Ugadi Rashi Bhavishya 2021: ಮೇಷ ರಾಶಿ ಯುಗಾದಿ ಭವಿಷ್ಯ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಿದೇಶ ಪ್ರಯಾಣ ಯೋಗ
Ugadi yearly horoscope 2021: ಏಪ್ರಿಲ್ 13, 2021ರ ಯುಗಾದಿಯಿಂದ ಆರಂಭವಾಗುವ ಸಂವತ್ಸರದ ಫಲವು ಮುಂದಿನ ಯುಗಾದಿ ತನಕ ಅನ್ವಯ ಆಗುತ್ತದೆ. ಈ ಲೇಖನದಲ್ಲಿ ಮೇಷ ರಾಶಿಯ ಸಂವತ್ಸರ ಫಲವನ್ನು ತಿಳಿಸಲಾಗುತ್ತಿದೆ.
ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದೆ ತಿಥಿ ಮಂಗಳವಾರದಂದು, ಅಂದರೆ ಏಪ್ರಿಲ್ 13, 2021ರಂದು ಚಾಂದ್ರಮಾನ ಯುಗಾದಿ ಇದೆ. ಪ್ಲವನಾಮ ಸಂವತ್ಸರದ ಆರಂಭದ ದಿನ ಅದು. ಹಿಂದೂ ಸಂಪ್ರದಾಯದ ಪ್ರಕಾರ, ಚಾಂದ್ರಮಾನ ಯುಗಾದಿ ಅಂದರೆ ಹೊಸ ವರ್ಷದ ದಿನ ಇದು. ಯುಗಾದಿಯಂದು ಯಾವ ರಾಶಿಗೆ ಹೇಗಿದೆ ಸಂವತ್ಸರ ಫಲ ಎಂದು ನೋಡುವ ಪರಿಪಾಠ ನಡೆದು ಬಂದಿದೆ. ಈ ಲೇಖನ ಸರಣಿಯಲ್ಲಿ ಮೇಷದಿಂದ ಮೀನ ರಾಶಿಯ ತನಕ ಯಾವ ರಾಶಿಗೆ ಏನು ಫಲ ಎಂಬುದನ್ನು ತಿಳಿಸಲಾಗುತ್ತದೆ. ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರು ಟಿವಿ9 ಕನ್ನಡ ಡಿಜಿಟಲ್ ಓದುಗರಿಗಾಗಿ ಈ ಮಾಹಿತಿ ನೀಡಿದ್ದಾರೆ.
ಪ್ಲವ ಸಂವತ್ಸರದಲ್ಲಿ ಪ್ರಮುಖ ಗ್ರಹಗಳ ಸ್ಥಿತಿಯನ್ನು ಮೊದಲಿಗೆ ತಿಳಿದುಕೊಂಡು ಬಿಡಿ. ಮುಂದಿನ ಯುಗಾದಿ ತನಕ ಶನಿ ಗ್ರಹ ಮಕರ ರಾಶಿಯಲ್ಲಿ ಇರುತ್ತದೆ. ಇನ್ನು ರಾಹು ಹಾಗೂ ಕೇತು ಗ್ರಹಗಳು ಕ್ರಮವಾಗಿ ವೃಷಭ ಮತ್ತು ವೃಶ್ಚಿಕ ರಾಶಿಗಳಲ್ಲಿ ಇರುತ್ತವೆ. ಗುರು ಗ್ರಹವು ಏಪ್ರಿಲ್ 6ರಿಂದ ಸೆಪ್ಟೆಂಬರ್ 14, 2021ರ ತನಕ ಹಾಗೂ ನವೆಂಬರ್ 20ರ ನಂತರ ಸಂವತ್ಸರದ ಕೊನೆ ತನಕವು ಕುಂಭ ರಾಶಿಯಲ್ಲೇ ಇರುತ್ತದೆ. ಈ ಮಧ್ಯೆ ಸೆಪ್ಟೆಂಬರ್ 14ರಿಂದ ನವೆಂಬರ್ 20ರವರೆಗೆ ಮಕರ ರಾಶಿಯಲ್ಲಿ ಇರುತ್ತದೆ.
ನೆನಪಿನಲ್ಲಿಡಿ, ಇಲ್ಲಿ ತಿಳಿಸುವುದು ಗೋಚಾರದ ಫಲ. ಯಾವುದೇ ವ್ಯಕ್ತಿಯ ದಶಾ ಮತ್ತು ಭುಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ದಶಾ ಸಂಧಿಗಳು, ಅಂದರೆ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವಾಗ ಮತ್ತು ರಾಹು ದಶೆ ಮುಗಿದು ಗುರು ದಶೆ ಶುರುವಾಗವಾಗ ಹಾಗೂ ಶುಕ್ರ ದಶೆ ಮುಗಿದು ರವಿ ದಶೆ ಆರಂಭವಾಗುವಾಗ ಎಚ್ಚರಿಕೆಯಿಂದ ಇರುಬೇಕು ಮತ್ತು ಸೂಕ್ತ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ಇನ್ನು ರಾಶಿಗಳ ಗೋಚಾರ ಫಲಗಳತ್ತ ನೋಡೋಣ
ಮೇಷ ರಾಶಿ: (ಅಶ್ವಿನಿ 1,2,3,4ನೇ ಪಾದ, ಭರಣಿ 1,2,3,4ನೇ ಪಾದ, ಕೃತ್ತಿಕಾ 1ನೇ ಪಾದ) ಕಾಲಪುರುಷನ ಮೊದಲ ರಾಶಿ ಇದು. ರಾಶ್ಯಾಧಿಪತಿ ಕುಜ. ಹಿಡಿದ ಕೆಲಸವನ್ನು ಪಟ್ಟು ಹಿಡಿದು ಮುಗಿಸುವುದರಲ್ಲಿ ಇವರಿಗೆ ಇವರೇ ಸಮ. ಜತೆಗೆ ಒಂದಿಷ್ಟು ಹುಂಬತನ ಇರುತ್ತದೆ. ನಾನು ಹೇಳಿದಂತೆಯೇ ಕೇಳಬೇಕು ಎಂಬ ಹಠದ ಸ್ವಭಾವ ಇವರದು. ಆ ಕಾರಣಕ್ಕೆ ಟಗರಿನ ಚಿಹ್ನೆಯ ಮೇಷ ರಾಶಿಯವರು ಬಂಡೆಗೆ ತಲೆ ಚಚ್ಚಿಕೊಳ್ಳುತ್ತಾರೆ. ಆದರೆ ಇವರು ಇರಿಸಿಕೊಳ್ಳುವ ಗುರಿ ಬಹಳ ಎತ್ತರದಲ್ಲಿ ಇರುತ್ತದೆ. ಎಷ್ಟೇ ಅಡೆತಡೆ ಬಂದರೂ ಪ್ರತಿಕೂಲ ವಾತಾವರಣದಲ್ಲೂ ಏರುತ್ತಾ ಸಾಗಿ ಬಿಡುತ್ತಾರೆ. ಸಿಟ್ಟು ಇವರ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು.
ಈ ವರ್ಷ ಹತ್ತನೇ ಮನೆಯಲ್ಲಿನ ಶನಿ ಉದ್ಯೋಗ ಸ್ಥಳದಲ್ಲಿ ಇವರಿಗೆ ಕಿರಿಕಿರಿ ಮಾಡುತ್ತಾನೆ. ಇವರು ಹೇಳಿದ ವಿಚಾರವನ್ನು ಬೇರೆ ರೀತಿಯಲ್ಲಿ ಅರ್ಥೈಸಿ, ಮಾನಸಿಕವಾಗಿ ಹಿಂಸೆ ನೀಡಲಾಗುತ್ತದೆ. ಆದರೆ ಇವರು ಯಾವುದೇ ಸಂದರ್ಭದಲ್ಲೂ ದೈವ ಭಕ್ತಿಯನ್ನು ಕಳೆದುಕೊಳ್ಳಬಾರದು. ಇನ್ನು ಪಾಪ ಕರ್ಮಾಸಕ್ತಿ ಹೆಚ್ಚಾಗಲಿದ್ದು, ಹೀಗೆ ಮಾಡಿದಲ್ಲಿ ಏನಾದೀತು ಎಂಬ ಧೋರಣೆ ಇವರಲ್ಲಿ ಮೂಡುತ್ತದೆ. ಒಂದಕ್ಕೆರಡರಂತೆ ಖರ್ಚು, ಅಂದುಕೊಂಡ ಕೆಲಸ ಮಾಡುವುದಕ್ಕೆ ಸಾಲ ತಂದರೂ ಪೂರೈಸಲು ಸಾಧ್ಯವಾಗಲ್ಲ ಎಂಬ ಸ್ಥಿತಿ ಏರ್ಪಡುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ನೀಡಬೇಕಾಗುತ್ತದೆ. ಅದಕ್ಕಾಗಿ ಖರ್ಚಿನ ಪ್ರಮಾಣ ಜಾಸ್ತಿ ಆಗಲಿದೆ. ಮನೆಯಲ್ಲಿ ಜವಾಬ್ದಾರಿ ಇಲ್ಲ ಎಂಬ ಮಾತು ಕೇಳಬೇಕಾಗುತ್ತದೆ. ಪಾರ್ಟನರ್ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಕಡಿಮೆ ಆಗುತ್ತದೆ.
ಇನ್ನು ವರ್ಷದ ಬಹುತೇಕ ಸಮಯ ಗುರುವಿನ ಅನುಗ್ರಹ ಇರುವುದರಿಂದ ವಿದೇಶ ಪ್ರಯಾಣದ ಯೋಗ ಇದೆ. ಆದರೆ ಸೆಪ್ಟೆಂಬರ್ನಿಂದ ನವೆಂಬರ್ ಮಧ್ಯೆ ಕಾಗದ- ಪತ್ರಗಳ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಉಳಿದಂತೆ ಈ ವರ್ಷ ಸೋದರ- ಸೋದರಿಯರ ಬೆಂಬಲ ನಿಮಗೆ ಸಿಗಲಿದೆ. ಬಹಳ ದಿನಗಳಿಂದ ಕೋರ್ಟ್ ಕಚೇರಿ ವ್ಯಾಜ್ಯಗಳು ಬಾಕಿ ಇದ್ದಲ್ಲಿ ರಾಜೀ- ಸಂಧಾನದ ಮೂಲಕ ಬಗೆಹರಿಯಬಹುದು. ಅದಕ್ಕೆ ಹಿರಿಯರ ನೆರವು ದೊರಕುವ ಸಾಧ್ಯತೆ ಇದೆ. ವಿದೇಶಗಳಲ್ಲಿ ವ್ಯವಹಾರ- ವ್ಯಾಪಾರ ಮಾಡಿಕೊಂಡಿದ್ದವರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ. ಮಕ್ಕಳ ಮದುವೆಗಾಗಿ ಸಂಬಂಧ ಹುಡುಕುತ್ತಿದ್ದಲ್ಲಿ ಸೂಕ್ತ ಸಂಬಂಧ ದೊರೆಯಲಿದೆ. ಮಕ್ಕಳ ಮೂಲಕ ನಿಮ್ಮ ಕೀರ್ತಿ- ಪ್ರತಿಷ್ಠೆ ಹೆಚ್ಚಾಗಲಿದೆ.
ಹಣಕಾಸು ಹರಿವಿನ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಮಸ್ಯೆ ಏನೂ ಇಲ್ಲ. ಸ್ನೇಹಿತರೋ ಸಂಬಂಧಿಕರಿಂದಲೋ ಸಹಾಯ ಒದಗಿಬರಲಿದೆ. ಹೊಸಬರ ಜತೆಗೆ ಸ್ನೇಹ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಔಷಧೋಪಚಾರಗಳನ್ನು ತೆಗೆದುಕೊಳ್ಳುತ್ತಿರುವವರು ಒಂದಕ್ಕೆ ಎರಡು ಬಾರಿ ಎಕ್ಸ್ಪೈರಿ ದಿನಾಂಕ ಇತ್ಯಾದಿಗಳನ್ನು ನೋಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಬಹಳ ಕಷ್ಟವಾಗುತ್ತದೆ. ಮಹಿಳೆಯರಿಗೆ ಮನೆಯಲ್ಲಿ ಅನುಮಾನದ ಕಣ್ಣುಗಳಿಂದ ಸವಾಲುಗಳು ಎದುರಾಗುತ್ತವೆ.
ಈ ಯುಗಾದಿ ಫಲದ ಪ್ರಕಾರ, ನಿಮ್ಮ ಆದಾಯ- 8, ವ್ಯಯ- 14, ರಾಜಮರ್ಯಾದೆ-4, ಅವಮಾನ- 3.
ಸುಬ್ರಹ್ಮಣ್ಯ ಸ್ವಾಮಿ ಹಾಗೂ ಶನೈಶ್ಚರ ಆರಾಧನೆ ಮಾಡಿ.
ಇದನ್ನೂ ಓದಿ: Jupiter Transit 2021: ಏ. 6ಕ್ಕೆ ಕುಂಭ ರಾಶಿಗೆ ಗುರು ಗ್ರಹ ಪ್ರವೇಶ, ಮೇಷದಿಂದ ಮೀನದ ತನಕ ಏನು ಫಲ?
Published On - 12:00 pm, Mon, 29 March 21