ದಕ್ಷಿಣ ಕನ್ನಡ: ಪ್ರೀತಿಸಿ ಮದುವೆಯಾಗಿದ್ದ ಗಂಡ ಕೈಬಿಟ್ಟ ಕಾರಣ ಕೇರಳ ರಾಜ್ಯದ ಕಣ್ಣೂರು ಮೂಲದ ಯುವತಿ ಅಕ್ಷರಶಃ ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾರೆ. ಇತ್ತ ಗಂಡನ ಮನೆಯಿಂದ ಹೊರದೂಡಿಸಿಕೊಂಡು, ಅತ್ತ ತವರು ಮನೆಗೂ ಹೋಗಲು ಸಾಧ್ಯವಾಗದೆ ಸುಳ್ಯ ಪಟ್ಟಣದ ಲಾಡ್ಜ್ನಲ್ಲಿ ದಿನದೂಡುತ್ತಿದ್ದಾರೆ.
ಫೇಸ್ಬುಕ್ನಲ್ಲಿ ಪರಿಚಿತನಾಗಿದ್ದ ಸುಳ್ಯದ ಇಬ್ರಾಹಿಂ ಖಲೀಲ್ ಎಂಬಾತನನ್ನು ಪ್ರೀತಿಸಿದ್ದ ಶಾಂತಿ, ಮೊದಲ ಪತಿಯನ್ನು ತೊರೆದಿದ್ದರು. ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರವಾಗಿ, ಜೂಬಿ ಆಸಿಯಾ ಎಂದು ಹೆಸರು ಬದಲಿಸಿಕೊಂಡರು. 2017ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ನಿಖಾ ಆಗಿದ್ದರು.
ಮದುವೆಯಾದ ಮೂರು ವರ್ಷಗಳ ನಂತರ ಇಬ್ರಾಹಿಂ ಏಕಾಏಕಿ ಮನೆಯಿಂದ ನಾಪತ್ತೆಯಾದ. ಅನಂತರ ಇಬ್ರಾಹಿಂ ಮನೆಯವರು ಆಸಿಯಾಳನ್ನು ಮನೆಯಿಂದ ಹೊರಗೆ ಹಾಕಿದರು. ಅತ್ತ ಆಸಿಯಾ ತವರಿಗೂ ಹೋಗಲು ಆಗದೆ, ಇತ್ತ ಅತ್ತೆ ಮನೆಯಲ್ಲೂ ಬದುಕಲು ಅವಕಾಶ ಸಿಗದೆ ಅಸಿಯಾ ಇದೀಗ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಇಬ್ರಾಹಿಂನನ್ನು ಹುಡುಕಿಕೊಡುವಂತೆ ಮುಸ್ಲಿಂ ನಾಯಕರಲ್ಲಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಕೊನೇ ಪ್ರಯತ್ನವೆಂಬಂತೆ ಈಗ ಮಾನವ ಹಕ್ಕು ಸಂಘಟನೆಯ ಮೊರೆಹೋಗಿದ್ದೇನೆ. ಶುಕ್ರವಾರದವರೆಗೆ ಕಾಯುತ್ತೇನೆ. ಗಂಡನ ಸುಳಿವು ಸಿಗದಿದ್ದರೆ ಆತ್ಮಹತ್ಯೆಯ ಹಾದಿ ಹಿಡಿಯುತ್ತೇನೆ ಎಂದು ಅಸಿಯಾ ಟಿವಿ9 ಪ್ರತಿನಿಧಿ ಎದುರು ಅಳಲು ತೋಡಿಕೊಂಡರು.
Published On - 12:09 pm, Thu, 26 November 20