ಮಂಡ್ಯ: ಕೆಆರ್‌ಎಸ್ ಡ್ಯಾಮ್‌ಗೆ ಅಪಾಯ ತಂದೊಡ್ಡುವ ಬೆದರಿಕೆ ಹಾಕಿದ್ದ ಬೇಬಿ ಬೆಟ್ಟದಲ್ಲಿನ ಅಕ್ರಮ ಗಣಿಗಾರಿಕೆಗೆ ಕೊನೆಗೂ ಬ್ರೇಕ್ ಬೀಳುವ ಲಕ್ಷಣ ಕಂಡು ಬಂದಿದೆ. ಈ ಸಂಬಂಧ ಮಂಡ್ಯ ಜಿಲ್ಲೆಯ ಅಧಿಕಾರಿಗಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರನ್ನು ಹೆಡೆಮುರಿಕಟ್ಟಲು ಶುರುಮಾಡಿದ್ದಾರೆ.
ಅಕ್ರಮ ಗಣಿಗಾರಿಕೆಯಿಂದ ಕುಖ್ಯಾತಿ ಹೌದು ಅಕ್ರಮ ಗಣಿಗಾರಿಕೆಯಿಂದಲೇ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ರಾಜ್ಯಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ತೊಂದರೆ ಎದುರಾಗಲಿದೆ ಅನ್ನೋ ವಿಚಾರ ಚರ್ಚೆಗೆ ಗ್ರಾಸವಾದ ನಂತರ ಸರ್ಕಾರ ಈ ಭಾಗದಲ್ಲಿ ಗಣಿಗಾರಿಕೆಯನ್ನ ನಿಷೇಧಿಸಿ ಆದೇಶ ಹೊರಡಿಸಿತ್ತು. ಸರ್ಕಾರ ಗಣಿಗಾರಿಕೆ ನಿಷೇಧಿಸಿದ ನಂತರವೂ ಇಲ್ಲಿ ಕದ್ದು ಮುಚ್ಚಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.
ಯಂತ್ರೋಪಕರಣಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗ ಈ ಪ್ರದೇಶದಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಲ್ಲಿಸಲು ಮುಂದಾಗಿದ್ದು ಬೇಬಿ ಬೆಟ್ಟದ ಗಡಿಭಾಗವನ್ನ ಗುರ್ತಿಸಲಾರಂಭಿಸಿದೆ.
ಶ್ರೀರಂಗಪಟ್ಟಣದ ಟಿ ಎಂ ಹೊಸೂರು ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪುಷ್ಪಾ ನೇತೃತ್ವದ ಅಧಿಕಾರಿಗಳ ತಂಡ ಗಣಿಗಾರಿಕೆಗೆ ಬಳಕೆ ಮಾಡುತ್ತಿದ್ದ ಅಪಾರ ಪ್ರಮಾಣದ ದೊಡ್ಡ ದೊಡ್ಡ ಯಂತ್ರೋಪಕರಣಗಳನ್ನ ವಶಕ್ಕೆ ಪಡೆದುಕೊಂಡಿದೆ.
ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಈ ಸಂಬಂಧ ಮಾತನಾಡಿರುವ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪ, ಬೇಬಿ ಬೆಟ್ಟ ಹಾಗೂ ಟಿ ಎಂ ಹೊಸೂರು ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸುವ ಉದ್ದೇಶದಿಂದ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸುತ್ತಿದ್ದೇವೆ. ಈ ಸಂದರ್ಭದಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಏನು ಕಾನೂನು ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. -ರವಿ ಲಾಲಿಪಾಳ್ಯ