ್ತಿ: ರಾಜಶೇಖರ್ ಮುಲಾಲಿ
ಉತ್ತರ ಕರ್ನಾಟಕದ ಶಾಸಕರನ್ನು ಸಿಲುಕಿಸಲು ಬೆಂಗಳೂರಿನಲ್ಲಿ ಇಂತಹ ದೊಡ್ಡ ಜಾಲವಿದೆ. ಶೇ. 60ರಷ್ಟು ಶಾಸಕರು ಇಂತಹ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ. ಉತ್ತರ ಕರ್ನಾಟಕದ ಶಾಸಕರು ಮುಗ್ಧರು, ಪಾಪದವರು ಬೆಂಗಳೂರಿನವರಂತೆ ಸ್ಮಾರ್ಟ್ ಅಲ್ಲ.
ಯಾದಗಿರಿ: ರಮೇಶ್ ಜಾರಕಿಹೊಳಿ ಅಶ್ಲೀಲ ಸಿ.ಡಿ. ಬಯಲಿಗೆ ಬಿದ್ದ ನಂತರ ಸಂತ್ರಸ್ತ ಮಹಿಳೆಯರು ನನ್ನನ್ನು ಸಂಪರ್ಕಿಸಿದರೆ ಸಿ.ಡಿ. ಬಿಡುಗಡೆ ಮಾಡಲು ಸಹಾಯ ಮಾಡುತ್ತೇನೆ ಎಂಬ ಹೇಳಿಕೆ ಕೊಟ್ಟು ಸಂಚಲನ ಮೂಡಿಸಿದ್ದ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ, ಇಂದು ಅದೇ ವಿಚಾರದ ಕುರಿತಾಗಿ ಮತ್ತೆ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಶಾಸಕರನ್ನು ಸಿಲುಕಿಸಲು ಬೆಂಗಳೂರಿನಲ್ಲಿ ಇಂತಹ ದೊಡ್ಡ ಜಾಲವಿದೆ. ಶೇ. 60ರಷ್ಟು ಶಾಸಕರು ಇಂತಹ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ. ಉತ್ತರ ಕರ್ನಾಟಕದ ಶಾಸಕರು ಮುಗ್ಧರು, ಪಾಪದವರು ಬೆಂಗಳೂರಿನವರಂತೆ ಸ್ಮಾರ್ಟ್ ಅಲ್ಲ ಎಂದು ರಾಜಶೇಖರ್ ಮುಲಾಲಿ ಯಾದಗಿರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಯಾವುದೇ ಸಂತ್ರಸ್ತರಿಗೆ ಜೀವ ಭಯವಿದ್ದರೆ ನಾನು ನ್ಯಾಯ ಒದಗಿಸುವೆ ಈ ಶಾಸಕರೆಲ್ಲರೂ ಪ್ರವೃತ್ತಿಯಿಂದಲೇ ಇಂತಹ ಕೆಲಸ ಮಾಡುತ್ತಿದ್ದಾರೆ. ಧೂಮಪಾನ, ಮದ್ಯಪಾನದಂತೆ ಇದನ್ನೂ ಮಾಡುತ್ತಿದ್ದಾರೆ. ಇಂಥವರನ್ನ ಟಾರ್ಗೆಟ್ ಮಾಡುವ ಜಾಲ ಬೆಂಗಳೂರಿನಲ್ಲಿದೆ. ಈ ಜಾಲಕ್ಕೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಶಾಸಕರೇ ಟಾರ್ಗೆಟ್. ನಮ್ಮ ಭಾಗದ ಶಾಸಕರು ಮೈ ಮರೆಯದೆ ಎಚ್ಚರಿಕೆಯಿಂದ ಇರಬೇಕು. ಶಾಸಕರಾದವರಿಗೆ ಸಂಸ್ಕೃತಿ, ಸಂಸ್ಕಾರ, ಬುದ್ಧಿ ಇರಬೇಕು, ಭಾಗಿಯಾಗುವ ಮುನ್ನ ಹೆಂಡತಿ, ಮಕ್ಕಳನ್ನು ನೆನಪಿಸಿಕೊಳ್ಳಲಿ. ಒಂದು ವೇಳೆ ಯಾವುದೇ ಸಂತ್ರಸ್ತರಿಗೆ ಜೀವ ಭಯವಿದ್ದರೆ ನಾನು ನ್ಯಾಯ ಒದಗಿಸುವೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ಅನುಮಾನದ ಹೊಗೆ ಎಬ್ಬಿಸಿದ್ದಾರೆ.
ಕರ್ನಾಟಕದಲ್ಲಿ 224 ಶಾಸಕರ ಪೈಕಿ 60 ಪ್ರತಿಶತ ಶಾಸಕರು ಇಂಥ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಇದು ಅವರಿಗೆ ಪ್ರವೃತ್ತಿ ಎಂದು ಹೇಳಿರುವುದು ಪಕ್ಷಾತೀತವಾಗಿ ಶಾಸಕರುಗಳ ಮೇಲೆ ಸಂದೇಹ ಪಡುವಂತೆ ಆಗಿದೆ. ಇನ್ನೊಂದೆಡೆ ದಿನೇಶ್ ಕಲ್ಲಹಳ್ಳಿ ಸಹ ತನ್ನ ಬಳಿ ಇನ್ನಷ್ಟು ರಾಜಕಾರಣಿಗಳ ವಿಡಿಯೋ ಇರುವುದಾಗಿ ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಒಂದಷ್ಟು ಅನಿರೀಕ್ಷಿತ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.