Ugadi Rashi Bhavishya 2021: ವೃಷಭ ರಾಶಿ ಯುಗಾದಿ ಭವಿಷ್ಯ: ವೇತನ ಹೆಚ್ಚಳ, ನಿಯಮಿತವಾಗಿ ವ್ಯಾಯಾಮ ಮಾಡಿ
Ugadi yearly horoscope 2021: ಏಪ್ರಿಲ್ 13, 2021ರ ಯುಗಾದಿಯಿಂದ ಆರಂಭವಾಗುವ ಸಂವತ್ಸರದ ಫಲವು ಮುಂದಿನ ಯುಗಾದಿ ತನಕ ಅನ್ವಯ ಆಗುತ್ತದೆ. ಈ ಲೇಖನದಲ್ಲಿ ವೃಷಭ ರಾಶಿಯ ಸಂವತ್ಸರ ಫಲವನ್ನು ತಿಳಿಸಲಾಗುತ್ತಿದೆ.
ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದೆ ತಿಥಿ ಮಂಗಳವಾರದಂದು, ಅಂದರೆ ಏಪ್ರಿಲ್ 13, 2021ರಂದು ಚಾಂದ್ರಮಾನ ಯುಗಾದಿ ಇದೆ. ಪ್ಲವನಾಮ ಸಂವತ್ಸರದ ಆರಂಭದ ದಿನ ಅದು. ಯಾವ ರಾಶಿಗೆ ಹೇಗಿದೆ ಸಂವತ್ಸರ ಫಲ ಎಂದು ನೋಡುವ ಪರಿಪಾಠ ನಡೆದು ಬಂದಿದೆ. ಈ ಲೇಖನದಲ್ಲಿ ವೃಷಭ ರಾಶಿಯ ಫಲ ಏನು ಎಂಬುದನ್ನು ತಿಳಿಸಲಾಗುತ್ತದೆ. ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರು ಟಿವಿ9ಕನ್ನಡ ಡಿಜಿಟಲ್ ಓದುಗರಿಗಾಗಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪ್ಲವ ಸಂವತ್ಸರದಲ್ಲಿ ಶನಿ ಗ್ರಹ ಮಕರ ರಾಶಿಯಲ್ಲಿ ಇರುತ್ತದೆ. ಇನ್ನು ರಾಹು ಹಾಗೂ ಕೇತು ಗ್ರಹಗಳು ಕ್ರಮವಾಗಿ ವೃಷಭ ಮತ್ತು ವೃಶ್ಚಿಕ ರಾಶಿಗಳಲ್ಲಿ ಇರುತ್ತವೆ. ಗುರು ಗ್ರಹವು ಏಪ್ರಿಲ್ 6ರಿಂದ ಸೆಪ್ಟೆಂಬರ್ 14, 2021ರ ತನಕ ಹಾಗೂ ನವೆಂಬರ್ 20ರ ನಂತರ ಸಂವತ್ಸರದ ಕೊನೆ ತನಕವು ಕುಂಭ ರಾಶಿಯಲ್ಲೇ ಇರುತ್ತದೆ. ಈ ಮಧ್ಯೆ ಸೆಪ್ಟೆಂಬರ್ 14ರಿಂದ ನವೆಂಬರ್ 20ರವರೆಗೆ ಮಕರ ರಾಶಿಯಲ್ಲಿ ಇರುತ್ತದೆ.
ನೆನಪಿನಲ್ಲಿಡಿ, ಇಲ್ಲಿ ತಿಳಿಸುವುದು ಗೋಚಾರದ ಫಲ. ಯಾವುದೇ ವ್ಯಕ್ತಿಯ ದಶಾ ಮತ್ತು ಭುಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ದಶಾ ಸಂಧಿಗಳು, ಅಂದರೆ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವಾಗ ಮತ್ತು ರಾಹು ದಶೆ ಮುಗಿದು ಗುರು ದಶೆ ಶುರುವಾಗವಾಗ ಹಾಗೂ ಶುಕ್ರ ದಶೆ ಮುಗಿದು ರವಿ ದಶೆ ಆರಂಭವಾಗುವಾಗ ಎಚ್ಚರಿಕೆಯಿಂದ ಇರುಬೇಕು ಮತ್ತು ಸೂಕ್ತ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ಇನ್ನು ರಾಶಿಗಳ ಗೋಚಾರ ಫಲಗಳತ್ತ ನೋಡೋಣ
ವೃಷಭ ರಾಶಿ: (ಕೃತ್ತಿಕಾ 2,3,4ನೇ ಪಾದ, ರೋಹಿಣಿ 1,2,3,4ನೇ ಪಾದ, ಮೃಗಶಿರಾ 1ನೇ ಪಾದ) ಕಾಲಪುರುಷನ ಎರಡನೇ ರಾಶಿ ಇದು. ರಾಶ್ಯಾಧಿಪತಿ ಶುಕ್ರ. ಇವರು ಆರಂಭಶೂರರು. ಯಾವುದೇ ಕೆಲಸವಾಗಲೀ ಶುರು ಮಾಡುವಾಗ ಇರುವ ಉತ್ಸಾಹ ಪೂರ್ಣಗೊಳಿಸುವುದರಲ್ಲಿ ಇರುವುದಿಲ್ಲ. ನಾಲ್ಕು ಜನರ ಮಧ್ಯೆ ಇರುವಾಗ ಆಕರ್ಷಣೆಯ ಕೇಂದ್ರಬಿಂದು ಆಗಿರುತ್ತಾರೆ. ಗಂಡಸರಾಗಿದ್ದಲ್ಲಿ ಮೊಬೈಲ್, ಲ್ಯಾಪ್ಟಾಪ್, ಪರ್ಫ್ಯೂಮ್, ಚಿನ್ನದ ಆಭರಣ ಇಂಥವುಗಳ ಬಗ್ಗೆ ವಿಪರೀತ ವ್ಯಾಮೋಹ ಇರುತ್ತದೆ. ಮಹಿಳೆಯರ ಮಧ್ಯೆ ಬಹಳ ಖ್ಯಾತರಾಗಿರುತ್ತಾರೆ. ಇನ್ನು ಮಹಿಳೆಯರು ಅಲಂಕಾರಪ್ರಿಯ ಸ್ವಭಾವ ಹೇಗಿರುತ್ತದೆ ಅಂದರೆ, ಅದೇ ವಿಷಯಕ್ಕೆ ಇವರು ಎಲ್ಲಿದ್ದರೂ ಜಗಳಕ್ಕೆ ಕಾರಣ ಆಗುತ್ತಿರುತ್ತದೆ. ಚಿತ್ರರಂಗ, ಷೇರು ಮಾರುಕಟ್ಟೆ, ಹಣಕಾಸು ವಲಯ, ವಸ್ತ್ರಾಭರಣಗಳ ಮಾರಾಟ ಕ್ಷೇತ್ರ, ಫ್ಯಾಷನ್ ಡಿಸೈನಿಂಗ್ ಇಂಥ ಕ್ಷೇತ್ರಗಳಲ್ಲಿ ಹೆಚ್ಚಿನ ಭಾಗ ಕಾಣಿಸಿಕೊಳ್ಳುವವರು ಇವರೇ. ಒಂದು ಕೆಲಸವನ್ನು ಹಿಡಿದರೆ ಪೂರ್ತಿ ಆಗುವ ತನಕ ಅದೇ ಉತ್ಸಾಹ ಉಳಿಸಿಕೊಂಡಲ್ಲಿ ಇವರು ಅದ್ಭುತವಾದದ್ದನ್ನು ಸಾಧಿಸಬಲ್ಲರು.
ಈ ವರ್ಷ 9ನೇ ಮನೆಯಲ್ಲಿನ ಶನಿಯಿಂದ ತಂದೆಯ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಯಾವುದೇ ಕೆಲಸ ಆದರೂ ಒಂದು ಸಲಕ್ಕೆ ಮುಗಿಯುವುದಿಲ್ಲ. ಪಿತ್ರಾರ್ಜಿತ ಆಸ್ತಿ ವಿಚಾರಗಳಲ್ಲಿ ಸಣ್ಣ- ಪುಟ್ಟದಾದ್ದರೂ ಮನಸ್ತಾಪಗಳಾಗುವ ಅವಕಾಶಗಳಿವೆ. ಅದರಲ್ಲೂ ಸೆಪ್ಟೆಂಬರ್ನಿಂದ ನವೆಂಬರ್ ಮಧ್ಯೆ ನಿಮ್ಮ ತಪ್ಪು ಗ್ರಹಿಕೆಯಿಂದ ಮನೆಯಲ್ಲಿ ತಂದೆಯ ಜತೆಗೆ ಅಥವಾ ತಂದೆಗೆ ಸಮಾನರಾದವರ ಜತೆಗೆ ಮಾತು ಬಿಡುವಂತಾಗುತ್ತದೆ. ಈಗಾಗಲೇ ಮಾಡಿದ ಹೂಡಿಕೆಯಲ್ಲಿ ನಷ್ಟವಾಗುತ್ತದೆ. ಸೋದರ- ಸೋದರಿಯರಿಗೆ ವಹಿಸಿದ ಕೆಲಸದಲ್ಲಿ ನಷ್ಟ ಕಾಣುವಂತಾಗುತ್ತದೆ. ಕಾಲಿನ ಮೀನಖಂಡದಲ್ಲಿ ನೋವು ಕಾಣಿಸಿಕೊಳ್ಳಲಿದೆ. ಆದ್ದರಿಂದ ತೂಕದ ಕಡೆಗೆ ಹೆಚ್ಚಿನ ಗಮನ ನೀಡಿ. ರಾತ್ರಿಯ ವೇಳೆ ತಡವಾಗಿ ಊಟ ಮಾಡುವುದನ್ನು ನಿಲ್ಲಿಸಿ, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಸಮಸ್ಯೆಯನ್ನು ತಡೆಯಬಹುದು.
ಇನ್ನು ವರ್ಷದ ಬಹುತೇಕ ಸಮಯ ಹತ್ತನೇ ಮನೆಯಲ್ಲಿ ಗುರು ಗ್ರಹ ಇರುವುದರಿಂದ ಒಂದು ಬಡ್ತಿ ಸಿಗುವ ಅವಕಾಶ ಇದೆ. ಜತೆಗೆ ವೇತನ ಹೆಚ್ಚಳವನ್ನು ಸಹ ನಿರೀಕ್ಷೆ ಮಾಡಬಹುದು. ಆದರೆ ಈ ಅವಧಿಯಲ್ಲಿ ಹಿತಶತ್ರುಗಳ ಕಾಟ ಹೆಚ್ಚಾಗಿರುತ್ತದೆ. ಇತರರ ಬಗ್ಗೆ ಮಾತನಾಡುವಾಗ ನಾಲಗೆ ಮೇಲೆ ಹಿಡಿತ ಇರಲಿ. ಹಗುರವಾದ ಮಾತುಗಳನ್ನಾಡಿ, ಯಾರ ಕಿವಿಗೆ ಬೀಳಬಾರದೋ ಅವರದೇ ಕಿವಿಗೆ ನಿಮ್ಮ ಮಾತು ಬಿದ್ದು, ಗೌರವವನ್ನು ಕಳೆದುಕೊಳ್ಳುವಂತಾಗುತ್ತದೆ. ಸೆಪ್ಟೆಂಬರ್ನಿಂದ ನವೆಂಬರ್ ಮಧ್ಯೆ ಇತರರ ಮಾತನ್ನು ನಂಬಿಕೊಂಡು, ಕೆಲಸ ಬದಲಾವಣೆ ಮಾಡದಿರಿ. ಅದರಲ್ಲೂ ವಿದೇಶದಲ್ಲಿನ ಕೆಲಸ ಅಥವಾ ಹೂಡಿಕೆಯಂತೂ ಕಡ್ಡಾಯವಾಗಿ ಮಾಡಬೇಡಿ. ಇದರಿಂದ ಆ ನಂತರ ತುಂಬ ನೊಂದುಕೊಳ್ಳುವಂತಾಗುತ್ತದೆ.
ಈ ವರ್ಷದಲ್ಲಿ ನಿಮ್ಮಲ್ಲೊಂದು ಅಪರಿಮಿತವಾದ ಆತ್ಮವಿಶ್ವಾಸ ಇರುತ್ತದೆ. ಯಾವುದನ್ನಾದರೂ ಜಯಿಸಬಲ್ಲೆ ಎಂಬ ನಿಮ್ಮ ಉತ್ಸಾಹಕ್ಕೆ ಪೂರಕವಾಗಿ ಬೆಳವಣಿಗೆಗಳು ಆಗುತ್ತವೆ. ಆದರೆ, ನೆನಪಿನಲ್ಲಿಡಿ: ವಿವಾಹದ ಹೊರತಾದ ಸಂಬಂಧದ ಕಡೆಗೆ ನೋಡದಿರಿ. ಗಂಡಸರೇ ಇರಲಿ, ಹೆಂಗಸರೇ ಇರಲಿ ನೈತಿಕತೆ ಬಗ್ಗೆ ಗೌರವ ಇಟ್ಟುಕೊಂಡು ನಡೆದುಕೊಳ್ಳಿ. ಇತರರ ಹಣವನ್ನು ಹೇಗಾದರೂ ಒಳಗೆ ಹಾಕಿಕೊಳ್ಳುವ ಆಲೋಚನೆ ಬಾರದಿರಲಿ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ದೊರೆಯುವುದು ಕಷ್ಟ. ಇದಕ್ಕಾಗಿ ಬಹಳ ಪರಿಶ್ರಮ ಪಡಬೇಕಾಗುತ್ತದೆ. ಮಹಿಳೆಯರಿಗೆ ಚರ್ಮದ ಕಾಯಿಲೆಗಳು ಕಾಣಿಸಬಹುದು, ಎಚ್ಚರಿಕೆಯಿಂದ ಇರಿ.
ಇನ್ನು ಯುಗಾದಿ ಫಲದ ಪ್ರಕಾರ, ಆದಾಯ: 2, ವ್ಯಯ: 8, ರಾಜ ಮರ್ಯಾದೆ: 7, ಅವಮಾನ: 3
ವಿಷ್ಣುವಿನ ಆರಾಧನೆ ಮಾಡಿ. ಭಿಕ್ಷುಕರಿಗೆ ವಸ್ತ್ರ ದಾನ ಮಾಡಿ.
ಇದನ್ನೂ ಓದಿ: Ugadi Rashi Bhavishya 2021: ಮೇಷ ರಾಶಿ ಯುಗಾದಿ ಭವಿಷ್ಯ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಿದೇಶ ಪ್ರಯಾಣ ಯೋಗ
ಇದನ್ನೂ ಓದಿ: Jupiter Transit 2021: ಏ. 6ಕ್ಕೆ ಕುಂಭ ರಾಶಿಗೆ ಗುರು ಗ್ರಹ ಪ್ರವೇಶ, ಮೇಷದಿಂದ ಮೀನದ ತನಕ ಏನು ಫಲ?