ನೆಲದ ಮೇಲೆ ಕುಳಿತು ಊಟ ಮಾಡೋದು ಕೇವಲ ಸಂಪ್ರದಾಯವಲ್ಲ, ಇದರಿಂದ ಆರೋಗ್ಯಕ್ಕೂ ಇದೇ ಸಾಕಷ್ಟು ಪ್ರಯೋಜನ

ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಸಂಪ್ರದಾಯಗಳು ಕೇವಲ ಆಚರಣೆಗಳಲ್ಲ, ಅದರ ಹಿಂದೆ ಸಾಕಷ್ಟು ಅರ್ಥ, ವೈಜ್ಞಾನಿಕ ಕಾರಣಗಳೂ ಇವೆ. ಅಂತಹ ಸಂಪ್ರದಾಯಗಳಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವ ಪದ್ಧತಿ ಕೂಡ ಒಂದು. ಇದು ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ. ಹೌದು ನೆಲದ ಮೇಲೆ ಪದ್ಮಾಸನ ಅಥವಾ ಸುಖಾಸನ ಹಾಕಿ ಕುಳಿತು ಊಟ ಮಾಡುವುದು ಜೀರ್ಣಕ್ರಿಯೆಯೆಗೆ, ಸ್ನಾಯುಗಳಿಗೆ ತುಂಬಾನೇ ಒಳ್ಳೆಯದಂತೆ. ಒಟ್ಟಾರೆಯಾಗಿ ನೆಲದ ಮೇಲೆ ಕುಳಿತು ಊಟ ಮಾಡುವ ಅಭ್ಯಾಸ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ ಬನ್ನಿ.

ನೆಲದ ಮೇಲೆ ಕುಳಿತು ಊಟ ಮಾಡೋದು ಕೇವಲ ಸಂಪ್ರದಾಯವಲ್ಲ, ಇದರಿಂದ ಆರೋಗ್ಯಕ್ಕೂ ಇದೇ ಸಾಕಷ್ಟು ಪ್ರಯೋಜನ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 09, 2026 | 8:08 PM

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನೆಲದ ಮೇಲೆಯೇ ಕುಳಿತು (sitting on the floor) ಊಟ ಮಾಡುವ ಸಂಪ್ರದಾಯವಿದೆ. ಹಿಂದೆಲ್ಲಾ ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ನೆಲದ ಮೇಲೇ ಕುಳಿತೇ ಊಟ ಮಾಡುತ್ತಿದ್ದರು. ಆದರೆ ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಅನೇಕರು ಡೈನಿಂಗ್‌ ಟೇಬಲ್‌ ಮೇಲೆಯೇ ಕುಳಿತು ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ಏನು ಪ್ರಯೋಜನವಿದೆಯೋ ಗೊತ್ತಿಲ್ಲ, ಆದರೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಊಟ ಮಾಡುವಾಗ ನೆಲದ ಮೇಲೆ ಕೂರುವ ಸಂಪ್ರದಾಯ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹೌದು ಹೌದು ನೆಲದ ಮೇಲೆ ಪದ್ಮಾಸನ ಅಥವಾ ಸುಖಾಸನ ಹಾಕಿ ಕುಳಿತು ಊಟ ಮಾಡುವುದು ಜೀರ್ಣಕ್ರಿಯೆಯೆನ್ನು ಸುಧಾರಿಸಲು, ಬೆನ್ನು ಮತ್ತು ಸೊಂಟದ ಸ್ನಾಯುಗಳನ್ನು ಬಲವಾಗಿರಿಸಲು ಸಹಕಾರಿ.

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದಾಗುವ ಪ್ರಯೋಜನಗಳೇನು?

ಉತ್ತಮ ಜೀರ್ಣಕ್ರಿಯೆ: ನೆಲದ ಮೇಲೆ ಕುಳಿತು ಊಟ ಮಾಡುವ ಸಂದರ್ಭದಲ್ಲಿ ತಟ್ಟೆಯಲ್ಲಿರುವ ಅನ್ನವನ್ನು ಬಾಯಿಗೆ ಹಾಕುವಾಗ ನಾವು ತಟ್ಟೆಯ ಕಡೆಗೆ ಬಾಗುತ್ತೇವೆ. ಹೀಗೆ ನಿರಂತರವಾಗಿ ಮುಂದಕ್ಕೆ ಮತ್ತು ಹಿಂದಕ್ಕೆ ಬಾಗುವುದು  ಕಿಬ್ಬೊಟ್ಟೆಯ ಸ್ನಾಯುಗಳಿಗೆ ವ್ಯಾಯಾಮವಾದಂತೆ ಆಗುತ್ತದೆ.  ಇದು  ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ರಕ್ತ ಪರಿಚಲನೆ ಸುಧಾರಿಸುತ್ತದೆ: ಪದ್ಮಾಸನ ಅಥವಾ ಸುಖಾಸನದಲ್ಲಿ ಕುಳಿತು ಊಟ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತನಾಳಗಳಲ್ಲಿನ ಒತ್ತಡವನ್ನು ನಿವಾರಿಸುತ್ತದೆ. ಇದಲ್ಲದೆ ಕುರ್ಚಿಯಲ್ಲಿ ಕುಳಿತಾಗ, ಗುರುತ್ವಾಕರ್ಷಣೆಯಿಂದಾಗಿ ರಕ್ತದ ಹರಿವು ಹೆಚ್ಚಾಗಿ  ಕಾಲುಗಳಿಗೆ ಹರಿಯುತ್ತದೆ. ಅದೇ, ನೆಲದ ಮೇಲೆ ಕಾಲುಗಳನ್ನು ಮಡಚಿ ಕುಳಿತಾಗ, ಕೆಳಮುಖ ರಕ್ತದ ಹರಿವು ಕಡಿಮೆಯಾಗುತ್ತದೆ ಮತ್ತು ಹೊಟ್ಟೆ ಮತ್ತು ಹೃದಯದ ಕಡೆಗೆ ರಕ್ತದ ಹರಿವು ಹೆಚ್ಚುತ್ತದೆ. ಹೀಗೆ ಹೊಟ್ಟೆಯ ಕಡೆಗೆ ರಕ್ತದ ಹರಿವು ಹೆಚ್ಚಾದಾಗ  ಜೀರ್ಣಾಂಗ ವ್ಯವಸ್ಥೆಯು ಅದರ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ತೂಕ ನಿರ್ವಹಣೆ: ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ತೂಕ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಲದ ಮೇಲೆ ಕುಳಿತು ಊಟ ಮಾಡುವುದರಿಂದ ಮೆದುಳಿಗೆ ಹೊಟ್ಟೆ ತುಂಬಿದೆ ಮತ್ತು ಕಡಿಮೆ ತಿನ್ನಬೇಕು ಎಂಬ ಸಂಕೇತ ಬರುತ್ತದೆ ಎಂದು ಹೇಳಲಾಗುತ್ತದೆ. ಪರಿಣಾಮವಾಗಿ, ನಾವು ಕಡಿಮೆ ತಿನ್ನುತ್ತೇವೆ ಮತ್ತು ನಮ್ಮ ತೂಕ ನಿಯಂತ್ರಣದಲ್ಲಿರುತ್ತದೆ.

ಕೀಲು ನೋವನ್ನು ತಡೆಯುತ್ತದೆ: ನೆಲದ ಮೇಲೆ ಕುಳಿತು ಊಟ ಮಾಡುವಾಗ, ಮೊಣಕಾಲುಗಳನ್ನು ಬಾಗಿಸಿ ಕುಳಿತುಕೊಳ್ಳಬೇಕಾಗುತ್ತದೆ. ಇದು ಮೊಣಕಾಲುಗಳಿಗೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಅಲ್ಲದೆ ಸೊಂಟ, ಮೊಣಕಾಲು ಮತ್ತು ಪಾದದ ಕೀಲುಗಳಿಗೆ ನಮ್ಯತೆಯನ್ನು ಒದಗಿಸುತ್ತದೆ. ಇದು ಕೀಲು ನೋವನ್ನು ತಡೆಯಲು ಸಹಾಯ ಮಾಡುತ್ತದೆ, ಬೆನ್ನುಮೂಳೆಯನ್ನು ಬಲಪಡಿಸುತ್ತದೆ, ಕೀಲು ನೋವು ಮತ್ತು ಸಂಧಿವಾತದಂತಹ ಸಮಸ್ಯೆಗಳನ್ನು ತಡೆಯುತ್ತದೆ.

ಇದನ್ನೂ ಓದಿ: ಮನೆ ಕ್ಲೀನ್‌ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿಯಂತೆ

ಒತ್ತಡವನ್ನು ಕಡಿಮೆ ಮಾಡುತ್ತದೆ: ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಊಟ ಮಾಡುವಾಗ ಸುಖಾಸನ ಅಥವಾ ಪದ್ಮಾಸನ ಭಂಗಿಯಲ್ಲಿ ಕುಳಿತುಕೊಳ್ಳುತ್ತೇವೆ. ಈ ಎರಡೂ ಭಂಗಿಗಳು ಏಕಾಗ್ರತೆಯನ್ನು ಹೆಚ್ಚಿಸುತ್ತವೆ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುತ್ತವೆ. ಈ ರೀತಿ ತಿನ್ನುವುದರಿಂದ ಆಹಾರದ ಸಂಪೂರ್ಣ ಪ್ರಯೋಜನ ದೇಹಕ್ಕೆ ದೊರೆಯುತ್ತವೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.

ಇದಲ್ಲದೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಿಧಾನವಾಗಿ ಮತ್ತು ಮನಸ್ಸಿನಿಂದ ತಿನ್ನುವ ಅಭ್ಯಾಸ ಬೆಳೆಯುವ ಸಾಧ್ಯತೆ ಹೆಚ್ಚು. ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಮತ್ತು ಸರಿಯಾದ ಸಮಯದಲ್ಲಿ ಹೊಟ್ಟೆ ತುಂಬಿದ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us