ಇಂದಿನ ಬಿಡುವಿಲ್ಲದ ಜೀವನದಲ್ಲಿ ಪ್ರತಿಯೊಬ್ಬರೂ ಒತ್ತಡ ಮುಕ್ತವಾಗಿರಲು ಬಯಸುತ್ತಾರೆ. ಆದರೆ ಕೆಲಸ, ವೈಯಕ್ತಿಕ ಕಾರಣಗಳಿಂದ ಈ ಒತ್ತಡಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತವೆ ಹೊರತು ಕಡಿಮೆಯಾಗುವುದಿಲ್ಲ. ಒತ್ತಡದ ಕಾರಣದಿಂದ ಮಾನಸಿಕ ನೆಮ್ಮದಿ ಹಾಳಾಗುವುದಲ್ಲದೆ ಅದು ನಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಿದ್ದರೆ ಒತ್ತಡವನ್ನು ನಿವಾರಿಸಬೇಕೆಂದರೆ ಪ್ರತಿನಿತ್ಯ ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟು ಧ್ಯಾನ, ಯೋಗ, ವ್ಯಾಯಾಮಗಳನ್ನು ಮಾಡಬೇಕು. ಈ ಚಟುವಟಿಕೆಗಳು ಒತ್ತಡದಿಂದ ಮುಕ್ತಿ ನೀಡುವುದು ಮಾತ್ರವಲ್ಲದೆ ನಿಮ್ಮನ್ನು ದಿನವಿಡೀ ಕ್ರಿಯಾಶೀಲರನ್ನಾಗಿಸುತ್ತದೆ. ಹಾಗಿದ್ದರೆ ಪ್ರತಿನಿತ್ಯ ಧ್ಯಾನ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ.
ಧ್ಯಾನವು ವಿಶ್ರಾಂತಿಯನ್ನು ಉತ್ತೇಜಿಸುವ ಮೂಲಕ ಮತ್ತು ಕಾರ್ಟಿಸೋಲ್ ನಂತಹ ಒತ್ತಡದ ಹಾರ್ಮೋನುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಧ್ಯಾನ ಮಾಡುವ ಮೂಲಕ ನಿಮ್ಮ ದೈನಂದಿನ ಕೆಲಸದ ಒತ್ತಡವನ್ನು ನೀವು ಸುಲಭವಾಗಿ ನಿಭಾಯಿಸಬಹುದು.
ಧ್ಯಾನವು ನಿಮ್ಮ ಆಲೋಚನೆಗಳನ್ನು ಉತ್ತಮವಾಗಿಡುವ ಮೂಲಕ ನಿಮ್ಮ ಮನಸ್ಸನ್ನು ಯೌವನವಾಗಿರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ವೃದ್ದಾಪ್ಯದಲ್ಲಿ ಜ್ಞಾಪಕಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿ.
ಧ್ಯಾನವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅಲ್ಲದೆ ನಿಯಮಿತ ಧ್ಯಾನವು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ನಕರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡಿ ನಿಮ್ಮಲ್ಲಿ ಧನಾತ್ಮಕ ಬದಲಾವಣೆಗಳನ್ನು ಉಂಟುಮಾಡುತ್ತದೆ.
ನಿಯಮಿತ ಧ್ಯಾನವನ್ನು ಮಾಡುವ ಮೂಲಕ ಏಕಾಗ್ರತೆಯನ್ನು ಸುಧಾರಿಸಬಹುದು. ಇದರ ಸಹಾಯದಿಂದ ನಿಮ್ಮ ಮನಸ್ಸು ವಿಚಲಿತವಾಗದೆ ನೀವು ನಿಮ್ಮ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಬಹುದು. ಅಲ್ಲದೆ ಧ್ಯಾನ ಮಾಡುವುದರಿಂದ ಮನಸ್ಸನ್ನು ಶಾಂತಗೊಳಿಸಬಹುದು ಮತ್ತು ಸ್ಮರಣಾ ಶಕ್ತಿಯನ್ನು ಸುಧಾರಿಸಬಹುದು.
ಇದನ್ನೂ ಓದಿ: ನೀವು 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತೀರಾ? ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ
ಧ್ಯಾನ ಮಾಡುವುದರಿಂದ ಆತಂಕದ ಸಮಸ್ಯೆಯನ್ನು ಗಣನೀಯವಾಗಿ ಕಡಿಮೆಯಾಗಬಹುದು. ನಿಮ್ಮ ಮನಸ್ಸನ್ನು ಶಾಂತಗೊಳಿಸಲು ವಿಶ್ರಾಂತಿ ತಂತ್ರವನ್ನು ಬಳಸಿಕೊಂಡು ಆತಂಕದ ಆಲೋಚನೆಗಳು, ಭಾವನೆಗಳನ್ನು ಉತ್ತಮವಾಗಿ ನಿಯಂತ್ರಿಸಲು ನೀವು ಕಲಿಯಬಹುದು.
ನಿಯಮಿತ ಧ್ಯಾನವು ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಧ್ಯಾನದ ವಿಶ್ರಾಂತಿ ತಂತ್ರಗಳು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ. ಮತ್ತು ಮನಸ್ಸನ್ನು ಶಾಂತವಾಗಿರಿಸುತ್ತದೆ.
ಉಸಿರಾಟದ ಸಂಬಂಧಿ ಸಮಸ್ಯೆಯನ್ನು ತಡೆಗಟ್ಟಲು ಧ್ಯಾನವು ಪರಿಣಾಕಾರಿ ಮಾರ್ಗವಾಗಿದೆ. ಹೌದು ಇದು ಶ್ವಾಸಕೋಶದ ಕಾರ್ಯವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಬ್ರಾಂಕೈಟಿಸ್ ಮತ್ತು ನ್ಯುಮೋನೀಯಾದಂತಹ ಅರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು 20 ದಿನಗಳ ಕಾಲ ಧ್ಯಾನ ಮಾಡುವುದರಿಂದ ಶ್ವಾಸಕೋಶವನ್ನು ಬಲಪಡಿಸಬಹುದು.
ಮಾನಸಿಕ ಆರೋಗ್ಯದ ಜೊತೆಗೆ ಧ್ಯಾನವು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ತಲೆನೋವನ್ನು ನಿವಾರಿಸುತ್ತದೆ, ಸ್ನಾಯು ಮತ್ತು ಕೀಲುನೋವನ್ನು ಕಡಿಮೆ ಮಾಡುತ್ತದೆ, ಹಾಗೂ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹಾಗಾಗಿ ಪ್ರತಿನಿತ್ಯ 20 ನಿಮಿಷಗಳ ಕಾಲ ಧ್ಯಾನ ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: