ಗರ್ಭಿಣಿಯರೇ ಆಹಾರದ ಬಗ್ಗೆ ಇರಲಿ ಎಚ್ಚರ; ಜಂಕ್​ ಫುಡ್​​ಗಳ ಸೇವನೆ ಬಿಟ್ಟೇಬಿಡಿ..ಇಲ್ದಿದ್ರೆ ಮಕ್ಕಳಿಗೆ ಅಪಾಯ

ಗರ್ಭಿಣಿಯರ ಆಹಾರ ಪದ್ಧತಿ ಮಕ್ಕಳ ಸ್ಥೂಲಕಾಯ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಪರಿಶೀಲಿಸಲು, ಐರ್ಲ್ಯಾಂಡ್​, ಫ್ರಾನ್ಸ್​, ಬ್ರಿಟನ್​, ನೆದರ್​ಲ್ಯಾಂಡ್ ಮತ್ತು ಪೋಲ್ಯಾಂಡ್​ಗಳ ಒಟ್ಟು 16,295 ತಾಯಿ-ಮಕ್ಕಳಿಂದ ಸಂಗ್ರಹಿಸಲಾದ ದತ್ತಾಂಶವನ್ನು ವಿಶ್ಲೇಷಿಸಲಾಗಿತ್ತು.

  • TV9 Web Team
  • Published On - 19:39 PM, 25 Feb 2021
ಗರ್ಭಿಣಿಯರೇ ಆಹಾರದ ಬಗ್ಗೆ ಇರಲಿ ಎಚ್ಚರ; ಜಂಕ್​ ಫುಡ್​​ಗಳ ಸೇವನೆ ಬಿಟ್ಟೇಬಿಡಿ..ಇಲ್ದಿದ್ರೆ ಮಕ್ಕಳಿಗೆ ಅಪಾಯ
ಪ್ರಾತಿನಿಧಿಕ ಚಿತ್ರ

ಗರ್ಭಿಣಿಯರಿಗೆ ವಿವಿಧ ರೀತಿಯ ಬಯಕೆಗಳು ಆಗುವುದು ಸಹಜ. ಅದರಲ್ಲಿ ಏನಾದರೂ ತಿನ್ನಬೇಕು ಎನ್ನುವುದೂ ಒಂದು. ಸ್ವಲ್ಪ ಹುಳಿ, ಸ್ಪೈಸಿ ತಿಂಡಿಗಳನ್ನು ತಿನ್ನಲು ಕೆಲವರು ಇಷ್ಟಪಡುತ್ತಾರೆ. ಇನ್ನೂ ಒಂದಷ್ಟು ಮಹಿಳೆಯರಿಗೆ ಸಿಹಿ ತಿನ್ನುವ ಬಯಕೆಯಾಗುತ್ತಂತೆ. ಆದರೆ ಏನೇ ತಿಂದರೂ ಆರೋಗ್ಯಯುತ ತಿಂಡಿಗಳನ್ನೇ ತಿನ್ನಬೇಕು. ಮಹಿಳೆಯರು ಗರ್ಭ ಧರಿಸಿದಾಗ ಯಾವ ಕಾರಣಕ್ಕೂ ಉಪ್ಪು, ಸಕ್ಕರೆ ಅಂಶವುಳ್ಳ ಸಂಸ್ಕರಿಸಿದ ತಿಂಡಿಗಳನ್ನು ತಿನ್ನಬಾರದು. ಹೀಗೆ ತಿಂದರೆ ಹುಟ್ಟುವ ಮಕ್ಕಳಲ್ಲಿ ಬೊಜ್ಜು, ಸ್ಥೂಲಕಾಯದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುತ್ತದೆ ಒಂದು ಅಧ್ಯಯನ.

ಯಾವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಕಡಿಮೆ ಗುಣಮಟ್ಟದ ಆಹಾರಗಳನ್ನು, ಉರಿಯೂತ ಉಂಟುಮಾಡುವ ತಿಂಡಿಗಳನ್ನು ಹೆಚ್ಚಾಗಿ ಸೇವಿಸುತ್ತಾರೋ, ಅವರಿಗೆ ಹುಟ್ಟುವ ಮಕ್ಕಳು ತಮ್ಮ ಬಾಲ್ಯದಲ್ಲಿಯೇ ಬೊಜ್ಜು, ಕೆಟ್ಟ ಕೊಬ್ಬು, ಸ್ಥೂಲಕಾಯದ ಸಮಸ್ಯೆಗೆ ಒಳಗಾಗುವ ಅಪಾಯ ಜಾಸ್ತಿ ಇರುತ್ತದೆ ಎಂದು ಅಧ್ಯಯನದಿಂದ ಬೆಳಕಿಗೆ ಬಂದಿದ್ದಾಗಿ ಐರ್ಲ್ಯಾಂಡ್​​ನ ಯೂನಿವರ್ಸಿಟಿ ಆಫ್​ ಡಬ್ಲಿನ್​ನ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​ನ ಸಂಶೋಧನಾ ವಿಜ್ಞಾನಿ ಲಿಂಗ್ ವೀ ಚೇನ್​ ತಿಳಿಸಿದ್ದಾರೆ. ಬಾಲ್ಯದಲ್ಲಿ ಬೊಜ್ಜಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬೊಜ್ಜಿನ ಸಮಸ್ಯೆ ಪ್ರೌಢಾವಸ್ಥೆಗೂ ಮುಂದುವರಿಯುತ್ತದೆ. ಇದು ಟೈಪ್​ 2 ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ ಸೇರಿ ಇನ್ನೂ ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಯಿಯ ಆಹಾರಕ್ಕೂ..ಹುಟ್ಟಿದ ಮಕ್ಕಳ ಬೊಜ್ಜಿಗೂ ಸಂಬಂಧ ಹೇಗೆ?
ಗರ್ಭಿಣಿಯರ ಆಹಾರ ಪದ್ಧತಿ ಮಕ್ಕಳ ಸ್ಥೂಲಕಾಯ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಪರಿಶೀಲಿಸಲು, ಐರ್ಲ್ಯಾಂಡ್​, ಫ್ರಾನ್ಸ್​, ಬ್ರಿಟನ್​, ನೆದರ್​ಲ್ಯಾಂಡ್ ಮತ್ತು ಪೋಲ್ಯಾಂಡ್​ಗಳ ಒಟ್ಟು 16,295 ತಾಯಿ-ಮಕ್ಕಳಿಂದ ಸಂಗ್ರಹಿಸಲಾದ ಡಾಟಾವನ್ನು ವಿಶ್ಲೇಷಿಸಲಾಗಿತ್ತು. ಈ ಸಂಶೋಧನೆಯಲ್ಲಿ ಪಾಲ್ಗೊಂಡ ತಾಯಂದಿರು ಅಂದಾಜು 30ವರ್ಷದವರಾಗಿದ್ದರು. ಆರೋಗ್ಯಕರ body mass index (ಭೌತಿಕ ದ್ರವ್ಯರಾಶಿ ಸೂಚಿ) ಹೊಂದಿದ್ದರು. ಹಾಗೇ ಅವರ ತೂಕ, ಎತ್ತರ ಮತ್ತು ಲಿಂಗಕ್ಕೆ ಅನುಗುಣವಾಗಿ ಬೊಜ್ಜಿನ ಪ್ರಮಾಣವನ್ನೂ ಪರಿಶೀಲನೆ ಮಾಡಲಾಗಿತ್ತು. ಇನ್ನು 11 ವರ್ಷದ ಮಕ್ಕಳನ್ನು ಅಧ್ಯಯನದಲ್ಲಿ ಒಳಪಡಿಸಿಕೊಳ್ಳಲಾಗಿತ್ತು.

ಮಹಿಳೆಯರು ತಾವು ಗರ್ಭ ಧರಿಸುವುದಕ್ಕೂ ಮೊದಲು ಸೇವಿಸುತ್ತಿದ್ದ ಆಹಾರಗಳು, ಗರ್ಭಾವಸ್ಥೆಯಲ್ಲಿ ಸೇವಿಸಿದ ಆಹಾರಗಳ ಪಟ್ಟಿಯನ್ನೂ ಅಧ್ಯಯನಕ್ಕೆ ನೀಡಿದ್ದರು. ಸಂಶೋಧಕರು ಅದನ್ನು 5 ವಿಧದ ಶ್ರೇಣಿಗಳಲ್ಲಿ ವರ್ಗೀಕರಿಸಿದ್ದರು. ಯಾರು ಹಣ್ಣು, ಹಸಿರು ತರಕಾರಿ, ಡ್ರೈಫ್ರೂಟ್ಸ್​ಗಳಂತ ಆರೋಗ್ಯಕರ ಆಹಾರಗಳನ್ನು ಸೇವಿಸಿದ್ದರೋ ಅವರ ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಕಡಿಮೆ ಆಗಿದೆ. ಅದೇ, ರೆಡ್​ ಮೀಟ್​, ಉಪ್ಪು-ಸಕ್ಕರೆ ಅಂಶವುಳ್ಳ ಸಂಸ್ಕರಿಸಿದ ಆಹಾರವನ್ನು ಹೆಚ್ಚಾಗಿ ತಿಂದ ತಾಯಂದಿರ ಮಕ್ಕಳೇ ಹೆಚ್ಚಾಗಿ ಸ್ಥೂಲಕಾಯ, ಕೆಟ್ಟಕೊಬ್ಬಿನ ಸಮಸ್ಯೆಗೆ ಸಿಲುಕಿದ್ದು ಬೆಳಕಿಗೆ ಬಂದಿದೆ ಎಂದು ಅಧ್ಯಯನ ವರದಿಯಲ್ಲಿ ವಿವರವಾಗಿ  ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಯಾವ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗಿದೆಯೋ, ಅವರಲ್ಲಿ ಮಾಂಸಖಂಡ ಪ್ರಮಾಣ ಕಡಿಮೆ ಇರುವುದೂ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪರೀಕ್ಷೆಯ ಸನಿಹದಲ್ಲಿರುವ ನಿಮ್ಮ ಮಕ್ಕಳ ಏಕಾಗ್ರತೆ ಹೆಚ್ಚಿಸಲು ಈ ಆಹಾರ ಪದ್ಧತಿ ಮತ್ತು ಜೀವನಶೈಲಿ ಸಹಕಾರಿ