ಬೆಂಗಳೂರು ಸೆ.30: ಸಾಹಿತಿಗಳಿಗೆ (Literature) ಬೆದರಿಕೆ ಪತ್ರ (Threat Letter) ಬರೆದಿದ್ದ ಆರೋಪಿ ಬಂಧನ ಪ್ರಕರಣಕ್ಕೆ ಸಂಬಂಧಿಸಿಂದತೆ ಸಿಸಿಬಿ ಪೊಲೀಸರು ಕಳೆದ ಒಂದು ತಿಂಗಳಿಂದ ತನಿಖೆಗೆ ಇಳಿದಿದ್ದರು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹುಡುಕಾಡಿದ್ದರು. ಈ ವೇಳೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರೂ ಕೂಡ ಯಾವುದೇ ಆರೋಪಿಯ ಪತ್ತೆ ಆಗಿರಲಿಲ್ಲ. ಮೊದಲಿಗೆ ಪತ್ರಗಳು ಬಂದಿದ್ದ ಪೋಸ್ಟ್ ಅಫೀಸ್ ಪತ್ತೆ ಹಚ್ಚಿದ್ದರು. ನಂತರ ಎಲ್ಲಾ ಪೋಸ್ಟ್ ಅಫೀಸ್ಗಳ ಟವರ್ ಡಂಪ್ ಮಾಡಿದರು. ನಂತರ ಎಲ್ಲ ನಂಬರ್ಗಳ ಪರಿಶೀಲನೆ ಮಾಡಿದ್ದರು.
ಈ ವೇಳೆ ಎಲ್ಲ ಪೋಸ್ಟ್ ಅಫೀಸ್ಗಳ ಬಳಿ ಅಕ್ಟೀವ್ ಆಗಿದ್ದ ಕಾಮನ್ ನಂಬರ್ ಪತ್ತೆಯಾಗಿತ್ತು. ಇದನ್ನು ಆಧರಿಸಿ ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿ ಬೆದರಿಕೆ ಪತ್ರ ಬರೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕಳೆದ ಎರಡು ವರ್ಷಗಳಿಂದ ರಾಜ್ಯದ ಹಲವು ಕಡೆ ಬೆದರಿಕೆ ಪತ್ರಗಳ ಬಗ್ಗೆ ಕೇಸ್ ದಾಖಲಾಗಿತ್ತು. ಈ ಸಂಬಂಧ ಮುಖ್ಯಮಂತ್ರಿಗಳನ್ನ ಭೇಟಿಯಾಗಿ ಸಾಹಿತಿಗಳು ಮಾಹಿತಿ ನೀಡಿದ್ದರು. ಗೃಹ ಸಚಿವರು ಕೂಡ ಸಭೆ ನಡೆಸಿ ತನಿಖೆಗೆ ಸೂಚಿಸಿದ್ದರು. ಪ್ರಕರಣವನ್ನು ಸಿಸಿಬಿ ವರ್ಗಾವಣೆ ಮಾಡಿ ಡಿಜಿ-ಐಜಿಪಿ ಆದೇಶಿಸಿದ್ದರು. ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಿಲಾಗಿದೆ. ಆರೋಪಿ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಲ್ಲ ಸಾಹಿತಿಗಳಿಗೂ ಒಂದೇ ರೀತಿಯಲ್ಲಿ ಪತ್ರ ಬರೆದಿದ್ದಾನೆ. ಆರೋಪಿ ವಿರುದ್ಧ ಈ ಹಿಂದೆಯೂ 2 ಕೇಸ್ ಇರುವ ಮಾಹಿತಿ ಇದೆ. ಆರೋಪಿ ಎಂಟನೇ ತರಗತಿವರೆಗೂ ವ್ಯಾಸಂಗ ಮಾಡಿದ್ದಾನೆ. ಪ್ರಿಂಟಿಂಗ್ ಪ್ರೆಸ್ವೊಂದರಲ್ಲಿ ಆರೋಪಿ ಕೆಲಸ ಮಾಡುತ್ತಿದ್ದನು. ದಾವಣಗೆರೆ ಜಿಲ್ಲೆ ಹಿಂದು ಜಾಗರಣ ವೇದಿಕೆಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿಸಿದರು.
ಬೆದರಿಕೆ ಕರೆ ಬಂದಿರುವ ಬಗ್ಗೆ ಸಾಹಿತಿಗಳು ನನ್ನ ಬಳಿ ಹೇಳಿಕೊಂಡಿದ್ದರು. ಸಿಸಿಬಿ ಪೊಲೀಸರು ದಾವಣಗೆರೆ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ಅಧಿಕಾರಿಗಳು ಆ ಪತ್ರದ ಹಸ್ತಾಕ್ಷರ ನೋಡಿ ಆರೋಪಿ ಬಂಧಿಸಿದ್ದಾರೆ. ಬೆದರಿಕೆ ಪತ್ರ ಯಾರು ಬರೆಸುತ್ತಿದ್ದಾರೆ ಅನ್ನೋದು ತನಿಖೆ ಆಗಲಿದೆ. ಯಾವ ಸರ್ಕಾರ ಇದ್ದರೂ ಸಾಹಿತಿಗಳಿಗೆ ಜೀವ ಬೆದರಿಕೆ ಹಾಕುತ್ತಾರೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿ ಪತ್ತೆ: ಸಿಸಿಬಿ ವಿಚಾರಣೆ ವೇಳೆ ಸ್ಪೋಟಕ ಅಂಶ ಬಯಲು
ಶಿವಾಜಿರಾವ್ ಬಗ್ಗೆ ಪೊಲೀಸರು ಮಾಹಿತಿ ನೀಡಿದಾಗ ಗೊತ್ತಾಗಿದೆ. ನನ್ನ ಸಹೋದರ ಶಿವಾಜಿರಾವ್ಗೆ ಹಿಂದುತ್ವದ ಬಗ್ಗೆ ಒಲವು ಇತ್ತು. ಶಿವಮೊಗ್ಗದಲ್ಲಿ ಹಿಂದುತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದನು. ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿರುವ ಬಗ್ಗೆ ಕೇಳಿ ಶಾಕ್ ಆಗಿದೆ. ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದನು. ಇನ್ನೂ ಮದುವೆ ಆಗಿಲ್ಲ. ದಾವಣಗೆರೆ ನಗರದ EWS ಕಾಲೋನಿಯಲ್ಲಿ ಶಿವಾಜಿ ವಾಸವಾಗಿದ್ದನು. ಸೆ.28ರಂದು ಸಿಸಿಬಿ ಪೊಲೀಸರು ಶಿವಾಜಿ ರಾವ್ ಅನ್ನು ವಶಕ್ಕೆ ಪಡೆದಿದ್ದಾರೆ ಎಂದು ಶಿವಾಜಿ ಸಹೋದರ ಗುರುರಾಘವೇಂದ್ರ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ