ಸ್ಟೈಲಿಶ್ ಲುಕ್ ಎಂಬುದು ಈಗ ಕೇವಲ ಬಟ್ಟೆ, ಶೂ ಇತ್ಯಾದಿಗಳಿಂದ ಮಾತ್ರ ಅಳೆಯಲ್ಪಡುವುದಿಲ್ಲ. ಅಥವಾ ಅಷ್ಟಕ್ಕೇ ಮುಗಿಯುವುದಿಲ್ಲ. ಗಡ್ಡ ಮತ್ತು ಕೇಶ ವಿನ್ಯಾಸವೂ ಸ್ಟೈಲಿಶ್ ಆಗಿರಲು ಬಹುಮುಖ್ಯ ಪಾತ್ರ ವಹಿಸುತ್ತದೆ. ಅದರಲ್ಲೂ ಹುಡುಗರಿಗೆ ಗಡ್ಡ ಎಂಬುದು ಒಂದು ವಿಶೇಷ ಸಂಗತಿಯೇ ಆಗಿದೆ. ಹೊಸ ಟ್ರೆಂಡ್ ಆಗಿದೆ. ವಿಧವಿಧವಾದ ಶೈಲಿಯ ಗಡ್ಡ, ಅದರ ಶೇಪಿಂಗ್, ನೋಟ ಇತ್ಯಾದಿಯ ಬಗ್ಗೆ ಜನ ಕಾಳಜಿ ವಹಿಸುತ್ತಾರೆ. ಗಡ್ಡ ಮೀಸೆ ಬರುವುದನ್ನೇ ಎಷ್ಟೋ ತರುಣರು ಕಾಯುತ್ತಿರುತ್ತಾರೆ. ಅದಕ್ಕಾಗಿಯೂ ಶ್ರಮ ಪಡುತ್ತಾರೆ. ಇನ್ನು ಗಡ್ಡ ಬಂದನಂತರ ಅದರ ದಿನದ ಆರೈಕೆಯನ್ನೂ ಮಾಡುತ್ತಾರೆ. ಗಡ್ಡದ ಆರೈಕೆ ಸ್ವಲ್ಪ ಕಷ್ಟವೇ ಆಗಿದೆ.
ಕೆಲವರಿಗೆ ಗಡ್ಡ ಬಿಡುವುದು ತುರಿಕೆ, ಕಿರಿಕಿರಿ ಉಂಟುಮಾಡಬಹುದು. ಕೆಲವರಿಗೆ ಗಡ್ಡದ ಕೂದಲು ಒಣಗಿ ಸಮಸ್ಯೆ ಆಗಬಹುದು. ಇನ್ನು ಕೆಲವರಿಗೆ ಗಡ್ಡ ನಿರ್ಜೀವವಾಗಬಹುದು. ಇದೆಲ್ಲದರ ಹಿಂದೆ ತಪ್ಪಾದ ಗಡ್ಡದ ಆರೈಕೆ ಅಥವಾ ದಿನಚರಿ ಇದೆ. ಗಡ್ಡದ ಆರೈಕೆಗೆ ತಜ್ಞರು ದಿನಚರಿಯನ್ನು ಶಿಫಾರಸು ಮಾಡುತ್ತಾರೆ. ಗಡ್ಡವನ್ನು ತೊಳೆಯುವುದು ಅದನ್ನು ಸ್ವಚ್ಛಗೊಳಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಆದರೆ, ಈ ವೇಳೆ ಜನ ಅನೇಕ ತಪ್ಪು ಮಾಡುವ ಸಾಧ್ಯತೆಯೂ ಇರುತ್ತದೆ. ಈ ತಪ್ಪುಗಳ ಬಗ್ಗೆ ಇಲ್ಲಿ ಹೇಳಲಾಗಿದೆ.
ನೀರಿನ ತಾಪಮಾನ
ಹೆಚ್ಚಿನ ಜನರು ಗಡ್ಡವನ್ನು ತೊಳೆಯುವಾಗ ನೀರಿನ ತಾಪಮಾನದ ಬಗ್ಗೆ ಕಾಳಜಿ ವಹಿಸುವುದಿಲ್ಲ. ನೀರಿನ ತಾಪಮಾನ ಸೂಕ್ತವಾಗಿ ಇರದಿದ್ದರೆ ಗಡ್ಡ ಶುಚಿಗೊಳಿಸುವುದು ಪರಿಪೂರ್ಣವಾಗುವುದಿಲ್ಲ. ತುಂಬಾ ತಣ್ಣನೆಯ ನೀರು ಗಡ್ಡವನ್ನು ಒಣಗಿಸಬಹುದು. ಹಾಗಾಗಿ ನೀರಿನ ತಾಪಮಾನ ಸಮಶೀತೋಷ್ಣವಾಗಿ ಇರಬೇಕು.
ಗಡ್ಡವನ್ನು ಅತಿಯಾಗಿ ತೊಳೆಯುವುದು
ಕೆಲವರಿಗೆ ಗಡ್ಡವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಮತ್ತೆ ಮತ್ತೆ ಪುನರಾವರ್ತಿಸುವ ಆಗಾಗ ಗಡ್ಡ ತೊಳೆಯುವ ಅಭ್ಯಾಸ ಇರುತ್ತದೆ. ಕೂದಲಿಗೆ ನೀರಿನ ಅತಿಯಾದ ಬಳಕೆ ಅವುಗಳನ್ನು ಒಣಗಿಸಬಹುದು. ಗಡ್ಡದಲ್ಲಿ ನೀರನ್ನು ನಿರಂತರವಾಗಿ ಉಳಿಸುವುದರಿಂದ ಚರ್ಮಕ್ಕೆ ಕೂಡ ಹಾನಿ ಆಗುತ್ತದೆ. ನೀರಿನಿಂದಾಗಿ ಚರ್ಮದ ನೈಸರ್ಗಿಕ ತೈಲ ಇಲ್ಲವಾಗುತ್ತದೆ. ಈ ಸಂದರ್ಭ ಕೂದಲಿನ ಹೊಳಪು ಕೂಡ ಕಡಿಮೆ ಆಗುತ್ತದೆ. ಹಾಗಾಗಿ ದಿನಕ್ಕೆ ಎರಡು ಬಾರಿ ನೀರಿನಿಂದ ಗಡ್ಡವನ್ನು ಸ್ವಚ್ಛಗೊಳಿಸಿದರೆ ಒಳಿತು.
ಗಡ್ಡವನ್ನು ತೇವಗೊಳಿಸುವುದು
ಗಡ್ಡ ತೊಳೆದ ನಂತರ ಅದರ ಆರೈಕೆ ಪೂರ್ಣವಾಗಿದೆ ಎಂದು ಹಲವರು ನಂಬುತ್ತಾರೆ. ಆದರೆ, ಗಡ್ಡವನ್ನು ತೇವಗೊಳಿಸುವುದು ಮುಖ್ಯ. ಮಾಯಿಶ್ಚರೈಸ್ ಮಾಡಲು ಹಲವು ಉತ್ಪನ್ನಗಳು ಲಭ್ಯ ಇರುತ್ತದೆ. ಗಡ್ಡದ ಕೂದಲಿಗೆ ಮಾಯಿಶ್ಚರೈಸಿಂಗ್ ಕ್ರೀಂ ಹಚ್ಚಬಹುದು. ಕೆನೆ ಬಳಸಲು ಇಷ್ಟವಿದ್ದರೆ ಹಾಲಿನ ಕೆನೆ ಅಥವಾ ಎಣ್ಣೆಯನ್ನು ಕೂಡ ಬಳಸಬಹುದು.
ಇದನ್ನೂ ಓದಿ: Beauty Tips: ಕಿತ್ತಳೆ ಸಿಪ್ಪೆಯಿಂದ ಈ ವಿಶೇಷ ಫೇಸ್ ಪ್ಯಾಕ್ ಮಾಡಿ; ಮುಖದ ಕಾಂತಿ ಹೆಚ್ಚಿಸಿಕೊಳ್ಳಿ!
ಇದನ್ನೂ ಓದಿ: Beauty Tips: ಬೇಸಿಗೆಯಲ್ಲಿ ಕಾಡುವ ಒಣ ತ್ವಚೆಯ ರಕ್ಷಣೆಗೆ ಹೀಗೆ ಮಾಡಿ