Chanakya Niti: ಈ ತಪ್ಪುಗಳಿಂದ ನೀವು ನಗೆಪಾಟಲಿಗೆ ಈಡಾಗುತ್ತೀರಿ ಎಚ್ಚರ!
ಆಚಾರ್ಯ ಚಾಣಕ್ಯರು ದಾಂಪತ್ಯ ಜೀವನ, ವೈಯಕ್ತಿಕ ಜೀವನ, ವೃತ್ತಿ ಸೇರಿದಂತೆ ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಹೇಗಿರಬೇಕು, ಯಾವ ತಪ್ಪುಗಳನ್ನು ಮಾಡಿದರೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂಬುದರ ಬಗ್ಗೆಯೂ ತಿಳಿಸಿದ್ದಾರೆ. ಹಾಗಿದ್ದರೆ ನಿಮ್ಮನ್ನು ನೋಡಿ ನಾಲ್ಕು ಜನ ನಗಬಾರದೆಂದರೆ ಈ ತಪ್ಪುಗಳನ್ನು ಮಾಡಬೇಡಿ.

ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ನಾವು ಮಾಡುವ ಕೆಲವೊಂದು ತಪ್ಪುಗಳಿಂದ (mistakes) ನಮ್ಮ ಗೌರವವೇ ಹಾಳಾಗುತ್ತದೆ, ಅಲ್ಲದೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ನಾವು ಮಾಡುವ ಯಾವ ತಪ್ಪುಗಳು ಹಾಗೂ ನಮ್ಮ ಅಭ್ಯಾಸಗಳಿಂದ ಸಮಾಜದಲ್ಲಿ ಮುಜುಗರಕ್ಕೀಡಬೇಕಾಗುತ್ತದೆ, ನಾಲ್ಕು ಜನ ನಮ್ಮನ್ನು ನೋಡಿ ನಗಬಾರದೆಂದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಈ ತಪ್ಪುಗಳಿಂದ ನಿಮ್ಮ ಗೌರವ ಹಾಳಾಗಬಹುದು:
ಹೆಚ್ಚು ಮಾತನಾಡುವುದು ಮತ್ತು ಬಡಾಯಿ ಕೊಚ್ಚಿಕೊಳ್ಳುವುದು: ಚಾಣಕ್ಯರ ಪ್ರಕಾರ, ತಮ್ಮ ಸಾಮರ್ಥ್ಯಗಳನ್ನು ಮೀರಿ ಹೆಮ್ಮೆಪಡುವ ಅಥವಾ ಪ್ರತಿಯೊಂದು ವಿಷಯಕ್ಕೂ ಬಡಾಯಿ ಕೊಚ್ಚಿಕೊಳ್ಳುವ ಜನರು ಇತರರ ನಗೆಪಾಟಲಿಗೆ ಗುರಿಯಾಗುತ್ತಾರೆ. ಯಾವಾಗಲೂ ಇತರರ ಗಮನ ಸೆಳೆಯಲು ಪ್ರಯತ್ನಿಸುವ ಜನರು ಅಂತಹ ತಪ್ಪುಗಳನ್ನು ಮಾಡುತ್ತಾರೆ. ಹಾಗಾಗಿ ಸಮಾಜದಲ್ಲಿ ನಿಮ್ಮ ಗೌರವವನ್ನು ಕಾಪಾಡಿಕೊಳ್ಳಲು, ಅಗತ್ಯವಿರುವಷ್ಟು ಮಾತ್ರ ಮಾತನಾಡಿ ಮತ್ತು ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಿ.
ಯೋಚಿಸದೆ ವಾದ ಮಾಡುವುದು: ಪ್ರತಿಯೊಂದು ಸಣ್ಣ ವಿಷಯಕ್ಕೂ ಇತರರೊಂದಿಗೆ ವಾದ ಮಾಡುವುದು ಮತ್ತು ಯೋಚಿಸದೆ ಮಾತನಾಡುವುದು ಸರಿಯಲ್ಲ, ನೀವು ಅಂತಹ ವ್ಯಕ್ತಿತ್ವವನ್ನು ಹೊಂದಿದ್ದರೆ, ನೀವು ಇತರರ ದೃಷ್ಟಿಯಲ್ಲಿ ದುರ್ಬಲರಾಗಿ ಕಾಣುತ್ತೀರಿ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಹಾಗಾಗಿ ನೀವು ಯೋಚಿಸಿ ಮಾತನಾಡಬೇಕು ಇಲ್ಲದಿದ್ದರೆ ನಿಮ್ಮನ್ನು ಇತರರು ಗೇಲಿ ಮಾಡುತ್ತಾರೆ, ಕೀಳಾಗಿ ಕಾಣುತ್ತಾರೆ ಮುಖ್ಯವಾಗಿ ನೀವು ಇತರರ ನಗೆಪಾಟಲಿಗೆ ಈಡಾಗಬೇಕಾಗುತ್ತದೆ.
ಇತರರಿಗೆ ವೈಯಕ್ತಿಕ ರಹಸ್ಯವನ್ನು ಹೇಳುವುದು: ವೈಯಕ್ತಿಕ ರಹಸ್ಯಗಳನ್ನು ಇತರರಿಗೆ ಹೇಳುವುದು ಮತ್ತು ಭವಿಷ್ಯದ ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಜನರು ತೊಂದರೆಗೆ ಸಿಲುಕುತ್ತಾರೆ. ಕೆಲವರು ಈ ದೌರ್ಬಲ್ಯಗಳನ್ನು ಅಸ್ತ್ರವಾಗಿ ಬಳಸುತ್ತಾರೆ ಮತ್ತು ಆ ದೌರ್ಬಲ್ಯಗಳನ್ನು ಇನ್ನೊಬ್ಬರ ಬಳಿ ಹೇಳಿ ನಗುತ್ತಾರೆ. ಹಾಗಾಗಿ ನಿಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ನೀವು ಯಾರೊಂದಿಗೂ ಹಂಚಿಕೊಳ್ಳಬಾರದು.
ಇದನ್ನೂ ಓದಿ: 2026 ರಲ್ಲಿ ಯಶಸ್ಸು ನಿಮ್ಮದಾಗಲು ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ಅನುಸರಿಸಿ
ಜಾಸ್ತಿ ಖರ್ಚು ಮಾಡುವವರು: ಆದಾಯಕ್ಕಿಂತ ಖರ್ಚಿಗೆ ಆದ್ಯತೆ ನೀಡುವ ವ್ಯಕ್ತಿ ಸಮಾಜದಲ್ಲಿ ನಗೆಪಾಟಲಿಗೆ ಈಡಾಗುತ್ತಾನೆ. ಇತರರ ಮುಂದೆ ಶೋಕಿ ಜೀವನ ನಡೆಸಲು ಹೋಗಿ ಸಾಲ ಮಾಡಿ, ನಂತರ ಆ ಸಾಲವನ್ನು ತೀರಿಸಲು ಸಾಧ್ಯವಾಗದೆ ಜೀವನದಲ್ಲಿ ಸೋಲುವ ವ್ಯಕ್ತಿಯನ್ನು ಯಾರು ಗೌರವಿಸುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಮೂರ್ಖರೊಂದಿಗಿನ ಸ್ನೇಹ, ವಾದ: ಮೂರ್ಖರ ಸ್ನೇಹ ಅಥವಾ ಮೂರ್ಖರೊಂದಿಗೆ ಗಂಟೆಗಟ್ಟಲೆ ವಾದ ಮಾಡುವುದರಿಂದ ಸಮಯ ವ್ಯರ್ಥವಾಗುವುದಲ್ಲದೆ, ನಿಮ್ಮ ಸ್ಥಾನಮಾನವೂ ಕಡಿಮೆಯಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಮೂರ್ಖರೊಂದಿಗೆ ಸ್ನೇಹ ಮಾಡುವುದರಿಂದ ನೋಡುವ ಜನರೂ ನಿಮ್ಮನ್ನು ಮೂರ್ಖರಂತೆ ನೋಡುತ್ತಾರೆ. ಹಾಗಾಗಿ ನೋಡಿ, ಯೋಚಿಸಿ ಉತ್ತಮರ ಸಹವಾಸ ಮಾಡಿ, ಇದರಿಂದ ನಿಮ್ಮ ಸ್ಥಾನಮಾನ ಕೂಡ ಹೆಚ್ಚಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




