ಗೋಲ್ಡನ್​ ಚಾನ್ಸ್​; ಪುನೀತ್ ರಾಜ್​ಕುಮಾರ್ ಮುಂದಿನ ಸಿನಿಮಾದಲ್ಲಿ ನೀವು ಕೆಲಸ ಮಾಡಬಹುದು!

ಪವನ್​-ಪುನೀತ್​ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುವವರು 10 ನಿಮಿಷದ ಶಾರ್ಟ್​ ಮೂವಿ ಒಂದನ್ನು ಸಿದ್ಧಪಡಿಸಬೇಕು. ಈ ಸಿನಿಮಾ ಹಿಂದಿ ಹೇರಿಕೆ ಅಥವಾ ಭಾಷಾ ಹೇರಿಕೆಯ ವಿಚಾರದ ಕುರಿತಾಗಿರಬೇಕು.

ಗೋಲ್ಡನ್​ ಚಾನ್ಸ್​; ಪುನೀತ್ ರಾಜ್​ಕುಮಾರ್ ಮುಂದಿನ ಸಿನಿಮಾದಲ್ಲಿ ನೀವು ಕೆಲಸ ಮಾಡಬಹುದು!
ಪುನೀತ್​ ರಾಜ್​ಕುಮಾರ್​

Updated on: Apr 15, 2021 | 9:33 PM

ಪುನೀತ್​ ರಾಜ್​ಕುಮಾರ್​ ನಟನೆ ಮಾಡುವ ಸಿನಿಮಾದಲ್ಲಿ ಕೆಲಸ ಮಾಡಬೇಕು ಎನ್ನುವುದು ಅನೇಕರ ಕನಸು. ಈ ಕನಸು ನನಸಾಗೋ ಕಾಲ ಸನಿಹವಾಗಿದೆ. ಪುನೀತ್​ ಮುಂದಿನ ಚಿತ್ರಕ್ಕೆ ನಿರ್ದೇಶಕ ಪವನ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಈ ಚಿತ್ರದಲ್ಲಿ ಕೆಲಸ ಮಾಡೋಕೆ ಎಲ್ಲರಿಗೂ ಅವಕಾಶ ಕಲ್ಪಿಸಿಟ್ಟಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಪವನ್​-ಪುನೀತ್​ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುವವರು 10 ನಿಮಿಷದ ಶಾರ್ಟ್​ ಮೂವಿ ಒಂದನ್ನು ಸಿದ್ಧಪಡಿಸಬೇಕು. ಈ ಸಿನಿಮಾ ಹಿಂದಿ ಹೇರಿಕೆ ಅಥವಾ ಭಾಷಾ ಹೇರಿಕೆಯ ವಿಚಾರದ ಕುರಿತಾಗಿರಬೇಕು.

ಈ ಬಗ್ಗೆ ಮಾಹಿತಿ ನೀಡಿರುವ ಪವನ್​ ಕುಮಾರ್, ಕೊರೊನಾ ಮಿತಿಮೀರಿ ಹರಡುತ್ತಿದೆ. ಹೀಗಾಗಿ, ಮನೆಯಲ್ಲಿ ಇದ್ದುಕೊಂಡೇ ಕಿರುಚಿತ್ರ ನಿರ್ಮಾಣ ಮಾಡಿ. ಒಟ್ಟು 8 ಕಿರುಚಿತ್ರ ನಾವು ಆಯ್ಕೆ ಮಾಡುತ್ತೇವೆ. ಮೊದಲ ನಾಲ್ಕು ಉತ್ತಮ ಕಿರುಚಿತ್ರ ಮಾಡಿದವರಿಗೆ ನಮ್ಮ ನಿರ್ದೇಶನ ತಂಡದಲ್ಲಿ ಸ್ಥಾನ ಸಿಗಲಿದೆ. ಉಳಿದ ನಾಲ್ಕು ಕಿರುಚಿತ್ರಕ್ಕೆ ತಲಾ 25 ಸಾವಿರ ರೂಪಾಯಿ ಬಹುಮಾನ ಸಿಗಲಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಅವರು ಎರಡು ವಾರ ಸಮಯಾವಕಾಶವನ್ನು ಕೂಡ ನೀಡಿದ್ದಾರೆ. ಈ ವಿಡಿಯೋ ಎಲ್ಲಿ ಅಪ್​ಲೋಡ್​ ಮಾಡಬೇಕು ಎಂಬುದನ್ನು ಅವರು ಏಪ್ರಿಲ್​ 28ರಂದು ಬಹಿರಂಗ ಮಾಡಲಿದ್ದಾರೆ.

ಪುನೀತ್ ನಟಿಸಲಿರುವ ಸಿನಿಮಾವನ್ನು ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಅಧಿಕೃತವಾಗಿತ್ತು. ಸಿನಿಮಾ ನಿರ್ಮಾಣ ಜವಾಬ್ದಾರಿಯನ್ನು ವಿಜಯ್ ಕಿರಗಂದೂರು ಪಡೆದುಕೊಂಡಿದ್ದಾರೆ. ಹೊಂಬಾಳೆ ಫಿಲಮ್ಸ್ ಬ್ಯಾನರ್‌ ಅಡಿಯಲ್ಲಿ ಚಿತ್ರ ಮೂಡಿ ಬರುತ್ತಿದೆ.

ಇದನ್ನೂ ಓದಿ: Yuvarathnaa On Prime: ನೀವು ಹೀಗೆ ಮಾಡಿದ್ದು ಸರಿನಾ?; ಪುನೀತ್​ ನಿರ್ಧಾರಕ್ಕೆ ಫ್ಯಾನ್ಸ್​ ಆಕ್ರೋಶ

ಪುನೀತ್​ ರಾಜ್​ಕುಮಾರ್​ ಬಾಲಿವುಡ್​ ಎಂಟ್ರಿ ಯಾವಾಗ? ಅವರಿಂದಲೇ ಸಿಕ್ತು ಉತ್ತರ