ಸುದ್ದಿ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ, ಶ್ರೀರಾಮುಲು ಭವಿಷ್ಯದ ಮೇಲೆ ಸಿಡಿ ರಾಜಕಾರಣದ ನೆರಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 15, 2021 | 8:29 PM

ರಮೇಶ್​ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಹಿಂದಿರುವ ಮಹಾನಾಯಕ ಯಾರು ಎಂಬುದು ನಿರ್ಧಾರವಾಗುವ ಮೊದಲೇ ವಾಲ್ಮೀಕಿ ಸಮುದಾಯ ಜಾರಕಿಹೊಳಿ ಅವರ ಹಿಂದೆ ನಿಲ್ಲಬಹುದು ಮತ್ತು ಈ ಮಧ್ಯೆ ಬಿ. ಶ್ರೀರಾಮುಲು ಇದನ್ನೇ ಉಪಯೋಗಿಸಿಕೊಂಡು ತನ್ನ ಕೈ ಬಲಪಡಿಸಿಕೊಳ್ಳುವ ಸಾಧ್ಯತೆ ಇದೆ.

ಸುದ್ದಿ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ, ಶ್ರೀರಾಮುಲು ಭವಿಷ್ಯದ ಮೇಲೆ ಸಿಡಿ ರಾಜಕಾರಣದ ನೆರಳು
ರಮೇಶ್ ಜಾರಕಿಹೊಳಿ ಮತ್ತು ಬಿ.ಶ್ರೀರಾಮುಲು
Follow us on

ಅದು 2007 ರ ಅಕ್ಟೋಬರ್​ ತಿಂಗಳು. ಅಂದಿನ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೇ ಒಂದು ರಾಜಕೀಯ ಆಟ ಆಡಿದ್ದರು. ಶೇರು ಬಜಾರಿನಂತೆ ಕರ್ನಾಟಕದ ರಾಜಕೀಯ ಆಟ ಮೇಲೆ ಕೆಳಗೆ ಓಡಾಡಿ, ಕೊನೆಗೆ ರಾಷ್ಟ್ರಪತಿ ಆಡಳಿತ ಬರುವಂತಾಯ್ತು. ಕಾಂಗ್ರೆಸ್​ ಮತ್ತು ಜೆಡಿಎಸ್​ ಆಗ ಅಂದುಕೊಂಡಿದ್ದೇನೆಂದರೆ, ಆರು ತಿಂಗಳಲ್ಲಿ ಜನ ಎಲ್ಲ ಮರೆಯುತ್ತಾರೆ. ಹಾಗಾಗಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಯಾವ ಅನುಕಂಪವೂ ಸಿಗದು. ತುಂಬಾ ಜನ ಪತ್ರಕರ್ತರೂ ಇದನ್ನೇ ನಂಬಿದ್ದರು. ಆದರೆ, 2008ರ ಮೇ ತಿಂಗಳಿನಲ್ಲಿ ಆಗಿದ್ದೇ ಬೇರೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂತು. ಅಂದರೆ, ಅಧಿಕಾರ ಹಸ್ತಾಂತರ ಮಾಡದ ಕುಮಾರಸ್ವಾಮಿಯವರನ್ನು, ಲಿಂಗಾಯತರು ಮತ್ತು ಬೇರೆ ಸಮುದಾಯದ ಜನ ಕ್ಷಮಿಸಲಿಲ್ಲ.

ಸಾಂವಿಧಾನಿಕ ನೈತಿಕತೆಯ ಆಧಾರದ ಮೇಲೆ ಕುಮಾರಸ್ವಾಮಿ ಅವರ ಕೃತ್ಯವನ್ನು ಪರಾಮರ್ಶಿಸಿದರೆ, ಅಧಿಕಾರ ಹಸ್ತಾಂತರ ಮಾಡದ ಕುಮಾರಸ್ವಾಮಿ ಯಾವ ತಪ್ಪನ್ನು ಮಾಡಿರಲಿಲ್ಲ. ಆದರೆ, ಮತದಾರರು ನೋಡುವ ನೈತಿಕ ತಳಹದಿಯೇ ಬೇರೆ. ಮತದಾರರ ತಿಳುವಳಿಕೆ ದಿನನಿತ್ಯದ ನೈತಿಕೆಯನ್ನು ಆಧರಿಸಿದೆ. 2008ರ ಚುನಾವಣೆಯಲ್ಲಿ ಮತ್ತೆ ಆ ಮಾತು ದೃಢಪಟ್ಟಿತು. ಕೊಟ್ಟ ಮಾತು ತಪ್ಪಿದರು ಕುಮಾರಸ್ವಾಮಿ. ಹಾಗಾಗಿ ಯಡಿಯೂರಪ್ಪ ಅವರಿಗೆ ಒಂದು ಅವಕಾಶ ಕೊಡಬೇಕು- ಎಂಬ ಒಂದೇ ತಿಳುವಳಿಕೆಯೊಂದಿಗೆ ಜನ ಬಿಜೆಪಿಗೆ 110 ಸ್ಥಾನ ನೀಡಿದರು. Promise given is promise kept ಎಂಬ ಇಂಗ್ಲಿಷ್​ ಗಾದೆಯಂತೆ, ಮಾತು ಕೊಡುವುದು ಎಂದರೆ ಅದೇ ರೀತಿ ನಡೆದುಕೊಂಡಂತೆ. ಉಳಿದದ್ದು ಈಗ ಇತಿಹಾಸ.

ಈಗ ಇತಿಹಾಸದ ನೆನಪೇಕೆ?
ಈಗ ನಾವು ಚರ್ಚೆ ಮಾಡ ಹೊರಟಿರುವುದು ಕೊಟ್ಟ ಮಾತಿನಂತೆ ನಡೆದುಕೊಳ್ಳೋ ವಿಚಾರದ ಬಗ್ಗೆ ಅಲ್ಲ. ರಾಜಕೀಯ ವಿಚಾರಗಳಿಗೆ ಜನ ಹೇಗೆ, ನೈತಿಕ ನೆಲೆಗಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳುತ್ತಾರೆ ಹಾಗೂ ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಯಾವ ರೀತಿಯ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಪ್ರಶ್ನೆಗಳನ್ನು ತುಸು ಪರಿಶೀಲಿಸೋಣ.

ರಮೇಶ್​ ಜಾರಕಿಹೊಳಿ ಅವರು ಕೊಟ್ಟ ದೂರಿನ ಪ್ರಕಾರ ಇದು ಫೇಕ್​ ಸಿಡಿ. ಇದನ್ನು ಯಾರು ಮಾಡಿದ್ದಾರೋ ಗೊತ್ತಿಲ್ಲ. ಯಾರ ಹೆಸರನ್ನು ತಮ್ಮ ದೂರಿನಲ್ಲಿ ನಮೂದಿಸಿರದ ಜಾರಕಿಹೊಳಿ ದೂರು ಕೊಟ್ಟ ಒಂದು ಗಂಟೆ ಒಳಗೆ, ಓರ್ವ ಹುಡುಗಿ ತನಗೆ ರಮೇಶ್​ ಜಾರಕಿಹೊಳಿ ಕೆಲಸ ಕೊಡಿಸುತ್ತೇನೆ ಎಂದು ಅನ್ಯಾಯ ಮಾಡಿದ್ದಾರೆ. ಹಾಗಾಗಿ ತನಗೆ ನ್ಯಾಯ ಕೊಡಿಸಿ ಎಂದು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಅವರಿಗೆ ಮನವಿ ಮಾಡಿದ ವಿಡಿಯೋ ಹೊರಬಿದ್ದಿದೆ. ಇನ್ನು ಪೊಲೀಸರು ಈ ಕುರಿತು ಸುದೀರ್ಘ ತನಿಖೆ ನಡೆಸಬೇಕಾಗಿದೆ. ಅದಾದ ನಂತರವಷ್ಟೇ ಈ ಸಿಡಿ ಪ್ರಕರಣದ ಸ್ಪಷ್ಟ ಚಿತ್ರಣ ಹೊರ ಬರುತ್ತದೆ. ಆದರೆ ಜನ ಅಲ್ಲೀವರೆಗೆ ಸುಮ್ಮನೆ ಕೂಡುವುದಿಲ್ಲ. ಅವರು ಮಾತನಾಡುತ್ತಿರುವುದೇನು? ಅವರ ನೈತಿಕ ಮೌಲ್ಯದ ಅಳತೆ ಮಾಪನ ಏನು ಹೇಳುತ್ತಿದೆ?

ಇದನ್ನೂ ಓದಿ: ಲ್ಯಾಬ್​ನಲ್ಲಿ ಟೆಸ್ಟ್ ಆದರೆ ವಿಡಿಯೋದ ಸತ್ಯಾಸತ್ಯತೆ ತಿಳಿಯಲಿದೆ; ಬಾಲಚಂದ್ರ ಜಾರಕಿಹೊಳಿ

ಸಚಿವ ಬಿ.ಶ್ರೀರಾಮುಲು

ಹೆಚ್ಚಲಿದೆಯೇ ಶ್ರೀರಾಮುಲು ಪ್ರಭಾವ?
ಎದುರಿಗೆ ಬಂದಾಗ ಹಾರ ತುರಾಯಿ ಹಾಕಿ ಎದುರಿಗಿರುವ ನಾಯಕರುಗಳನ್ನು ಹೊಗಳುವ ಸಾಮಾನ್ಯ ಜನ, ಖಾಸಗಿಯಾಗಿ ತುಂಬಾ ನೇತ್ಯಾತ್ಮಕವಾಗಿ ನೋಡುವುದು ಹೊಸದಲ್ಲ. ಈಗಲೂ ಆ ಅಭಿಪ್ರಾಯದಲ್ಲಿ ಯಾವ ಬದಲಾವಣೆ ಕಾಣ ಸಿಗದು. ಆದರೆ, ನಾವು ಗಮನಿಸಬೇಕಾದ್ದು, ರಮೇಶ್​ ಜಾರಕಿಹೊಳಿ ಅವರ ವಾಲ್ಮೀಕಿ (ನಾಯಕ) ಸಮುದಾಯ ಮತ್ತು ಎಸ್​ಟಿ ಸಮುದಾಯಗಳು ಯಾವ ರೀತಿ ನೋಡಬಹುದು ಮತ್ತು ಮುಂದಿನ ದಿನಗಳಲ್ಲಿ ಹೇಗೆ ಪ್ರತಿಕ್ರಿಯಿಸಬಹುದು? ನಾಯಕ ಸಮುದಾಯದ ಜನರ ರಾಜಕೀಯ ಪ್ರಜ್ಞೆ ಮತ್ತು ರಾಜಕೀಯ ಪ್ರತಿಕ್ರಿಯೆಗಳೆಲ್ಲ ಭಾವನಾತ್ಮಕ ಆಧಾರದ ಮೇಲೆ ನಿಂತಿದೆ. ಅಂದರೆ, ತಮ್ಮ ಸಮುದಾಯದ  ನಾಯಕರನ್ನು ತುಂಬಾ ಪ್ರೀತಿಸುವ ಇವರ ಆಯ್ಕೆ ಬಗ್ಗೆ ಕುತೂಹಲ ಇದೆ.

ರಾಯಚೂರಿನಿಂದ ಚಿತ್ರದುರ್ಗದ ತನಕ ಹಂಚಿಹೋಗಿರುವ ಮತ್ತು ಇನ್ನು ಕೆಲವು ಕಡೆ ಇರುವ ಕ್ಷೇತ್ರಗಳಲ್ಲಿ ಇರುವ ನಾಯಕ ಜನಾಂಗವನ್ನು ಸೇರಿದಂತೆ ಎಸ್​ಟಿ ಸಮುದಾಯ, ಸುಮಾರು 40 ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಪ್ರಭಾವ ಬೀರಬಹುದಾಗಿದೆ. ರಾಯಚೂರಿನಿಂದ ಚಿತ್ರದುರ್ಗದ ತನಕ ಈ ಸಮುದಾಯಕ್ಕೆ ಬಿಜೆಪಿಯ ಬಿ. ಶ್ರೀರಾಮುಲು ಬಹಳ ಪ್ರಭಾವಿ ನಾಯಕ. ಸಮುದಾಯದ ಕೆಲವರು ಹೇಳುವ ಪ್ರಕಾರ, ಶ್ರೀರಾಮುಲು ಇಷ್ಟು ದಿನ ಬಿಜೆಪಿಯಲ್ಲಿ ಹಿನ್ನೆಲೆಗೆ ಸರಿದಿದ್ದರು. ರಮೇಶ್ ಜಾರಕಿಹೊಳಿ ಸಿಡಿ ಬೆಳವಣಿಗೆಯಿಂದ ಶ್ರೀರಾಮುಲು ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

ರಾಜ್ಯದ ಪೂರ್ವ ಭಾಗದಲ್ಲಿರುವ, ಎಸ್​ಟಿ ಸಮುದಾಯದ ಕ್ಷೇತ್ರಗಳ ಮೇಲೆ ಜಾರಕಿಹೊಳಿ ಕುಟುಂಬಕ್ಕೆ ಹಿಡಿತ ಪಡೆಯಲು ಸಾಧ್ಯವಾಗಿಲ್ಲ. ಬಳ್ಳಾರಿಯಿಂದ ತಮ್ಮ ಸಂಬಂಧಿಯೊಬ್ಬರನ್ನು ಲೋಕಸಭೆಗೆ ಆಯ್ಕೆ ಮಾಡಿದರೂ, ಜಾರಕಿಹೊಳಿ ಕುಟುಂಬ ಯಾವ ಲೆಕ್ಕಾಚಾರ ಹಾಕಿದ್ದರೋ ಆ ಲೆಕ್ಕಾಚಾರದಂತೆ ಆಗಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಪ್ರಾಯಶಃ, ಇದು ಶ್ರೀರಾಮುಲು ಅವರಿಗೆ ಮುಂದಿನ ದಿನಗಳಲ್ಲಿ ವರವಾಗಿ ಪರಿಣಮಿಸಲಿದೆ. ಇಷ್ಟು ದಿನ ಪಕ್ಷದಲ್ಲಿ ಮೂಲೆಗುಂಪಾಗಿದ್ದ ಶ್ರೀರಾಮುಲು ಮುಂದಿನ ದಿನಗಳಲ್ಲಿ ಬೇರೆ ಬೇರೆ ರಾಜಕೀಯ ಲೆಕ್ಕಾಚಾರಕ್ಕಿಳಿಯಬಹುದು. ಮತ್ತು ಪಕ್ಷದೊಳಗೆ ತಮ್ಮ ಕೈ ಬಲಪಡಿಸಿಕೊಳ್ಳಲು ಚೌಕಾಶಿಗಳಿದರೆ (bargain) ಆಶ್ಚರ್ಯವಿಲ್ಲ. ಮೊದಲಿನಂತೆ ಅವರನ್ನು ಪಕ್ಷ ಕಡೆಗಣಿಸುವಂತೆಯೂ ಇಲ್ಲ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ CD ಪ್ರಕರಣ: ವಿಡಿಯೋದಲ್ಲಿದ್ದ ವಾಯ್ಸ್ ಸ್ಯಾಂಪಲ್ FSLಗೆ ಶಿಫ್ಟ್

ರಮೇಶ್​ ಜಾರಕಿಹೊಳಿ

ವಾಲ್ಮೀಕಿ (ನಾಯಕ) ಸಮುದಾಯದ ಚಿಂತನೆ ಹೇಗಿದೆ?
ಇನ್ನು ಈ ಬೆಳವಣಿಗೆ ಕುರಿತಾಗಿ ನಾಯಕ ಸಮುದಾಯದ ಸಾಮಾಜಿಕ ಜಾಲತಾಣಗಳ ಗ್ರೂಪ್​ಗಳಲ್ಲಿ ಓಡಾಡುತ್ತಿರುವ ವಿಚಾರ ಕುತೂಹಲಕ್ಕೆ ಕಾರಣವಾಗಿದೆ. ಹೆಚ್ಚಿನ ಸಂದೇಶಗಳಲ್ಲಿ ಹೇಳುತ್ತಿರುವುದೇನೆಂದರೆ, ಸಿಡಿಯಲ್ಲಿರುವ ವ್ಯಕ್ತಿ ರಮೇಶ್​ ಜಾರಕಿಹೊಳಿ ಅವರ ಚಹರೆಯನ್ನು ಹೋಲುತ್ತಿಲ್ಲ. ನಿಜವಾದ ರಮೇಶ್​ ಜಾರಕಿಹೊಳಿ ಅವರ ಮುಖದ ಮೇಲೆ ಮಚ್ಚೆ ಇದೆ. ವಿಡಿಯೋದಲ್ಲಿ ಇರುವ ವ್ಯಕ್ತಿ ಮುಖದ ಮೇಲೆ ಮಚ್ಚೆ ಇಲ್ಲ, ಹಾಗಾಗಿ ಇದು ಫೇಕ್​ ವಿಡಿಯೋ. ಹಾಗಾಗಿ ಟಿವಿಗಳಲ್ಲಿ ಬರುತ್ತಿರುವುದನ್ನು ನಂಬಬೇಡಿ ಅನ್ನುವ ಭಾವನೆ ಹುಟ್ಟುವಂತೆ ಸಂದೇಶಗಳು ಹರಿದಾಡುತ್ತಿವೆ.

ಒಂದೊಮ್ಮೆ ಕೆಲವರು ಹೇಳುವಂತೆ ಒಂದು ದೊಡ್ಡ ರಾಜಕೀಯ ಪಕ್ಷದ ಮಹಾ ನಾಯಕರೇ ಈ ಸಿಡಿ ಮಾಡಿಸಲು ಸುಪಾರಿ ನೀಡಿದ್ದಾರೆ ಎಂದು ಕೊಳ್ಳೋಣ. ಆಗ, ಏನಾಗಬಹುದು? ಆಗ ಎರಡು ಬೆಳವಣಿಗೆ ಆಗುವ ಸಾಧ್ಯತೆ ಇದೆ. ವಾಲ್ಮೀಕಿ ಸಮುದಾಯವನ್ನು ಈ ಮಹಾ ನಾಯಕರ ವಿರುದ್ಧ ಎತ್ತಿಕಟ್ಟಲು ರಾಜಕೀಯವಾಗಿ ಏನೆಲ್ಲ ಮಾಡಬೇಕೋ ಅದನ್ನು ಮಾಡುವುದಕ್ಕೆ ಸಾಧ್ಯತೆ ಇದೆ. ವಾಲ್ಮೀಕಿ ಸಮುದಾಯದ ಸ್ವಾಮೀಜಿ ಈಗಾಗಲೇ ರಮೇಶ್ ಜಾರಕಿಹೊಳಿ ಅವರ ಪರವಾಗಿ ಬ್ಯಾಟಿಂಗ್​ ಮಾಡಿದ್ದಾರೆ. ಆವರ ಹೇಳಿಕೆ ನೋಡಿದರೆ, ಸಮುದಾಯ ಜಾರಕಿಹೊಳಿ ಅವರ ಬೆನ್ನ ಹಿಂದೆ ನಿಲ್ಲುವ ಸಾಧ್ಯತೆ ಇದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ CD ಪ್ರಕರಣ: ತುಮಕೂರು ಮೂಲದ ಪತ್ರಕರ್ತನ ಪತ್ನಿಗೆ SIT ನೋಟಿಸ್

Published On - 8:03 pm, Mon, 15 March 21