ಗದಗ: ಪ್ರಾಣಿಗಳಂದ್ರೆ ಮನುಷ್ಯನಿಗೆ ಅದೇನೋ ಒಂದು ರೀತಿಯ ಪ್ರೀತಿ. ಹೀಗಾಗಿ, ಪ್ರಾಣಿಗಳಿಗೋಸ್ಕರ ಏನು ಮಾಡೋಕೂ ಸಿದ್ಧನಾಗಿಬಿಡುತ್ತಾನೆ. ಅದೇ ರೀತಿ, ಇಲ್ಲೊಬ್ಬ ರೈತ ಜೀವದ ಹಂಗು ತೊರೆದು ಬಾವಿಯಲ್ಲಿ ಸಿಲುಕಿದ್ದ ಬೆಕ್ಕೊಂದನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ರೈತ ಮಹಾಂತೇಶ ಬಾವಿಯ ಪೊದೆಯಲ್ಲಿ ಸಿಲುಕಿಕೊಂಡಿದ್ದ ಬೆಕ್ಕನ್ನು ರಕ್ಷಿಸಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಬೆಕ್ಕೊಂದು ಬಾವಿಯ ನೀರಿಗೆ ಬಿದ್ದು ಮೇಲಿನ ಪೊದೆಗೆ ಬಂದು ತನ್ನ ಪ್ರಾಣ ಉಳಿಸಿಕೊಂಡಿತ್ತು. ಕಳೆದ ಮೂರು ದಿನಗಳಿಂದ ಬಾವಿಯಲ್ಲೇ ಸಿಲುಕಿಕೊಂಡಿತ್ತು. ಮೇಲೆ ಬರಲಾರದೇ ಬಾವಿಯ ಪೊದೆಯಲ್ಲಿ ನರಳಾಡುತ್ತಿತ್ತು.
ಬೆಕ್ಕಿನ ಸಂಕಟದ ಆರ್ತನಾದ ಕೇಳಿ ಮಹಾಂತೇಶ ಮಾನವೀಯತೆ ಮೆರೆದಿದ್ದಾರೆ. ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಬುಟ್ಟಿಯಲ್ಲಿ ಬೆಕ್ಕನ್ನು ಮೇಲಕ್ಕೆ ತಂದಿದ್ದಾರೆ. ಭಯ ತೊರೆದು ಬೆಕ್ಕಿನ ಜೀವ ಉಳಿಸಿದ ರೈತನಿಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪುರವೇ ಹರಿದು ಬರುತ್ತಿದೆ. ಬೆಕ್ಕಿನ ರಕ್ಷಣಾ ಕಾರ್ಯದ ದೃಶ್ಯವನ್ನು ಸ್ಥಳೀಯ ಯುವಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.