ಕಿಸಾನ್ ಸಕ್ಕರೆ ಕಾರ್ಖಾನೆ (Sugar Factory) ರಾಸಾಯನಿಕ ತ್ಯಾಜ್ಯ ಹಳ್ಳಕ್ಕೆ ಬಿಡಲಾಗುತ್ತಿದ್ದು ದುರ್ನಾತದಿಂದ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ ಸ್ಥಿತಿ ರೈತರದ್ದಾಗಿದೆ. ಐದಾರು ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿದ್ದರೂ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು… ಬೀದರ್ ತಾಲೂಕಿನ (Bidar taluk) ಮೊಗದಾಳ ಗ್ರಾಮದ ಬಳಿಯ ಕಿಸಾನ್ ಸಕ್ಕರೆ ಕಾರ್ಖಾನೆ… ಕಾರ್ಖಾನೆಯಿಂದ ಸಾವಿರಾರು ಲೀಟರ್ ರಾಸಾಯನಿಕ ತ್ಯಾಜ್ಯ ಹರಿಸಲಾಗುತ್ತಿದೆ ಹಳಕ್ಕೆ… ಕುಡಿಯುವ ನೀರಿನಲ್ಲೂ ವಿಷವು ಬಾವಿ ಮತ್ತು ಬೋರ್ ವೆಲ್ ನಲ್ಲಿಯೂ ಬರುತ್ತಿದೆ. ವಿಷಕಾರಿ ನೀರು…ಕಾರ್ಖಾನೆಯಿಂದ ಬಿಡುತ್ತಿರುವ ಕೆಮಿಕಲ್ ನೀರನ್ನ ನಿಲ್ಲಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಕೆಮಿಕಲ್ ಮಿಶ್ರಿತ ನೀರು ಕುಡಿದ ಪಕ್ಷಿ ಜಾನುವಾರುಗಳ ಸಾವು ಜನರ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ… ಕಾರ್ಖಾನೆಯಿಂದ ಗ್ರಾಮಸ್ಥರಿಗಾಗುತ್ತಿರುವ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ… ಐದಾರು ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಸ್ಫಂದಿಸಿಲ್ಲ. ಮರಕುಂದಾ, ಮೊಗದಾಳ, ಭಂಗೂರ, ಬಾಪುರ ಗ್ರಾಮದ ರೈತರಿಗೆ ಜನರಿಗೆ ಸಮಸ್ಯೆಯಾಗಿದೆ (health problems). ಬರದ ನಾಡಾಗಿರುವ ಬೀದರ್ ಜಿಲ್ಲೆಯಲ್ಲಿ ಅಂತರ್ಜಲ ಬಿಟ್ಟರೆ ಬೇರೆ ನೀರಿನ ಮೂಲಗಳಿಲ್ಲ… ಇಂದು ಅದೇ ಅಂತರ್ಜಲದ ನೀರು ವಿಷಕಾರಿಯಾಗಿದ್ದು ಅದೆ ನೀರು ಕುಡಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಹೌದು, ತಮ್ಮ ಗ್ರಾಮದಲ್ಲಿ ಪಕ್ಕದಲ್ಲಿನ ಹಳ್ಳದಲ್ಲಿ ಸಕ್ಕರೆ ಕಾರ್ಖಾನೆಯ ರಾಸಾಯನಿಕ ತ್ಯಾಜ್ಯ ಸೇರಿಕೊಂಡಿರುವುದ್ದನ್ನ ಬೀದರ್ ತಾಲೂಕಿನ ಮರಕುಂದಾ ಗ್ರಾಮಸ್ಥರು ಎತ್ತಿ ತೋರಿಸಿದ್ದಾರೆ. ಈ ಗ್ರಾಮದ ಪಕ್ಕದಲ್ಲಿರುವ ಮೊಗದಾಳ ಗ್ರಾಮದ ಬಳಿಯ ಕಿಸಾನ್ ಸಕ್ಕರೆ ಕಾರ್ಖಾನೆಯಿಂದ ಪ್ರತಿನಿತ್ಯ ಸಾವಿರಾರು ಲೀಟರ್ ಮೊಲಾಸಿಸ್ (ಬಗಸೆ) ಹಳ್ಳಕ್ಕೆ ಹರಿಬಿಡುತ್ತಿದ್ದಾರೆ.
ಅಪಾಯಕಾರಿ ವಿಷಯುಕ್ತ ನೀರು ಹಳ್ಳದಲ್ಲಿ ಸೇರುತ್ತಿದಂತೆ ಆ ನೀರು ಇಂಗಿ ಬಾವಿ, ಬೋರವೆಲ್ ಮೂಲಕ ಆ ವಿಷಯುಕ್ತ ನೀರು ಜನರ ಹೊಟ್ಟೆ ಸೇರುತ್ತಿದೆ. ಹಾಗಾಗಿ ಗ್ರಾಮದ ಜನರು ಹತ್ತಾರು ಕಾಯಿಲೆಯಿಂದ ಬಳಲುವಂತಾಗಿದೆ. ಇದರಿಂದ ಗ್ರಾಮದ ಜನರ ನೆಮ್ಮದಿಯೇ ಇಲ್ಲದಂತಾಗಿದೆ. ಶುದ್ಧ ಕುಡಿಯುವ ನೀರು ಪಡೆಯುವ ಉದ್ದೇಶದಿಂದ ಬೋರ್ ವೆಲ್ ಬಾವಿಗಳನ್ನ ಕೊರೆಸಿದರೂ ಅದರಲ್ಲಿಯೂ ಕೂಡಾ ವಿಷಕಾರಿ ನೀರು ಬರುತ್ತಿರುವುದು ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಪ್ರತಿನಿತ್ಯ ಕಾರ್ಖಾನೆಯಿಂದ ಲಕ್ಷಾಂತರ ಲೀಟರ್ ನೀರು ಹಳ್ಳದಲ್ಲಿ ಬಂದು ಶೇಕರಣೆಯಾಗುತ್ತದೆ. ಇಲ್ಲಿ ನಿಲ್ಲುವ ನೀರು ವಿಷಕಾರಿಯಾಗಿದ್ದು ಸ್ವಲ್ಪ ಗಾಳಿ ಬೀಸಿದರೆ ಸಾಕು ನೀರಿನ ಕೆಟ್ಟವಾಸನೆ ಗಾಳಿಯಲ್ಲಿ ಸೇರಿ ಮನುಷ್ಯನ ದೇಹವನ್ನ ಸೇರುತ್ತಿದೆ. ಇದರಿಂದ ಹಲವಾರು ಜನರು ಅನೇಕ ಕಾಯಿಲೆಯಿಂದ ಬಳಲುತ್ತಿದ್ದು ನಮ್ಮ ಜೀವವನ್ನ ಕಾಪಾಡಿ ಎಂದು ಜನರು ಸರಕಾರಕ್ಕೆ ಕೇಳುತ್ತಿದ್ದಾರೆ.
ಇನ್ನು ಈ ಕಿಸಾನ್ ಸಕ್ಕರೆ ಕಾರ್ಖಾನೆ 11 ಫೆಬ್ರವರಿ 2000 ರಂದು ಆರಂಭವಾಯಿತು. ಈ ಕಾರ್ಖಾನೆ ಆರಂಭವಾದಾಗಿನಿಂದಲೂ ಈ ಗ್ರಾಮದ ಜನರು ಕಲ್ಮಶಯುಕ್ತ ನೀರನ್ನ ಕುಡಿದು ಬದುಕುತ್ತಿದ್ದಾರೆ. ಫ್ಯಾಕ್ಟರಿಯಿಂದ ಬಿಡುಗಡೆಯಾಗುವ ಕಲ್ಮಶ ನೀರು ಹಳ್ಳದಲ್ಲಿ ಬಾವಿಗಳಲ್ಲಿ ಬಂದು ಶೇಕರಣೆಯಾಗುತ್ತಿದೆ. ಇದರಿಂದ ಇಲ್ಲಿರುವ ನೀರೆಲ್ಲ ವಿಷಕಾರಿಯಾಗಿ ಇಲ್ಲಿ ಆಶ್ರಯ ಪಡೆದಿರುವ ಜಲಚರಗಳೆಲ್ಲ ಸಾವನ್ನಪ್ಪುತ್ತಿವೆ. ಕುಡಿಯುವ ನೀರಿನಲ್ಲಿಯೂ ಇಲ್ಲಿನ ವಿಷಕಾರಿ ನೀರು ಸೇರುತ್ತಿದ್ದು ಅಪ್ಪಿ ತಪ್ಪಿ ಇಂತಹ ನೀರನ್ನ ಕುಡಿದ್ರೆ ಯಮನ ಪಾದ ಸೇರೋದಂತೂ ಗ್ಯಾರಂಟಿ.
ಪ್ರತಿನಿತ್ಯವೂ ಜಾನುವಾರುಗಳು, ಪಕ್ಷಿಗಳು, ಕೋತಿಗಳು ಈ ನೀರನ್ನ ಕುಡಿದು ಕಾಯಿಲೆಯಿಂದ ನರಳಿ ನರಳಿ ಸಾವನಪ್ಪುತ್ತಿವೆ. ಇದು ಸಹ ಈ ಗ್ರಾಮಸ್ಥರ ಅಸಮಾಧಾನವನ್ನು ಹೆಚ್ಚಿಸಿದೆ. ದಿನಕ್ಕೆ ಸಾವಿರಾರು ಲೀಟರ್ ಭೂಮಿ ಸೇರುವ ಮೊಲಾಸಿಸ್ ಇಂತಹದ್ದೊಂದು ಅನಾಹುತಕ್ಕೆ ಕಾರಣವಾಗುತ್ತಿದೆ ಎಂದು ಇಲ್ಲಿನ ರೈತರು ಹೇಳುತ್ತಿದ್ದಾರೆ. ಅಪಾರ ಪ್ರಮಾಣದ ತ್ಯಾಜ್ಯ ಭೂಮಿಯ ಒಡಲನ್ನ ಸೇರುತ್ತಿರುವುದರಿಂದ ವಿಷಕಾರಿ ರಾಸಾಯನಿಕಗಳು ಅಂತರ್ಜಲವನ್ನೂ ಕಲುಷಿತಗೊಳಿಸಿವೆ. ವಿಷಕಾರಿ ರಾಸಾಯನಿಕಗಳಾದ ಮ್ಯಾಂಗನೀಸ್, ಫಾಸ್ಫರಸ್, ಕ್ಲೋರೈಡ್, ಪೊಟ್ಯಾಸಿಯಂ, ಜಿಂಕ್ ನಂತಹ ಹತ್ತು ಹಲವಾರು ವಿಷಗಳು ಈ ನೀರಿನಲ್ಲಿ ಸೇರಿಕೊಂಡಿವೆ.
ಈಗಾಗಲೇ ಗ್ರಾಮದಲ್ಲಿ ಹತ್ತಾರು ಜಾನುವಾರುಗಳು ಇಂತಹದ್ದೇ ನೀರನ್ನ ಸೇವಿಸಿ ಅಸುನೀಗಿವೆ. ಇನ್ನು ಅಪಾರ ಪ್ರಮಾಣದ ಬೆಳೆ ಕೂಡ ಒಣಗಿಹೋಗಿದೆ. ಕುಡಿಯುವ ನೀರೇ ವಿಷವಾಗಿರುವಾಗ ಗ್ರಾಮಸ್ಥರಿಗೆ ಬೇರೆ ದಾರಿಯೇ ಕಾಣದಂತಾಗಿದೆ. ಇಲ್ಲಿನ ಸಮಸ್ಯೆಯ ಬಗ್ಗೆ ಅದೇಷ್ಟೋ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಕ್ಯಾರೇ ಅನ್ನದಿರುವುದು ಇಲ್ಲಿನ ಜನರ ಆಕ್ರೊಶಕ್ಕೆ ಕಾರಣವಾಗಿದ್ದು ಕಾರ್ಖಾನೆಯಿಂದ ಬರುತ್ತಿರುವ ವಿಷಕಾರಿ ನೀರನ್ನ ನಿಲ್ಲಿಸಿ ಗ್ರಾಮಸ್ಥರನ್ನ ಕಾಪಾಡಿ ಎಂದು ಇಲ್ಲಿನ ಜನರು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದಾರೆ.
ಈ ಸಕ್ಕರೆ ಕಾರ್ಖಾನೆ ಮರಕುಂದಾ ಮೊಗದಾಳ ಭಂಗೂರ ಬಾಪುರ ಗ್ರಾಮಸ್ಥರಿಗೆ ತಂದೊಡ್ಡುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಬರದ ನಾಡಾಗಿರುವ ಬೀದರ್ ಜಿಲ್ಲೆಯಲ್ಲಿ ಅಂತರ್ಜಲ ಬಿಟ್ಟರೇ ಬೇರೆ ನೀರಿನ ಮೂಲಗಳಿಲ್ಲ. ನದಿಗಳಿಲ್ಲದ ಈ ಭಾಗದಲ್ಲಿ ಮಳೆಗಾಲದಲ್ಲಿ ಕೆರೆಗಳೇ ಆಸರೆ. ಬೇಸಿಗೆ ಆರಂಭಕ್ಕೆ ಕೆರೆಗಳು ಬತ್ತಿ ಖಾಲಿಯಾಗುತ್ವೆ. ವರ್ಷಪೂರ್ತಿ ಅಂತರ್ಜಲವೇ ಕುಡಿಯೋದಕ್ಕೂ, ಕೃಷಿಗೂ ಆಧಾರ ಹೀಗಿರುವಾಗ ಯಾವುದೋ ಒಂದು ಕಂಪನಿ ತನ್ನ ಲಾಭಕ್ಕೋಸ್ಕರ ಇಡೀ ಅಂತರ್ಜಲವನ್ನ ವಿಷವನ್ನಾಗಿ ಮಾಡಿದೆ. ಕೂಡಲೆ ಫ್ಯಾಕ್ಟ್ರಿಯಿಂದ ಜನರಿಗೆ ಆಗುತ್ತಿರುವ ತೊಂದರೆಯನ್ನ ಹೋಗಲಾಡಿಸಿ ಜನರು ನೆಮ್ಮಂದಿಯಿಂದ ಉಸಿರಾಡುವ ವಾತಾವರಣವನ್ನ ಸರಕಾರ ಈ ಭಾಗದ ಜನರಿಗೆ ಕಲ್ಪಿಸಿಕೊಡಬೇಕಾದ ಅನಿವಾರ್ಯತೆ ಇದೆ. (ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್)