ಫೆಬ್ರುವರಿ 28 ರಂದು ಭದ್ರಾವತಿಯಲ್ಲಿ ನಡೆದ ಕಬಡ್ಡಿ ಟೂರ್ನಮೆಂಟಿನ ಸಂದರ್ಭದಲ್ಲಿ ನಡೆದ ಹೊಡೆದಾಟದ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದೆ. ಈಗಾಗಲೇ ಎಮ್ಎಲ್ಎ ಬಿ.ಕೆ. ಸಂಗಮೇಶ್ ಅವರ ಪುತ್ರ ಮತ್ತು 15 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸಂಗಮೇಶ್ ಮಾಡುತ್ತಿರುವ ಆರೋಪ ಏನೆಂದರೆ ಇಲ್ಲಿ ಬಿಜೆಪಿ ಯಾವತ್ತೂ ಗೆದ್ದಿಲ್ಲ, ಹಾಗಾಗಿ ಬಿಜೆಪಿ ಗಲಾಟೆ ಮಾಡಿಸುತ್ತಿದೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ. ಭದ್ರಾವತಿ ವಿಧಾನಸಭಾ ಕ್ಷೇತ್ರದ ರಾಜಕೀಯ ಯಾವ ಘಟ್ಟದಲ್ಲಿದೆ ಎಂಬುದು ಬಹಳ ಕುತೂಹಲಕಾರಿಯಾಗಿದೆ.
ಹಿಂದಿನ ಲೆಕ್ಕಾಚಾರ ಏನು?
ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಮಲೆನಾಡು ಶಿವಮೊಗ್ಗ ಜಿಲ್ಲೆ ಸಿಎಂ ಬಿಎಸ್ ವೈ ಮತ್ತು ಹಿರಿಯ ಸಚಿವ ಕೆ.ಎಸ್ ಈಶ್ವರಪ್ಪ ಅವರ ತವರು ಜಿಲ್ಲೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರದಲ್ಲಿ ಆರು ಬಿಜೆಪಿ ಗೆಲುವು ಸಾಧಿಸಿದ್ರೆ ಭದ್ರಾವತಿಯ ಒಂದು ಸ್ಥಾನ ಕಾಂಗ್ರೆಸ್ ಪಾಲಾಗಿತ್ತು. ಇನ್ನೂ ಶಿವಮೊಗ್ಗ ಲೋಕಸಭಾ ಕ್ಷೇತ್ರವು ಬಿಜೆಪಿ ತನ್ನ ಮುಡಿಗೇರಿಸಿಕೊಂಡಿದೆ. ಮಲೆನಾಡು ಸಂಪೂರ್ಣವಾಗಿ ಕೇಸರಿಮಯವಾಗಿದೆ. ಆದರೆ ಉಕ್ಕಿನ ನಗರಿ ಭದ್ರಾವತಿ ವಿಧಾನಸಭೆ ಕ್ಷೇತ್ರದಲ್ಲಿ ಇಲ್ಲಿಯ ವರೆಗೂ ಕಮಲ ಅರಳಿಸಲು ಸಾಧ್ಯವಾಗಿಲ್ಲ.
ಚುನಾವಣೆಗೆ ಎರಡು ವರ್ಷ ಇದೆ. ಈ ನಡುವೆ ಬಿಜೆಪಿಯು ಮೊನ್ನೆ ನಡೆದ ಗಲಾಟೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದೆ. ಏನಾದ್ರೂ ಮಾಡಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರನ್ನು ಹಣಿಯಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಸಿಎಂ ಸೂಚನೆಯಂತೆ ಈಗಾಗಲೇ ಬಿಜೆಪಿಯು ಹೋರಾಟ ತೀವ್ರಗೊಳಿಸಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಮಾಡಿದ ಹಲ್ಲೆಯನ್ನಿಟ್ಟುಕೊಂಡು ಬಿಜೆಪಿ ಹೋರಾಟವನ್ನು ಮುಂದುವರಿಸಿದೆ. ಶಾಸಕರ ಮತ್ತು ಅವರ ಕುಟುಂಬದ ಮೇಲೆ ಮೂರು ಎಫ್ ಐ ಆರ್ ದಾಖಲಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಶಾಸಕನಿಗೆ ಮತ್ತು ಅವರ ಕಾರ್ಯಕರ್ತರಿಗೆ ದೊಡ್ಡ ಏಟು ಬಿಜೆಪಿ ನೀಡಿದೆ. ಇದೇ ಗಲಾಟೆಯನ್ನು ಮುಂದೆ ಇಟ್ಟುಕೊಂಡು ಶಾಸಕ ಸಂಗಮೇಶ್ ಮತ್ತು ಅವರ ಮಕ್ಕಳು, ಸಂಬಂಧಿಕರು ರೌಡಿಗಳೆಂದು ಬಿಂಬಿಸಲು ಬಿಜೆಪಿ ಪಕ್ಷವು ಪ್ರಯತ್ನಿಸುತ್ತಿದೆ.
ಈ ನಡುವೆ ಬಿಜೆಪಿಯ ಎಲ್ಲ ರಾಜಕೀಯ ಲೆಕ್ಕಾಚಾರ ಉಲ್ಟಾ ಮಾಡುವುದಕ್ಕೆ ಸಂಗಮೇಶ್ ಕೂಡಾ ಪ್ರತಿತಂತ್ರವನ್ನು ಬೆಂಗಳೂರಿನಲ್ಲಿ ಕುಳಿತೇ ಹೆಣೆಯುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಇಬ್ಬರ ಬೆಂಬಲ ಪಡೆದುಕೊಂಡಿರುವ ಶಾಸಕ ಸಂಗಮೇಶ್ ಈಗ ಸಿಎಂ ಮತ್ತು ಈಶ್ವರಪ್ಪ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ತಾನು ಏನೂ ಕಮ್ಮಿಯಿಲ್ಲ. ಇಂತಹ ಎಫ್ ಐಆರ್ ಗಳಿಗೆ ಹೆದರುವುದಿಲ್ಲ ಜಗ್ಗುವುದಿಲ್ಲ. ಭದ್ರಾವತಿಯಲ್ಲಿ ಕಮಲ ಅರಳಿಸುವುದಕ್ಕೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕರು ಬಹಿರಂಗವಾಗಿಯೇ ಚಾಲೇಂಜ್ ಮಾಡಿದ್ದಾರೆ..
ಸದ್ಯ ಶಾಸಕನ ಪುತ್ರನ ಬಂಧನದ ಬಳಿಕ ಭದ್ರಾವತಿ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬರುವ ದಿನದಲ್ಲಿ ಈ ರಾಜಕೀಯ ಗುದ್ದಾಟವು ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸುತ್ತದೆ ಎನ್ನುವುದು ಭದ್ರಾವತಿ ಜನರಿಗೆ ಟೆನಶನ್ ಶುರುವಾಗಿದೆ.
ಭದ್ರಾವತಿ ವಿಧಾನ ಸಭಾ ಕ್ಷೇತ್ರದ ಹಿನ್ನೆಲೆ ಏನು?
ಭದ್ರಾವತಿ ರಾಜಕಾರಣ ಇತರೆ ವಿಧಾನಸಭಾ ಕ್ಷೇತ್ರ ಕ್ಕಿಂತ ತುಂಬಾ ಭಿನ್ನವಾಗಿದೆ . ಈ ಕ್ಷೇತ್ರದಲ್ಲಿ ಇಲ್ಲಿಯ ವರೆಗೂ ಪಕ್ಷಕ್ಕಿಂತ ವ್ಯಕ್ತಿ ರಾಜಕಾರಣಕ್ಕೆ ಹೆಚ್ಚು ಮಹತ್ವ ಪಡೆದಿದೆ . 1994ರಿಂದ ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಬಿ ಕೆ ಸಂಗಮೇಶ್ವರ ಮತ್ತು ಜೆಡಿಎಸ್ ನ ಅಪ್ಟಾಜಿಗೌಡ ನಡುವೆ ನೇರ ಪೈಪೊಟಿ. ಕ್ಷೇತ್ರ ದ ಒಮ್ಮೆ ಸಂಗಮೇಶ್ವರ ಗೆ ಅವಕಾಶ ನೀಡಿದ್ರೆ ಮತ್ತೊಮ್ಮೆ ಸಂಗಮೇಶ್ವರಗೆ ಅವಕಾಶ ನೀಡುತ್ತಾ ಬಂದಿದ್ದಾರೆ. ಆರಂಭದಿಂದಲೂ ಇದು ಕಾಂಗ್ರೆಸ್ನ ಭದ್ರಕೋಟೆ ಆಗಿತ್ತು . ನಂತರ ದಿನಗಳಲ್ಲಿ ಕಾರ್ಮಿಕ ಹೋರಾಟ ದ ಮೂಲಕ ಅಪ್ಟಾಜಿಗೌಡ ಜನಪ್ರಿಯತೆ ಗಳಿಸಿದರು..
ಅಪ್ಟಾಜಿಗೌಡ ಇತ್ತೀಚೆಗೆ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ಜೆಡಿಎಸ್ ಓರ್ವ ಜನಪ್ರಿಯ ನಾಯಕನನ್ನು ಕ್ಷೇತ್ರದ ಲ್ಲಿ ಕಳೆದುಕೊಂಡಿದೆ. ಅಪ್ಟಾಜಿಗೌಡ ಇಲ್ಲದೇ ಇರುವುದನ್ನು ಬೆಜೆಪಿಯು ಮುಂದಿನ ವಿಧಾನಸಭೆ ಚುನಾವಣೆ ಯಲ್ಲಿ ಪ್ಲಸ್ ಆಗಿ ಪಡೆದುಕೊಳ್ಳಲು ಹವಣಿಸುತ್ತಿದೆ. ಸಂಗಮೇಶ್ವರ ಮತ್ತು ಅಪ್ಪಾಜಿಗೌಡ ಇಬ್ಬರು ಮೂರು ಬಾರಿ ಶಾಸಕರು ಆಗಿ ಆಯ್ಕೆ ಆಗಿದ್ದಾರೆ. ಕಬಡ್ಡಿ ಗಲಾಟೆ ಮುಂದಿಟ್ಟುಕೊಂಡು ಬಿಜೆಪಿ ಯು ಹಿಂದುತ್ವ ಅಸ್ತ್ರ ಕ್ಕೆ ಮುಂದಾಗಿದೆ.. ಆದ್ರೆ ಇಲ್ಲಿಯ ವರೆಗೆ ಬಿಜೆಪಿಗೆ ಭದ್ರಾವತಿ ಕ್ಷೇತ್ರದಲ್ಲಿ ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಆದರೆ, ಲಿಂಗಾಯತ ಕಾಂಗ್ರೆಸ್ ಶಾಸಕ ಕುಟುಂಬವನ್ನು ಟಾರ್ಗೇಟ್ ಮಾಡುವ ಮೂಲಕ ಸದ್ಯ ಸಿಎಂ ಬಿಎಸ್ ವೈ ಇಕ್ಕಟ್ಟು ಸಿಲುಕಿಕೊಂಡಂತೆ ಆಗಿದೆ ಎಂಬ ವಿಚಾರ ಕ್ಷೇತ್ರದಲ್ಲಿ ಜನ ಗಮನಿಸುತ್ತಿದ್ದಾರೆ. ಇದನ್ನು ನೋಡಿದಾಗ ಬಿಜೆಪಿಯ ಆಟ ಅವರಿಗೇ ತಿರುಗೇಟಾಗಿ ಬಿಡಬಹುದಾ ಎಂಬ ಅಂಶ ಕೂಡ ಮುಖ್ಯವಾಗಿದೆ.
ಇದನ್ನೂ ಓದಿ:
ಭದ್ರಾವತಿ ಕಬಡ್ಡಿ ಗಲಾಟೆ ಪ್ರಕರಣ: ಗಲಾಟೆ ಮಾಡಿದ 15 ಜನರ ಬಂಧನ
ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಪುತ್ರ ಬಸವೇಶ್ ಬಂಧನ