ಚಾಮರಾಜನಗರದಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ, ಮಾತು ಕೇಳಲಿಲ್ಲ ಅಂತ ಕುಟುಂಬಕ್ಕೆ ಬಹಿಷ್ಕಾರ
ಚಾಮರಾಜನಗರ ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಅನ್ನೋ ಅನಿಷ್ಟ ಪದ್ಧತಿ ಇನ್ನೂ ತೊಲಗಿಲ್ಲ. ತಾವೇ ಕೊಂಡುಕೊಂಡ ಜಾಗವನ್ನ ನಿವೇಶನ ಮಾಡಲು ಕೊಡಲಿಲ್ಲ ಅನ್ನೋ ಕಾರಣಕ್ಕೆ ಸ್ವಜಾತಿಯವರೇ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಇದರ ವಿರುದ್ಧ ನೊಂದ ಕುಟುಂಬ ಪೊಲೀಸರ ಮೊರೆ ಹೋಗಿದ್ದಾರೆ.

ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಅನ್ನೋ ಅನಿಷ್ಟ ಪದ್ಧತಿ ತೊಲಗಿದಂತೆ ಕಾಣುತ್ತಿಲ್ಲ. ಗ್ರಾಮಸ್ಥರ ಮಾತು ಕೇಳಲಿಲ್ಲ ಅಂತಾ ಗ್ರಾಮಸ್ಥರು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ದುಗ್ಗಟ್ಟಿ ಗ್ರಾಮದ ಕುಟುಂಬಕ್ಕೆ ಅದೇ ಸಮುದಾಯ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಕುಟುಂಬದ ಕೃಷಿ ಜಮೀನನ್ನ ನಿವೇಶನ ಮಾಡಿ ಗ್ರಾಮಸ್ಥರಿಗೆ ಹಂಚಲು ಅವಕಾಶ ಮಾಡಿ ಕೊಡಲಿಲ್ಲ ಅನ್ನೋ ಕಾರಣಕ್ಕೆ ಗ್ರಾಮಸ್ಥರು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ಈ ಕುಟುಂಬದ ಯಜಮಾನ ನಂಜುಂಡಸ್ವಾಮಿ 1 ಎಕರೆ ಖರೀದಿ ಮಾಡಿದ್ರು. ಈ ಜಾಗದ ಮೇಲೆ ಕಣ್ಣು ಹಾಕಿದವರು, ಬಡವರಿಗೆ ಜಮೀನು ನೀಡು ಅಂತಾ ಹೇಳಿದ್ದಾರೆ. ಆದ್ರೆ, ನಂಜುಂಡಸ್ವಾಮಿ ಇದಕ್ಕೆ ಒಪ್ಪಿಲ್ಲ. ಹೀಗಾಗಿ ಅವರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿ, ಯಾರು ನಂಜುಂಡಸ್ವಾಮಿ ಕುಟುಂಬವನ್ನ ಮಾತನಾಡಿಸುವಂತಿಲ್ಲ ಅಂತಾ ಅಲಿಖಿತವಾಗಿ ಆಜ್ಞೆ ಹೊರಡಿಸಿದ್ದಾರೆ. ಇದರ ವಿರುದ್ಧ ನಂಜುಂಡಸ್ವಾಮಿ ಯಳಂದೂರಿನ ತಹಶೀಲ್ದಾರ್ ಮತ್ತು ಪೊಲೀಸರಿಗೆೇ ದೂರು ಕೂಡ ನೀಡಿದ್ದಾರೆ.


ಪೊಲೀಸರಿಗೆ ದೂರು ಕೊಟ್ರೂ ಡೋಂಟ್ ಕೇರ್: ಕಳೆದ ಒಂದು ತಿಂಗಳಿಂದ ಗ್ರಾಮಸ್ಥರು ನಂಜುಂಡಸ್ವಾಮಿ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಊರಿನವರು ಕೂಲಿ ಕೆಲಸಕ್ಕೆ ಕರೆಯುತ್ತಿಲ್ಲ. ಅಂಗಡಿಗೆ ಹೋದ್ರೆ ದಿನಸಿ ಪದಾರ್ಥ ಕೊಡುತ್ತಿಲ್ಲ. ಮಕ್ಕಳು ಆಟ ಆಡಲು ಹೋದ್ರೆ 10 ಸಾವಿರ ದಂಡ ಕಟ್ಟುವಂತೆ ಹೇಳುತ್ತಿದ್ದಾರೆ. ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಕುಟುಂಬವನ್ನ ಊರಿನಿಂದ ಹೊರ ಇಡಲಾಗಿದೆ. ಗ್ರಾಮದ ಕೊಳಚೆ ನೀರನ್ನ ಇವರ ಜಮೀನಿನ ಮೇಲೆ ಹರಿಸುತ್ತಿದ್ದಾರೆ. ಗ್ರಾಮಸ್ಥರ ದೌರ್ಜನ್ಯದಿಂದ ನಾವು ಬದುಕಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನಮ್ಮ ಜಮೀನನ್ನ ನಾವು ಉಳಿಸಿಕೊಳ್ಳಲು ಅವಕಾಶ ಕೊಡಿ ಅಂತಾ ನಂಜುಂಡಸ್ವಾಮಿ ಪತ್ನಿ ಕಣ್ಣೀರು ಹಾಕುತ್ತಿದ್ದಾರೆ.
ಒಟ್ನಲ್ಲಿ ನಾಗರಿಕ ಸಮಾಜ ಬೆಳೆದಂತೆ ಅನಿಷ್ಟ ಪದ್ಧತಿಗಳು ದೂರಾಗುತ್ವೆ ಅಂತಾ ನಂಬಿರೋ ಈ ದಿನಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿರೋದು ದುರಂತದ ಸಂಗತಿ. ಈ ಕುರಿತು ದೂರು ನೀಡಲಾಗಿದ್ರೂ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಿರೋ ಅಧಿಕಾರಿಗಳ ಕ್ರಮ ಕೂಡ ಖಂಡನೀಯ. ಆದಷ್ಟು ಬೇಗ ಇವರ ಕುಟುಂಬಕ್ಕೆ ನ್ಯಾಯ ಸಿಗಲಿ ಅನ್ನೋದು ಸಾರ್ವಜನಿಕರ ಒತ್ತಾಯವಾಗಿದೆ.




