ನೀವು ತಿಂಗಳಿಗೊಮ್ಮೆ ಎನರ್ಜಿ ಡ್ರಿಂಕ್ಸ್ ಸೇವಿಸುತ್ತೀರಾ? ಅಥವಾ ನಿಯಮಿತವಾಗಿ ಎನರ್ಜಿ ಡ್ರಿಂಕ್ ಕುಡಿಯುತ್ತೀರಾ? ಇದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಎನರ್ಜಿ ಡ್ರಿಂಕ್ ನಿಮ್ಮಲ್ಲಿ ನಿದ್ರಾಹೀನತೆಗೆ ಕಾರಣವಾಗಬಹುದು ಎಂದು ಅಧ್ಯಯನವು ಕಂಡುಹಿಡಿದಿದೆ. ಮಾರುಕಟ್ಟೆಯಲ್ಲಿರುವ ಶಕ್ತಿ ಪಾನೀಯಗಳನ್ನು ಸಾಮಾನ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಜನರು ಹೆಚ್ಚಾಗಿ ಸೇವಿಸುತ್ತಾರೆ.
ನೀವು ಎನರ್ಜಿ ಡ್ರಿಂಕ್ಸ್ ಜಾಸ್ತಿ ಕುಡಿದಷ್ಟೂ ರಾತ್ರಿಯ ನಿದ್ರೆಯ ಅವಧಿ ಕಡಿಮೆಯಾಗುತ್ತದೆ ಎಂದು ಅಧ್ಯಯನ ಹೇಳಿದೆ. ಏಕೆಂದರೆ ಶಕ್ತಿ ಪಾನೀಯಗಳು ಪ್ರತಿ ಲೀಟರ್‌ಗೆ ಸರಾಸರಿ 150 ಮಿಗ್ರಾಂ ಕೆಫೀನ್ ಅಂಶವನ್ನು ಹೊಂದಿರುತ್ತವೆ. ಇದರಲ್ಲಿ ಸಕ್ಕರೆ, ವಿಟಮಿನ್‌ಗಳು, ಖನಿಜಗಳು ಮತ್ತು ಅಮೈನೋ ಆಮ್ಲಗಳು ಕೂಡ ಇರುತ್ತವೆ ಎಂದು ನಾರ್ವೆಯ ಓಸ್ಲೋ ಮತ್ತು ಬರ್ಗೆನ್ ವಿಶ್ವವಿದ್ಯಾಲಯಗಳ ಸಂಶೋಧಕರು ವಿವರಿಸಿದ್ದಾರೆ.
ಇದನ್ನೂ ಓದಿ: ಉತ್ತಮ ನಿದ್ರೆಗೆ ರಾತ್ರಿ ಯಾವ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬೇಕು?
ಎನರ್ಜಿ ಡ್ರಿಂಕ್ ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸಲು ಕೆಲವು ಪುರಾವೆಗಳಿವೆ. ಈ ಬಗ್ಗೆ ಅಧ್ಯಯನಕ್ಕಾಗಿ ಸಂಶೋಧಕರು ನಾರ್ವೆಯಲ್ಲಿ 18 ರಿಂದ 35 ವರ್ಷ ವಯಸ್ಸಿನ 53,266 ಯುವಕರ ಮೇಲೆ ಪ್ರಯೋಗ ನಡೆಸಿದರು. ಇದರಲ್ಲಿ ಭಾಗವಹಿಸುವವರು ಪ್ರತಿವಾರ 2-3 ಬಾರಿ ಮತ್ತು 4-6 ಬಾರಿ ಎನರ್ಜಿ ಡ್ರಿಂಕ್ ಸೇವಿಸುತ್ತಿದ್ದರು. ಇನ್ನು ಕೆಲವರು ತಿಂಗಳಿಗೆ 1-3 ಬಾರಿ ಎನರ್ಜಿ ಡ್ರಿಂಕ್ ಸೇವಿಸುತ್ತಿದ್ದರು. ಇದರ ಜೊತೆಗೆ ಅವರ ಸಾಮಾನ್ಯ ನಿದ್ರೆಯ ಮಾದರಿಗಳ ಬಗ್ಗೆ ವಿವರವಾದ ಪ್ರಶ್ನೆಗಳನ್ನು ಸಹ ಕೇಳಲಾಯಿತು. ಅವರು ನಿದ್ರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ, ನಿದ್ರೆಯ ವೇಳೆ ಎಷ್ಟು ಬಾರಿ ಎಚ್ಚರಗೊಳ್ಳುತ್ತಾರೆ, ಒಟ್ಟು ಎಷ್ಟು ಗಂಟೆ ನಿದ್ರೆ ಮಾಡುತ್ತಾರೆಂಬುದರ ವಿವರ ಪಡೆಯಲಾಯಿತು.
ಇದನ್ನೂ ಓದಿ: ಬಿಸಿ ಹಾಲು ಕುಡಿದರೆ ನಿಜಕ್ಕೂ ಚೆನ್ನಾಗಿ ನಿದ್ರೆ ಬರುತ್ತಾ?
ತಾವು ಎನರ್ಜಿ ಡ್ರಿಂಕ್ ಸೇವಿಸಿದ್ದೇವೆ ಎಂದು ಹೇಳಿದವರಲ್ಲಿ ಶೇ. 5.5ರಷ್ಟು ಮಹಿಳೆಯರು ವಾರಕ್ಕೆ 4-6 ಬಾರಿ ಎನರ್ಜಿ ಡ್ರಿಂಕ್ ಕುಡಿಯುತ್ತಾರೆ. ಕೇವಲ ಶೇ. 3ರಷ್ಟು ಜನರು ದಿನವೂ ಎನರ್ಜಿ ಡ್ರಿಂಕ್ ಕುಡಿಯುತ್ತಾರೆ. ದಿನವೂ ಎನರ್ಜಿ ಡ್ರಿಂಕ್ ಕುಡಿಯುವ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಾಂದರ್ಭಿಕವಾಗಿ ಆಗಾಗ ಎನರ್ಜಿ ಡ್ರಿಂಕ್ ಕುಡಿಯುವ ಅಥವಾ ಎನರ್ಜಿ ಡ್ರಿಂಕ್ ಸೇವನೆಯನ್ನೇ ಮಾಡಿದವರಿಗಿಂತ ಅರ್ಧ ಗಂಟೆ ಕಡಿಮೆ ನಿದ್ರೆ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ