Anand Mahindra Birthday: ಜೀವನವನ್ನೇ ಬದಲಿಸಬಲ್ಲ ಆನಂದ್ ಮಹೀಂದ್ರಾರ ಪ್ರೇರಣಾದಾಯಿ ಮಾತುಗಳು ಇಲ್ಲಿವೆ
Anand Mahindra quotes: ಇಂದು (ಮೇ.1) ಆನಂದ್ ಮಹೀಂದ್ರಾ ಜನ್ಮದಿನ. 1955ರಲ್ಲಿ ಜನಿಸಿದ ಅವರು 67ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಒಡೆತನದ ಮಹೀಂದ್ರಾ ಗ್ರೂಪ್ 21 ಶತಕೋಟಿ ಡಾಲರ್ ಆದಾಯವನ್ನು ಹೊಂದಿದ್ದು, ಕೃಷಿಯಿಂದ ಹಿಡಿದು ಏರೋಸ್ಪೇಸ್‌ವರೆಗೆ ಬಹು ವಲಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆನಂದ್ ಮಹೀಂದ್ರಾರ ಸಂಕ್ಷಿಪ್ತ ಪರಿಚಯ, ಅವರ ಪ್ರೇರಣಾದಾಯಿ ನುಡಿಗಳು ಇಲ್ಲಿವೆ.
ಆನಂದ್ ಮಹೀಂದ್ರಾ (Anand Mahindra) ಯಾರಿಗೆ ಗೊತ್ತಿಲ್ಲ ಹೇಳಿ? ಪ್ರಸ್ತುತ ಸಾಮಾಜಿಕ ಜಾಲತಾಣ ಬಳಸುವವರಿಗೆ ಅವರು ‘ದಿ ಮಹೀಂದ್ರಾ ಗ್ರೂಪ್’ನ ಅಧ್ಯಕ್ಷರಾಗಿ ಪರಿಚಯ ಎನ್ನುವುದಕ್ಕಿಂತಲೂ ಬೇರೆಯದೇ ಕಾರಣದಿಂದ ಆಪ್ತರು. ಟ್ವಿಟರ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಆಕ್ಟಿವ್ ಇರುವ ಆನಂದ್ ಮಹೀಂದ್ರಾ, ಅಗತ್ಯವಿರುವವರ ನೆರವಿಗೆ ಧಾವಿಸುತ್ತಾರೆ. ಭಾರತದ ಮೂಲೆಮೂಲೆಯಲ್ಲಿರುವ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾರೆ. ಬದುಕಿನ ಪಾಠಗಳ ಮೂಲಕ ಯುವಕರಿಗೆ ಪ್ರೇರಣೆಯಾಗುತ್ತಿದ್ದಾರೆ. ಹೀಗಾಗಿಯೇ ಅವರು ಉದ್ಯಮ ಕ್ಷೇತ್ರದ ಜತೆಜತೆಗೆ ಸಾಮಾಜಿಕ ಜಾಲತಾಣಗಳ ಪ್ರಭಾವಿ ವ್ಯಕ್ತಿಯೂ ಆಗಿದ್ದಾರೆ. ಆದ್ದರಿಂದಲೇ ಜನರಿಗೆ ಅವರನ್ನು ಕಂಡರೆ ಅಚ್ಚುಮೆಚ್ಚು. ಇಂದು (ಮೇ.1) ಆನಂದ್ ಮಹೀಂದ್ರಾ ಜನ್ಮದಿನ. 1955ರಲ್ಲಿ ಜನಿಸಿದ ಅವರು 67ನೇ ಹುಟ್ಟುಹಬ್ಬವನ್ನು (Anand Mahindra Birthday) ಆಚರಿಸಿಕೊಳ್ಳುತ್ತಿದ್ದಾರೆ. ಅವರ ಒಡೆತನದ ಮಹೀಂದ್ರಾ ಗ್ರೂಪ್ 21 ಶತಕೋಟಿ ಡಾಲರ್ ಆದಾಯವನ್ನು ಹೊಂದಿದ್ದು, ಕೃಷಿಯಿಂದ ಹಿಡಿದು ಏರೋಸ್ಪೇಸ್‌ವರೆಗೆ ಬಹು ವಲಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆನಂದ್ ಮಹೀಂದ್ರಾರ ಸಂಕ್ಷಿಪ್ತ ಪರಿಚಯ, ಅವರ ಪ್ರೇರಣಾದಾಯಿ ನುಡಿಗಳು ಇಲ್ಲಿವೆ.
ಆನಂದ್ ಮಹೀಂದ್ರಾ ಪರಿಚಯ:
ಆನಂದ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. 1996ರಲ್ಲಿ ಅವರು ‘ನಾನ್ಹಿ ಕಾಲಿ’ ಎಂಬ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದರು, ಇದು ಭಾರತದಲ್ಲಿ ಹಿಂದುಳಿದ ಹುಡುಗಿಯರಿಗೆ ಶಿಕ್ಷಣ ನೀಡಲು ಸಹಾಯ ಮಾಡುತ್ತದೆ. ಆನಂದ್ ಅವರು 2013 ರ ಫೋರ್ಬ್ಸ್ ಇಂಡಿಯಾದ ‘ವರ್ಷದ ವಾಣಿಜ್ಯೋದ್ಯಮಿ’ ಎಂದು ಗೌರವಿಸಲ್ಪಟ್ಟರು. 2020ರ ಜನವರಿಯಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಅವರು ಪಡೆದರು.
ಈಗಿನ ಹೊಸ ಉದ್ಯಮಗಳನ್ನು ಉತ್ತೇಜಿಸುವ ಸಲುವಾಗಿ ಆನಂದ್ ಮಹೀಂದ್ರಾ ಅವರು ಹಲವು ಸ್ಟಾರ್ಟಪ್ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವುಗಳಲ್ಲಿ ಕೆಲವುಗಳೆಂದರೆ ಡಿಜಿಟಲ್ ಸುದ್ದಿ ವೆಬ್‌ಸೈಟ್ ಆದ SheThePeople, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಲೋಕಲ್ ಸರ್ಕಲ್ಸ್, ಫುಡ್‌ಟೆಕ್ ಸ್ಟಾರ್ಟ್ಅಪ್ DishCo, ಶಿಕ್ಷಣ ಕಂಪನಿ ನಾಂದಿ ಎಜುಕೇಶನ್ ಸಪೋರ್ಟ್ ಮತ್ತು ಟ್ರೈನಿಂಗ್ (NEST), ಅಸಿಸ್ಟೆಡ್ ಲರ್ನಿಂಗ್ ಸ್ಟಾರ್ಟ್ಅಪ್ ಥಿಂಕರ್‌ಬೆಲ್ ಲ್ಯಾಬ್ಸ್ ಇತ್ಯಾದಿ.
ಆನಂದ್ ಮಹೀಂದ್ರಾ ಪ್ರೇರಣಾದಾಯಿ ಮಾತುಗಳು:
ಮೇಲೆ ತಿಳಿಸಿದಂತೆ ಆನಂದ್ ಮಹೀಂದ್ರಾ ಈಗಿನ ಯುವಜನತೆಯನ್ನು ಪ್ರೇರೇಪಿಸುವ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಗುರಿಯೆಡೆಗೆ ಸಾಗಲು ಪ್ರೇರಣೆ ನೀಡಬಲ್ಲ, ಆನಂದ್ ಮಹೀಂದ್ರಾ ಹೇಳಿರುವ ಮಾತುಗಳು ಇಲ್ಲಿವೆ.
- ‘ನಾಯಕನಾದವನು ಹಿಂದೆ ಅಥವಾ ಸುತ್ತಮುತ್ತ ನೋಡುವುದಿಲ್ಲ. ಬದಲಾಗಿ, ಅವರು ಎಂದಿಗೂ ಮುಂದೆ ನೋಡುತ್ತಿರುತ್ತಾರೆ’
- ನೀವು ಪ್ರತಿ ದಿನವನ್ನು ಹೊಸ ಸವಾಲಾಗಿ ಸ್ವೀಕರಿಸಿ, ಹೊಸದನ್ನು ಸಾಧಿಸುವ ಬಗ್ಗೆ ಚಿಂತಿಸಿ ಮತ್ತು ಸದಾ ಜಾಗೃತರಾಗಿರಿ.
- ನೀವು ಧನಾತ್ಮಕವಾಗಿ ನಿಮ್ಮ ಕೆಲಸಗಳಲ್ಲಿ ಬದಲಾವಣೆ ತಂದರೆ, ನಿಮ್ಮ ವ್ಯಾಪಾರ ಉತ್ತಮವಾಗುತ್ತಾ ಸಾಗುತ್ತದೆ. ಹೀಗಾಗಿ ಒಳ್ಳೆಯ ಬದಲಾವಣೆಗಳನ್ನು ರೂಢಿಸಿಕೊಳ್ಳಿ.
- ಸುಸ್ಥಿರ ಉದ್ಯಮಗಳನ್ನು ನಡೆಸಲು ಮೊದಲು ನಿಮ್ಮ ಬದುಕಿನಲ್ಲಿ ಸುಸ್ಥಿರ ಜೀವನ ವಿಧಾನ ಅಳವಡಿಸಿಕೊಳ್ಳಬೇಕು. ಆಗ ನೀವು ವ್ಯಾಪಾರದಲ್ಲೂ ಸುಸ್ಥಿರತೆ ತರಲು ಸಾಧ್ಯವಾಗುತ್ತದೆ.
- ಜಗತ್ತು ಹೇಗೆ ಬದಲಾಗುತ್ತೆ ಎಂಬುದು ಯಾರಿಗೂ ತಿಳಿದಿಲ್ಲ. ಭವಿಷ್ಯತ್ತಿಗೆ ತಯಾರಾಗಲು ನೀವು ಹಲವು ಸನ್ನಿವೇಶಗಳಿಗೆ ಸಿದ್ಧರಾಗಿರಬೇಕು.
- ಯಾವುದೋ ಒಂದು ಅತ್ಯಂತ ದೊಡ್ಡ ಸುಧಾರಣೆಯನ್ನು ಬಿಗ್ಬ್ಯಾಂಗ್ನಂತೆ ಏಕಾಏಕಿ ಮಾಡುವುದರ ಬದಲು, ತಳಮಟ್ಟದಿಂದ ದಿನವೂ ಸುಧಾರಣೆ ಕಾಣುವುದು ಒಳ್ಳೆಯ ಪರಿಣಾಮವನ್ನು ಕೊಡುತ್ತದೆ.
- ನೀವು ಸರಿಯಾದ ಗುರಿಗಳನ್ನು ಇಟ್ಟುಕೊಳ್ಳಬೇಕು, ಅದನ್ನು ಸಾಧಿಸಲು ಸತತವಾಗಿ ಶ್ರಮ ವಹಿಸಿ ಕೆಲಸ ಮಾಡಬೇಕು. ಆಗ ಮಾತ್ರ ನಿಮ್ಮ ಕನಸನ್ನು ನನಸಾಗಿಸಲು ಸಾಧ್ಯವಾಗುತ್ತದೆ.
ಹೆಚ್ಚಿನ ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Anand Mahindra: ‘ನಾನು ಆ ವ್ಯಕ್ತಿಯನ್ನು ಭೇಟಿಯಾಗಬೇಕು’; ಅಷ್ಟಕ್ಕೂ ಆನಂದ್ ಮಹೀಂದ್ರಾ ಫಿದಾ ಆದ ವಿಡಿಯೋದಲ್ಲೇನಿದೆ?
ಜೀವನದಲ್ಲಿ ಸ್ನೇಹಿತರೇಕೆ ಬೇಕು? ಆಮೆಯ ವಿಡಿಯೋ ಮೂಲಕ ಸುಂದರವಾಗಿ ವಿವರಿಸಿದ ಆನಂದ್ ಮಹೀಂದ್ರಾ