ಯಾವುದೇ ವ್ಯಕ್ತಿಯ ಜೀವನದಲ್ಲಿ ಅತ್ಯಮೂಲ್ಯ ವಸ್ತುಗಳೆಂದರೆ ಅದುವೇ ಗೌರವ ಹಾಗೂ ಪ್ರತಿಷ್ಠೆ. ಹೀಗಾಗಿ ವ್ಯಕ್ತಿಯೂ ತನ್ನ ಇಡೀ ಜೀವನವನ್ನು ಗೌರವ ಪಡೆಯಲು ಹಾಗೂ ಕಾಪಾಡಿಕೊಳ್ಳುವಲ್ಲಿ ಕಳೆಯುತ್ತಾನೆ. ಹೀಗಾಗಿ ಹೆಚ್ಚಿನವರಲ್ಲಿ ತಾನು ಯಾವುದಾದರೂ ತಪ್ಪು ಕೆಲಸ ಮಾಡಿದರೆ ಸಮಾಜವು ನನ್ನನ್ನು ಯಾವ ದೃಷ್ಟಿಯಲ್ಲಿ ನೋಡಬಹುದು ಎನ್ನುವ ಭಯವಿರುತ್ತದೆ. ಆದರೆ ಚಾಣಕ್ಯ ತನ್ನ ನೀತಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ಒಬ್ಬ ವ್ಯಕ್ತಿಯಲ್ಲಿ ಈ ಗುಣಗಳಿದ್ದರೆ, ಅವನು ತನ್ನ ಜೀವನದುದ್ದಕ್ಕೂ ಎಲ್ಲರಿಂದಲೂ ಗೌರವಕ್ಕೆ ಪಾತ್ರರಾಗುತ್ತಾನೆ. ಹಾಗಾದ್ರೆ ವ್ಯಕ್ತಿಯಲ್ಲಿ ಇರಬೇಕಾದ ಆ ಗುಣಗಳಾವುವು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
Ad
ಸಾಂದರ್ಭಿಕ ಚಿತ್ರ
Follow us on
ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಸಂತೋಷವಾಗಿರಬೇಕು, ಎಲ್ಲರೂ ತನ್ನನ್ನು ಗೌರವಿಸಬೇಕು ಎಂದು ಬಯಸುತ್ತಾರೆ. ಕೆಲವರು ತಮ್ಮ ಜೀವನಮಾನವಿಡಿ ಪ್ರತಿಷ್ಠೆ ಹಾಗೂ ಗೌರವಕ್ಕೆ ಹೆಣಗಾಡುತ್ತಾರೆ. ಇಂತಹವರಿಗೆ ಚಾಣಕ್ಯನು ಸಲಹೆ ನೀಡಿದ್ದಾನೆ. ಗೌರವ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಈ ಕೆಲವು ಗುಣಗಳಿದ್ದರೆ ಗೌರವ ಹಾಗೂ ಪ್ರೀತಿ ತಾನಾಗಿಯೇ ಸಿಗುತ್ತದೆ. ಹೀಗಾಗಿ ಸಮಾಜದಲ್ಲಿ ಎಲ್ಲರಂತೆ ನೀವು ಗೌರವ ಹಾಗೂ ಪ್ರೀತಿ ಗಳಿಸಬೇಕಾದರೆ ಈ ಕೆಲವು ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದು ತಿಳಿಸಿದ್ದಾನೆ.
ಗುರಿಯತ್ತ ಗಮನ ಕೊಡಿ : ಜೀವನದಲ್ಲಿ ಏನು ಮಾಡದೇ ಸುಮ್ಮನೆ ಕುಳಿತರೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಜೀವನಕ್ಕೆ ಒಂದು ಗುರಿ ಇರಲೇಬೇಕು. ಆ ಗುರಿಯನ್ನು ಸಾಧಿಸಲು ಕೆಲಸ ಮಾಡುವುದು ಬಹಳ ಮುಖ್ಯವಾಗುತ್ತದೆ. ನೀವು ಕನಸುಗಳೊಂದಿಗೆ ಬ್ಯುಸಿಯಾಗಿರಿ, ಸದಾ ಕಾರ್ಯಪ್ರವೃತ್ತರಾದರೆ ಯಶಸ್ಸು ತಾನಾಗಿಯೇ ಲಭಿಸುತ್ತದೆ. ಇದರಿಂದ ಎಲ್ಲರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗುತ್ತೀರಿ ಎನ್ನುತ್ತಾನೆ ಚಾಣಕ್ಯ.
ನಿಮ್ಮೊಂದಿಗೆ ನೀವಿರಿ : ಸಮಾಜದಲ್ಲಿ ಗೌರವ ಸಂಪಾದಿಸಬೇಕೆಂದರೆ ಚಾಣಕ್ಯ ಹೇಳುವಂತೆ ನೀವು ನೀವಾಗಿರುವುದು ಬಹಳ ಮುಖ್ಯ. ನಿಮ್ಮ ಬಗ್ಗೆ ಯಾರು ಕಾಳಜಿ ವಹಿಸುವುದಿಲ್ಲವೋ ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಬೇರೆ ವ್ಯಕ್ತಿಗೆ ನೀಡುವ ಸಮಯವನ್ನು ನೀವು ನಿಮಗಾಗಿ ನೀಡಿ. ನಿಮ್ಮ ಬೇಕು ಬೇಡ ಹಾಗೂ ಆದ್ಯತೆಗಳ ಬಗ್ಗೆ ಗಮನ ವಹಿಸಿ. ನಿಮಗಿಂತ ಬೇರೆ ಯಾರು ಕೂಡ ನಿಮ್ಮನ್ನು ಸಂತೋಷವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನುವ ಸತ್ಯದ ಅರಿವಿರಲಿ. ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಹಾಗೂ ಎಲ್ಲಾ ಕ್ಷಣದಲ್ಲಿ ನೀವು ನೀವಾಗಿದ್ದರೆ ಜನರು ನಿಮ್ಮನ್ನು ಹೆಚ್ಚು ಗೌರವಿಸುತ್ತಾರೆ.
ಸ್ವಯಂ ನಿಯಂತ್ರಣವಿರಲಿ : ಜೀವನದ ಕೆಲವು ಸನ್ನಿವೇಶಗಳಲ್ಲಿ ನಿಮ್ಮನ್ನು ನಿಯಂತ್ರಿಸಿಕೊಳ್ಳುವುದು ಬಹಳ ಮುಖ್ಯ. ಎಲ್ಲರೊಂದಿಗೆ ಅತಿಯಾಗಿ ವರ್ತಿಸುವುದು ಬೇಡಿ, ಇನ್ನೊಬ್ಬರನ್ನು ನೋಡಿ ಅಸೂಯೆ ಪಡುವುದು ಹಾಗೂ ಸೇಡು ತೀರಿಸಿಕೊಳ್ಳುವ ಭಾವನೆಗಳು ಸಮಾಜದಲ್ಲಿ ನಿಮ್ಮನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುತ್ತದೆ. ಹೀಗಾಗಿ ಮನಸ್ಸು ಶಾಂತವಾಗಿರಲಿ, ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ ಬೆಳೆಸಿಕೊಂಡರೆ ಸಮಾಜವು ನಿಮ್ಮನ್ನು ಗೌರವಿಸುತ್ತದೆ.
ಗೌರವ ಕೊಟ್ಟು ಪಡೆದುಕೊಳ್ಳಿ : ಯಾವ ವ್ಯಕ್ತಿಯೂ ತನ್ನ ಎದುರಿಗಿರುವ ವ್ಯಕ್ತಿಗೆ ಗೌರವ ಕೊಡುತ್ತಾನೋ, ಆತನಿಗೆ ತನ್ನಿಂದ ತಾನೇ ಗೌರವವು ಸಿಗುತ್ತದೆ. ಹೀಗಾಗಿ ಇತರರನ್ನು ಗೌರವಿಸುವ ಗುಣ ಇರಬೇಕು. ಇತರರನ್ನು ಕೀಳಾಗಿ ಕಾಣಲು ಪ್ರಯತ್ನಿಸುವ ಜನರು ಅವರಿಗೆ ನಿಜವಾದ ಗೌರವ ಎಂದಿಗೂ ಸಿಗುವುದಿಲ್ಲ. ಹೀಗಾಗಿ ನೀವು ಏನು ಕೊಡುತ್ತಿರೋ ಅದು ವಾಪಸ್ಸು ನಿಮಗೆ ಬರುತ್ತದೆ ಎಂದಿದ್ದಾನೆ ಚಾಣಕ್ಯ.
ಸತ್ಯದ ಹಾದಿಯಿರಲಿ : ಇಂದಿನ ಕಾಲಘಟ್ಟದಲ್ಲಿ ಹೆಚ್ಚಿನವರು ಸುಳ್ಳು ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಆದರೆ ಸತ್ಯವಂತರಿಗೆ ಯಾವತ್ತಿಗೂ ಒಳ್ಳೆಯದೇ ಆಗುತ್ತದೆ. ಈ ಸತ್ಯದ ಹಾದಿ ತುಂಬಾ ಕಷ್ಟಕರವಾಗಿದ್ದು, ಜೀವನದಲ್ಲಿ ಸತ್ಯದ ಹಾದಿಯನ್ನು ಅನುಸರಿಸುವ ವ್ಯಕ್ತಿಯೂ ತಾನಾಗಿಯೇ ಎಲ್ಲರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗುತ್ತಾನೆ.
ಜವಾಬ್ದಾರಿ ತೆಗೆದುಕೊಳ್ಳುವ ಗುಣವಿರಲಿ : ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಎಲ್ಲರಿಗೂ ಕೂಡ ಸಾಧ್ಯವಿಲ್ಲ. ಕೆಲವೊಮ್ಮೆ ಇಂತಹ ಸಂದರ್ಭ ಬಂದೋದಾಗಿದಾಗ ಅಲ್ಲಿಂದ ನುಸುಳಿ ಕೊಳ್ಳುವವರೇ ಹೆಚ್ಚು. ಆದರೆ ತಮ್ಮ ಕುಟುಂಬದಲ್ಲಿ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವ ಜನರು ಗೌರವಕ್ಕೆ ಪಾತ್ರರಾಗುತ್ತಾರೆ. ಹೌದು, ಒಬ್ಬ ವ್ಯಕ್ತಿಯು ತನ್ನ ಗುಣಗಳು ಮತ್ತು ಕಾರ್ಯಗಳಿಂದ ಮಾತ್ರ ಗೌರವಕ್ಕೆ ಅರ್ಹನಾಗುತ್ತಾನೆ ಎಂದು ಹೇಳಿದ್ದಾನೆ ಚಾಣಕ್ಯ.