ನೀವು ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದೀರಾ, ಮನೆಯಲ್ಲೇ ಪರಿಹಾರ ಕಂಡುಕೊಳ್ಳಿ
ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಬಹುತೇಕರಲ್ಲಿ ತಲೆನೋವಿನ ಸಮಸ್ಯೆಯು ಕಾಡುತ್ತಿದೆ. ಸುಡು ಬಿಸಿಲಿನಲ್ಲಿ ಸುತ್ತಾಡಿ ಬಂದರೆ, ಸ್ವಲ್ಪ ಒತ್ತಡವೇನಾದರೂ ಆದರೆ ತಲೆ ನೋವು ಕಾಣಿಸಿಕೊಳ್ಳುತ್ತದೆ. ಅತಿಯಾದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಫೋನ್ ಗಳ ಬಳಕೆಯಿಂದ ಈ ಸಮಸ್ಯೆಯ ತೀವ್ರತೆಯು ಹೆಚ್ಚಾಗುತ್ತಿದೆ. ಆಗಾಗ ತಲೆ ನೋವು ಕಾಣಿಸಿಕೊಂಡರೆ ಮನೆಯಲ್ಲಿ ಮದ್ದನ್ನು ತಯಾರಿಸಿ ಸೇವಿಸಿದರೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ವಿಪರೀತವಾದ ತಲೆ ನೋವಿನ ಸಮಸ್ಯೆಯಿಂದ ಬಳಲುವವರ ಸಂಖ್ಯೆಗೇನು ಕಡಿಮೆಯಿಲ್ಲ. ಕೆಲವರಂತೂ ಪದೇ ಪದೇ ಕಾಡುವ ತಲೆನೋವಿನಿಂದ ನರಕಯಾತನೆ ಅನುಭವಿಸುತ್ತಾರೆ. ಈ ನೋವು ಕಡಿಮೆಯಾಗಲಿ ಎಂದು ನೋವು ನಿವಾರಣೆ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಅಡುಗೆ ಮನೆಯಲ್ಲೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ತಲೆನೋವಿನ ಸಮಸ್ಯೆಯನ್ನು ಸಂಪೂರ್ಣವಾಗಿ ದೂರವಿಡಬಹುದು.
ತಲೆನೋವಿನ ಸಮಸ್ಯೆ ನಿವಾರಣೆಗೆ ಮನೆ ಮದ್ದುಗಳು
* ನಿಂಬೆಹಣ್ಣಿನ ರಸದಲ್ಲಿ ದಾಲ್ಪಿನಿಯನ್ನು ತೇಯ್ದು, ಹಣೆಗೆ ಲೇಪಿಸಿಕೊಂಡರೆ ಅರ್ಧ ತಲೆನೋವು ಕಡಿಮೆಯಾಗುತ್ತದೆ.
* ಒತ್ತಡದಿಂದ ತಲೆನೋವು ಉಂಟಾಗುತ್ತಿದ್ದರೆ ಹುಳಿ ದಾಳಿಂಬೆ ಹಣ್ಣಿನ ರಸಕ್ಕೆ ಜೇನುತುಪ್ಪವನ್ನು ಬೆರೆಸಿ, ಒಂದೆರಡು ವಾರಗಳ ಕಾಲ ಸೇವಿಸುತ್ತಿದ್ದರೆ ಗುಣ ಮುಖವಾಗುತ್ತದೆ.
* ಹಸುವಿನ ತುಪ್ಪದಲ್ಲಿ ಸ್ವಲ್ಪ ಬೆಲ್ಲ ಬೆರೆಸಿ, ಬರಿಹೊಟ್ಟೆಯಲ್ಲಿ ಮೂರು-ನಾಲ್ಕು ದಿನಗಳ ಕಾಲ ತಿನ್ನುತ್ತಿದ್ದರೆ ಅರ್ಧ ತಲೆನೋವು ನಿವಾರಣೆಯಾಗುತ್ತದೆ.
* ಬಾರ್ಲಿಗಂಜಿ ಕುಡಿಯುತ್ತಿದ್ದರೆ ತಲೆ ನೋವಿನ ಸಮಸ್ಯೆಗೆ ರಾಮಬಾಣ.
* ಎಳೆಯ ಬೇವಿನೆಲೆಗಳನ್ನು ರಸ ತೆಗೆದು, ಪ್ರತಿದಿನ ಒಂದೆರಡು ಚಮಚ ಸೇವಿಸುತ್ತಿದ್ದರೆ ತಲೆನೋವಿಗೆ ದಿವ್ಯ ಔಷಧಿಯಾಗಿದೆ.
* ಕಿರು ನೆಲ್ಲಿಕಾಯಿಗೆ ಉಪ್ಪು ಸೇವಿಸಿದರೆ ಅರ್ಧಭಾಗ ತಲೆನೋವು ಹಾಗೂ ತಲೆ ಸುತ್ತುವಿಕೆ ಶಮನವಾಗುತ್ತದೆ.
* ಅರ್ಧ ತಲೆನೋವು ಸಮಸ್ಯೆಯಿರುವವರು ಸೇಬಿನ ಹೋಳುಗಳಿಗೆ ಉಪ್ಪು ಬೆರೆಸಿ ತಿಂದರೆ ಪರಿಣಾಮಕಾರಿಯಾದ ಔಷಧವಾಗಿದೆ.
* ಕೆಂಪಕ್ಕಿ ಅನ್ನಕ್ಕೆ ಮೊಸರು ಹಾಕಿಕೊಂಡು ತಿನ್ನುವ ಅಭ್ಯಾಸ ಬೆಳೆಸಿಕೊಂಡರೆ ತಲೆ ನೋವಿನ ಸಮಸ್ಯೆಯು ಬಾಧಿಸುವುದಿಲ್ಲ.
* ಈರುಳ್ಳಿಯನ್ನು ಸೇವಿಸುತ್ತಿದ್ದರೆ ತಲೆ ನೋವು ಸಮಸ್ಯೆಯು ಕಾಡುವುದಿಲ್ಲ.
* ನುಗ್ಗೆಸೊಪ್ಪಿನ ರಸದಲ್ಲಿ ಕರಿಮೆಣಸಿನ ಪುಡಿಯನ್ನು ಸೇರಿಸಿ, ಇದನ್ನು ಹಣೆಯ ಮೇಲೆ ಲೇಪಿಸಿಕೊಂಡರೆ ತಲೆನೋವು ದೂರವಾಗುತ್ತದೆ.
* ಪಿತ್ತದಿಂದಾಗಿ ತಲೆನೋವು ಶುರುವಾಗಿದ್ದರೆ, ಒಂದು ಲೋಟ ಚಹಾಕ್ಕೆ ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿದರೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ: ಪೌಷ್ಟಿಕಾಂಶಯುಕ್ತ ಈ ಬೇಳೆಕಾಳುಗಳು ಆರೋಗ್ಯ ವೃದ್ಧಿಗೆ ಅಗತ್ಯ
* ಏಲಕ್ಕಿ ಪುಡಿ ಬೆರೆಸಿದ ನಿಂಬೆಹಣ್ಣಿನ ಪಾನಕವನ್ನು ಸೇವಿಸುತ್ತಿದ್ದರೆ ತಲೆ ಸುತ್ತುವುದು ನಿಂತು ಹೋಗುತ್ತದೆ.
* ಕೊತ್ತುಂಬರಿ ಬೀಜದ ಕಷಾಯ ಮಾಡಿ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಸಕ್ಕರೆ ಬೆರೆಸ ಕುಡಿಯುವುದರಿಂದ ತಲೆ ನೋವಿನ ಜೊತೆಗೆ ತಲೆಸುತ್ತುವಿಕೆ ಸಮಸ್ಯೆಯಿದ್ದರೆ ನಿವಾರಣೆಯಾಗುತ್ತದೆ.
* ನುಗ್ಗೆಸೊಪ್ಪನ್ನು ಬೇಯಿಸಿ ತೆಗೆದ ನೀರಿಗೆ ನಿಂಬೆರಸವನ್ನು ಬೆರೆಸಿ ಒಂದು ವಾರಗಳ ಕಾಲ ಕುಡಿಯುವುದರಿಂದ ತಲೆನೋವು ದೂರವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ