5 Yoga Asanas you must practice
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತ ಯೋಗಾಭ್ಯಾಸ ಮಾಡುವುದು ಅಗತ್ಯ. ವಿಶೇಷವಾಗಿ ಜಡ ಜೀವನಶೈಲಿಯನ್ನು ನಡೆಸುವವರು ಪ್ರತಿದಿನ ಯೋಗಾಭ್ಯಾಸ ಮಾಡಬೇಕು. ಇದು ದೇಹವನ್ನು ಆರೋಗ್ಯಕರವಾಗಿಸುವುದಲ್ಲದೆ ಮನಸ್ಸಿಗೆ ಶಾಂತತೆ ಮತ್ತು ಸಂತೋಷ ನೀಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. “ಯೋಗ ಕೇವಲ ಒಂದು ಗಂಟೆಯ ತಾಲೀಮು ಅಲ್ಲ, ಅದು ಒಂದು ರೀತಿಯ ಜೀವನಶೈಲಿ. ನಮ್ಮಲ್ಲಿ ಹೆಚ್ಚಿನವರು ತಮ್ಮ ಯೋಗಕ್ಷೇಮ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಸಮಯವಿಲ್ಲದ ಕಾರ್ಯನಿರತ ಜೀವನವನ್ನು ನಡೆಸುತ್ತಿದ್ದಾರೆ. ಆದರೆ, ಇಂತಹ ಜೀವನಶೈಲಿಗೆ ಆದ್ಯತೆ ನೀಡದೆಯೇ ಕೇವಲ 30 ನಿಮಿಷಗಳಾದರೂ ಸಹ ಯೋಗ ಮಾಡುವುದಕ್ಕೆ ಸಮಯ ನೀಡಬೇಕು” ಎಂದು ಸೆಲೆಬ್ರಿಟಿ ಯೋಗ ಮತ್ತು ಸಮಗ್ರ ಸ್ವಾಸ್ಥ್ಯ ತಜ್ಞ ಅಂಶುಕಾ ಪರ್ವಾನಿ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ.
ಇಡೀ ದೇಹದ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುವ ಕೆಲವು ಆಸನಗಳು ಇಲ್ಲಿವೆ:
- ಮಾರ್ಜಾಲ ಆಸನ: ಇದು ಬೆನ್ನುಮೂಳೆ ಮತ್ತು ಕುತ್ತಿಗೆ ಭಾಗಕ್ಕೆ ಬಲ ನೀಡುತ್ತದೆ. ಈ ಭಂಗಿ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತವಾಗಿಸುತ್ತದೆ.
- ಅಧೋ ಮುಖ ಶ್ವಾನಾಸನ: ಈ ಭಂಗಿಯು ತೋಳುಗಳು, ಭುಜಗಳು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ, ಜೊತೆಗೆ ಕೈಗಳು, ಮಣಿಕಟ್ಟು ಮತ್ತು ಬೆರಳುಗಳನ್ನು ಕೂಡ ಬಲಪಡಿಸುತ್ತದೆ.
- ಭುಜಂಗಾಸನ: ಎದೆ, ಭುಜಗಳು ಮತ್ತು ಕಿಬ್ಬೊಟ್ಟೆಯ ಪ್ರದೇಶದ ಸ್ನಾಯುಗಳನ್ನು ಹಿಗ್ಗಿಸುತ್ತದೆ ಮತ್ತು ಬಲಪಡಿಸುತ್ತದೆ. ಕೆಳ ಬೆನ್ನಿನಲ್ಲಿ ನೋವಿದ್ದರೆ ಅದನ್ನು ಕಡಿಮೆ ಮಾಡುತ್ತದೆ.
- ಮಲಾಸನ: ಸೊಂಟದ ನೋವನ್ನು ಕಡಿಮೆ ಮಾಡುತ್ತದೆ, ಮಲಬ್ಧತೆಯ ಸಮಸ್ಯೆ ಇದ್ದಲ್ಲಿ ಅದನ್ನು ನಿವಾರಣೆ ಮಾಡುತ್ತದೆ. ಗ್ಯಾಸ್ ಸಮಸ್ಯೆ ಇದ್ದರೂ ಕೂಡ ನಿವಾರಣೆಯಾಗುತ್ತದೆ. ಮಲಾಸನವು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
- ಸೇತುವೆಯ ಭಂಗಿ: ಇದು ಬೆನ್ನುಮೂಳೆಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಮೇಲಿನ ಬೆನ್ನು ಮತ್ತು ಕುತ್ತಿಗೆ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಈ ಬಗ್ಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಂಡು ಆರೋಗ್ಯಕ್ಕೆ ಆದ್ಯತೆ ನೀಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ