Longevity: ದೀರ್ಘಾಯುಷ್ಯಕ್ಕಾಗಿ ಈ 8 ಸರಳ ಆರೋಗ್ಯಕರ ಅಭ್ಯಾಸಗಳು ಬೇಕು: ಅಧ್ಯಯನ
ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸಲು ಮತ್ತು ಆರೋಗ್ಯಕವಾಗಿ ಜೀವನ ಸಾಗಿಸಲು ಈ ಕೆಲವೊಂದು ಅಭ್ಯಾಸಗಳನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಸಂಶೋಧನೆಯೊಂದು ಹೇಳಿದೆ.
ಇಂದಿನ ಆಧುನಿಕ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದಾಗಿ ಜನರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಈ ಆಧುನಿಕ ಕಾಲಘಟ್ಟದಲ್ಲಿ ಜೀವಿಸುತ್ತಿರುವ ಜನರು ಕೇವಲ 40, 50ರ ವಯಸ್ಸಿನಲ್ಲಿಯೇ ಕಾಯಿಲೆಗಳಿಗೆ ತುತ್ತಾಗಿ ಮರಣ ಹೊಂದುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ನಾವು ಪಾಲಿಸುವ ಅನಾರೋಗ್ಯಕರ ಜೀವನಶೈಲಿ. ಹಾಗಾಗಿ ಹೆಚ್ಚು ಕಾಲ ಆರೋಗ್ಯಕರವಾಗಿ ಬದುಕಬೇಕೆಂದರೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಅತಿ ಮುಖ್ಯ. ಮಾನವರು ಅಮರತ್ವ ಸಾಧಿಸದಿದ್ದರೂ ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಜೀವಿತಾವಧಿಯನ್ನು ಹೆಚ್ಚಿಸಬಹುದು ಎಂದು ಇತ್ತೀಚಿಗೆ ಪ್ರಕಟವಾದ ಅಧ್ಯಯನವೊಂದು ಹೇಳಿದೆ. ಅಮೇರಿಕನ್ ಸೊಸೈಟಿ ಫಾರ್ ನ್ಯೂಟ್ರಿಷನ್ ನ ವಾರ್ಷಿಕ ಸಭೆಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಯಿತು. ಮಧ್ಯಮಯಸ್ಸಿನೊಳಗೆ ಕೆಲವು ಸರಳ ಆರೋಗ್ಯಕರ ಅಭ್ಯಾಸಗಳನ್ನು ನಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಅದರ ಅಗಾಧ ಲಾಭವನ್ನು ಪಡೆಯಬಹುದು ಎಂದು ಈ ಅಧ್ಯಯನ ಹೇಳಿದೆ.
ಸಂಶೋಧಕರು ಸುಮಾರು 700,000 ಜನರನ್ನು ತಮ್ಮ ಅಧ್ಯಯನಕ್ಕೆ ಒಳಪಡಿಸಿ, ಅವರು ಅಳವಡಿಸಿಕೊಂಡ ಆರೋಗ್ಯಕರ ಅಭ್ಯಾಸಗಳ ಸಂಖ್ಯೆಯನ್ನು ಆಧರಿಸಿ ಅವರ ಜೀವಿತಾವಧಿಯಲ್ಲಿ ಬದಲಾವಣೆಗಳನ್ನು ಗಮನಿಸಿದರು. ಈ ಅಭ್ಯಾಸಗಳು ಪುರುಷರ ಜೀವಿತಾವಧಿಯಲ್ಲಿ 24 ವರ್ಷಗಳು ಮತ್ತು ಮಹಿಳೆಯರಲ್ಲಿ 21 ವರ್ಷ ಜೀವಿತಾವಧಿ ಹೆಚ್ಚಾಗಲು ಕಾರಣವಾಯಿತು ಎಂದು ಕಂಡುಕೊಂಡರು. ಆರೋಗ್ಯಕರ ಜೀವನಶೈಲಿಯನ್ನು ಆಳವಡಿಸಿಕೊಳ್ಳುವುದು ಸಾರ್ವಜನಿಕ ಆರೋಗ್ಯ ಮತ್ತು ವೈಯಕ್ತಿಯ ಕ್ಷೇಮ ಎರಡಕ್ಕೂ ಮುಖ್ಯವಾಗಿದೆ ಹಾಗೂ ಇದು ವ್ಯಕ್ತಿಗಳ ದೀರ್ಘಾಯುಷ್ಯಕ್ಕೂ ಸಹಕಾರಿ ಎಂದು ಸಂಶೋಧಕರು ಹೇಳಿದ್ದಾರೆ.
ನೀವು ದೀರ್ಘಾಯುಷ್ಯವನ್ನು ಪಡೆಯಲು ಅಳವಡಿಸಿಕೊಳ್ಳಬೇಕಾದ 8 ಆರೋಗ್ಯಕರ ಅಭ್ಯಾಸಗಳು
ನಿಯಮಿತ ವ್ಯಾಯಾಮ:
ನಿಯಮಿತ ವ್ಯಾಯಾಮವನ್ನು ಅಭ್ಯಾಸ ಮಾಡುವುದು ನಮ್ಮ ಒಟ್ಟಾರೆ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ. ವ್ಯಾಯಾಮ ಮಾಡುವುದರಿಂದ ಹೃದಯರಕ್ತನಾಳಗಳ ಆರೋಗ್ಯ ಸುಧಾರಿಸುತ್ತದೆ, ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ. ಅಲ್ಲದೆ ವ್ಯಾಯಾಮ ಮಾಡುವುದರಿಂದ ನಾವು ಹೆಚ್ಚು ಕಾಲ ಆರೋಗ್ಯಕರವಾಗಿ ಜೀವನ ನಡೆಸಬಹುದು.
ಸಮತೋಲಿತ ಆಹಾರ:
ಹಣ್ಣುಗಳು, ತರಕಾರಿಗಳು, ಧಾನ್ಯಗಳು, ನೇರ ಪ್ರೋಟೀನ್ ಗಳು ಮತ್ತು ಆರೋಗ್ಯಕರ ಕೊಬ್ಬಿನ ಆಹಾರಗಳು ಸೇರಿದಂತೆ ವಿವಿಧ ಪೋಷಕಾಂಶಭರಿತ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಹುದು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಇದರಿಂದ ಹೆಚ್ಚು ಕಾಲ ಆರೋಗ್ಯಕರ ಜೀವನವನ್ನು ಸಾಗಿಸಬಹುದು.
ಸಾಕಷ್ಟು ನಿದ್ರೆ:
ಪ್ರತಿ ದಿನ 7 ರಿಂದ 8 ಗಂಟೆಗಳ ಗುಣಮಟ್ಟದ ನಿದ್ರೆಯನ್ನು ಪಡೆಯುವುದು ಮುಖ್ಯ. ಏಕೆಂದರೆ ಇದು ಅತ್ಯುತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ಸ್ಮರಣಾ ಶಕ್ತಿಯನ್ನು ಸುಧಾರಿಸಲು ಮತ್ತು ದೀರ್ಘಾಯುಷ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಒತ್ತಡ ನಿರ್ವಹಣೆ:
ಧ್ಯಾನ, ಆಳವಾದ ಉಸಿರಾಟ, ವ್ಯಾಯಾಮಗಳು ಮತ್ತು ಯೋಗದಂತಹ ಒತ್ತಡ ನಿರ್ವಹಣೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅಥವಾ ನಿಮಗೆ ಸಂತೋಷ ತರುವಂತಹ ಚಟುವಟಿಕೆ ಅಥವಾ ಹವ್ಯಾಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇದರಿಂದ ಒತ್ತಡ ನಿರ್ವಹಣೆ ಮಾಡಬಹುದು. ಇದು ಹೃದ್ರೋಗ, ಖಿನ್ನತೆ ಮತ್ತು ಆತಂಕದಂತಹ ದೀರ್ಘಕಾಲದ ಒತ್ತಡಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮತ್ತು ಇದು ದೀರ್ಘಾಯುಷ್ಯವನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ.
ಇದನ್ನೂ ಓದಿ: ಯೋಗಾಸನ ಮಾಡಲು ಪ್ರಾರಂಭಿಸಿದ್ದೀರಾ? ಹಾಗಿದ್ದರೆ ಈ ಸಲಹೆ ಪಾಲಿಸಿ
ಸಾಮಾಜಿಕ ಸಂಪರ್ಕಗಳು:
ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳುವುದು, ಸಾಮಾಜಿಕ ಚಟಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಪ್ರೀತಿಪಾತ್ರರ ಜೊತೆ ಸಂಪರ್ಕದಲ್ಲಿರುವುದು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸಲು ಸಹಕಾರಿಯಾಗಿದೆ. ಮತ್ತು ಇದು ಒಂಟಿತನದ ಅಪಾಯವನ್ನು ಕಡಿಮೆ ಮಾಡುತ್ತದೆ ಈ ಅಪಾಯಗಳು ವಿವಿಧ ಆರೋಗ್ಯ ಸಮಸ್ಯೆಗಳು ಮತ್ತು ಕಡಿಮೆ ಜೀವಿತಾವಧಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ದೀರ್ಘಾಯುಷ್ಯವನ್ನು ಕಾಪಾಡಿಕೊಳ್ಳಲು, ಆರೋಗ್ಯಕರ ಸಾಮಾಜಿಕ ಸಂಪರ್ಕಗಳನ್ನು ಕಾಪಾಡಿಕೊಳ್ಳಿ.
ನಿಯಮಿತ ಆರೋಗ್ಯ ತಪಾಸಣೆ:
30 ರಿಂದ 40 ವರ್ಷಗಳ ಬಳಿಕ ವೈದ್ಯರ ಬಳಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾನೆ ಮುಖ್ಯ. ಏಕೆಂದರೆ ಹೆಚ್ಚಿನವರಿಗೆ ಈ ಹಂತದಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ಪಡೆಯುವ ಮೂಲಕ ನಿಮ್ಮ ಒಟ್ಟಾರೆ ಆರೋಗ್ಯವನ್ನು ವೃದ್ಧಿಸಬಹುದು.
ತಂಬಾಕು ಸೇವನೆಯಿಂದ ದೂರವಿರುವುದು:
ಧೂಮಪಾನ ಅಥವಾ ಯಾವುದೇ ರೀತಿಯ ತಂಬಾಕು ಸೇವನೆಯಿಂದ ದೂರವಿರುವುದು ದೀರ್ಘಾಯುಷ್ಯವನ್ನು ಕಾಪಾಡಿಕೊಳ್ಳಲು ತುಂಬಾ ಸಹಕಾರಿಯಾಗಿದೆ. ಏಕೆಂದರೆ ಈ ಚಟಗಳು ಕ್ಯಾನ್ಸರ್, ಹೃದ್ರೋಗ ಮತ್ತು ಉಸಿರಾಟ ಸಂಬಂಧಿ ಕಾಯಿಲೆಗಳು ಸೇರಿದಂತೆ ಅನೇಕ ರೋಗಗಳನ್ನು ಅಭಿವೃದ್ಧಿಪಡಿಸುತ್ತದೆ. ಮತ್ತು ಇದು ನಿಮ್ಮ ಒಟ್ಟಾರೆ ಜೀವಿತಾವಧಿಯನ್ನು ಕುಂಠಿತಗೊಳಿಸುತ್ತದೆ.
ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ:
ಆಲ್ಕೋಹಾಲ್ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಮುಖ್ಯ. ಅತಿಯಾದ ಮದ್ಯ ಸೇವನೆ ಯಕೃತ್ತಿನ ಕಾಯಿಲೆ, ಕ್ಯಾನ್ಸರ್ ಮತ್ತು ಇತರೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮತ್ತು ಇದು ನಿಮ್ಮ ಜೀವಿತಾವಧಿಯ ಮೇಲೂ ಋಣಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ದೀರ್ಘಾಯುಷ್ಯವನ್ನು ಕಾಪಾಡಿಕೊಳ್ಳಲು ಆಲ್ಕೋಹಾಲ್ ಸೇವನೆಯನ್ನು ಆದಷ್ಟು ಮಿತಿಗೊಳಿಸುವುದು ಉತ್ತಮ.
ವ್ಯಾಯಾಮ ಮಾಡದಿರುವುದು, ತಂಬಾಕು ಸೇವನೆಯಂತಹ ಚಟಗಳು ಸುಮಾರು ಶೇಕಡಾ 30% ನಿಂದ 45% ನಷ್ಟು ಸಾವಿನ ಅಪಾಯಕ್ಕೆ ಸಂಬಂಧಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ಒತ್ತಡ, ಮದ್ಯಪಾನ, ಕಳಪೆ ಆಹಾರ ಮತ್ತು ಸರಿಯಾಗಿ ನಿದ್ರೆ ಮಾಡದಿರುವುದು ಸಾವಿನ ಅಪಾಯವನ್ನು 20% ನಷ್ಟು ಹೆಚ್ಚಿಸುತ್ತದೆ. ಹಾಗೂ ಸಕರಾತ್ಮಕ ಸಾಮಾಜಿಕ ಸಂಬಂಧಗಳ ಕೊರತೆಯು ಸಾವಿನ ಅಪಾಯವನ್ನು ಶೇಕಡಾ 5% ನಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದ್ದರಿಂದ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದರ ಜೊತೆಗೆ ಬಲವಾದ ಸಾಮಾಜಿಕ ಸಂಬಂಧಗಳನ್ನು ಹೊಂದುವ ಮೂಲಕ ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: