ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ: ದೆಹಲಿ ಪೊಲೀಸ್ ಚೀಫ್
ಕೆಂಪು ಕೋಟೆ ಮೇಲೆ ಕೆಲವರು ಬಾವುಟ ಹಾರಿಸಿದ್ದು ದೊಡ್ಡ ಅಪರಾಧ. ಅದು ಪುರಾತತ್ವ ಸ್ಮಾರಕ ಆಗಿದ್ದು ಅಲ್ಲಲ್ಲಿ ಹಾನಿಯುಂಟಾಗಿದೆ. ಪೋಲಿಸ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ದೆಹಲಿಯ ವರಿಷ್ಠ ಪೋಲಿಸ್ ಅಧಿಕಾರಿ ತಿಳಿಸಿದರು.
ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ಱಲಿ ನಡೆಸುವಾಗ ನಡೆದ ವ್ಯಾಪಕ ಹಿಂಸಾಚಾರ, ದೊಂಬಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆಯುಕ್ತ ಎಸ್. ಎನ್. ಶ್ರೀವಾಸ್ತವ ಬುಧವಾರ ಸಾಯಂಕಾಲ ಹೇಳಿಕೆಯೊಂದನ್ನು ನೀಡಿದರು.
‘ಟ್ರ್ಯಾಕ್ಟರ್ ಱಲಿ ನಡೆಸುವ ಬಗ್ಗೆ ರೈತರೊಂದಿಗೆ 5 ಸುತ್ತಿನ ಮಾತುಕತೆ ನಡೆಸಲಾಗಿತ್ತು ಮತ್ತು ಹಲವು ಷರತ್ತುಗಳೊಂದಿಗೆ ಅವರಿಗೆ ಅನುಮತಿ ನೀಡಲಾಗಿತ್ತು. ಮಾತುಕತೆ ಸಂದರ್ಭದಲ್ಲಿ ಮಧ್ಯಾಹ್ನ 12 ಗಂಟೆಗೆ ಶುರುಮಾಡಿ ಸಾಯಂಕಾಲ 5 ಗಂಟೆಯೊಳಗೆ ಱಲಿ ಮುಗಿಸುವುದಾಗಿ ರೈತ ಮುಖಂಡರು ಭರವಸೆ ನೀಡಿದ್ದರು. ಈ ಱಲಿಯು ರೈತ ಮುಖಂಡರ ನೇತೃತ್ವದಲ್ಲಿ ನಡೆಸಬೇಕಿತ್ತು, ಕೇವಲ 5,000 ಟ್ರ್ಯಾಕ್ಟರ್ಗಳನ್ನು ತರಲು ಮಾತ್ರ ಅವಕಾಶ ನೀಡಲಾಗಿತ್ತು ಹಾಗೂ ಯಾವುದೇ ತೆರನಾದ ಅಸ್ತ್ರಗಳನ್ನು ಜೊತೆಯಲ್ಲಿ ತಾರದಂತೆ ಎಚ್ಚರಿಸಲಾಗಿತ್ತು,’ ಎಂದು ಶ್ರೀವಾಸ್ತವ ಹೇಳಿದರು.
‘ನಮ್ಮ ಎಲ್ಲಾ ಷರತ್ತುಗಳಿಗೆ ರೈತ ಮುಖಂಡರು ಸಮ್ಮತಿಸಿದ್ದರು. ಆದರೆ ಅವುಗಳನ್ನು ಉಲ್ಲಂಘಿಸಿ ಟ್ರ್ಯಾಕ್ಟರ್ ಱಲಿ ನಡೆಸುವಾಗ ಬ್ಯಾರಿಕೇಡ್ ಧ್ವಂಸಗೊಳಿಸಿದದರು. ಹಾಗಯೇ ಭಾಷಣ ಮಾಡುವುದಿಲ್ಲ ಅಂತ ಮಾತು ಕೊಟ್ಟವರು ಮಾತಿಗೆ ತಪ್ಪಿದರು. ಹಲವಾರು ರೈತ ಮುಖಂಡರು ಭಾಷಣ ಮಾಡಿದರು. 12ಕ್ಕೆ ಆರಂಭವಾಗಿದ್ದ ಱಲಿ ಬೆಳಗ್ಗೆ 8.30 ಕ್ಕೆ ಶುರುವಾಯಿತು. ರೈತರು ನಡೆಸಿದ ಹಿಂಸಾಚಾರದಲ್ಲಿ ಒಟ್ಟು 394 ಪೊಲೀಸರು ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅವರಿಗೆ ತೀವ್ರ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ,’ ಎಂದು ಶ್ರೀವಾಸ್ತವ ಹೇಳಿದರು.
ದೆಹಲಿ ಪೋಲಿಸ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ವರಿಷ್ಠ ಪೋಲಿಸ್ ಅಧಿಕಾರಿ ತಿಳಿಸಿದರು. ‘ಕೆಂಪು ಕೋಟೆ ಮೇಲೆ ಕೆಲವರು ಬಾವುಟ ಹಾರಿಸಿದ್ದು ದೊಡ್ಡ ಅಪರಾಧ. ಅದು ಪುರಾತತ್ವ ಸ್ಮಾರಕ ಆಗಿದ್ದು ಅಲ್ಲಲ್ಲಿ ಹಾನಿಯುಂಟಾಗಿದೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು ಇದುವರೆಗೆ ಸುಮಾರು 25ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ಗಳನ್ನು ದಾಖಲು ಮಾಡಿ 19 ಆರೋಪಿಗಳನ್ನು ಬಂಧಿಸಲಾಗಿದೆ. ರೈತ ಸಂಘಟನೆ ಮುಖಂಡರ ವಿರುದ್ಧವೂ ಕ್ರಮ ನಿಶ್ಚಿತವಾಗಿ ಜರುಗಿಸಲಾಗುತ್ತದೆ ಎಂದು ಶ್ರೀವಾಸ್ತವ ಹೇಳಿದರು.
ಸಿಸಿಟಿವಿ, ವಿಡಿಯೋ ತುಣುಕುಗಳನ್ನು ಸಂಗ್ರಹಿಸಲಾಗಿದೆ ಮತ್ತು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಿಡುವುದಿಲ್ಲ ಎನ್ನುವುದನ್ನು ಶ್ರೀವಾಸ್ತವ ಸ್ಪಷ್ಟಪಡಿಸಿದರು.
ಏತನ್ಮಧ್ಯೆ, ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಹ ಹೇಳಿಕೆಯೊಂದನ್ನು ನೀಡಿ ದೆಹಲಿಯಲ್ಲಿ ಟ್ರ್ಯಾಕ್ಟರ್ ಱಲಿ ವೇಳೆ ನಡೆದ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಹಿಂಸಾಚಾರಕ್ಕೆ ಕಾಂಗ್ರೆಸ್ನವರ ಕುಮ್ಮಕ್ಕೇ ಕಾರಣ, ಸುಳ್ಳು ಟ್ವೀಟ್ ಮಾಡಿದ್ದೇ ಹಿಂಸಾಚಾರಕ್ಕೆ ಕಾರಣವಾಗಿದೆ, ಹಿಂಸಾಚಾರಕ್ಕೆ ಪ್ರಚೋದಿಸಿದವರ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ಹೇಳಿದರು.