
ಜನಸಂಖ್ಯೆಯಲ್ಲಿ ನಂಬರ್ ಸ್ಥಾನದಲ್ಲಿದ್ದ ಚೀನಾವು ಎರಡನೇ ಸ್ಥಾನಕ್ಕೆ ಬಂದು ತಲುಪಿದೆ. ಅದಲ್ಲದೇ, ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿರುವ ಚೀನಾಕ್ಕೆ ಮತ್ತೊಂದು ತಲೆನೋವು ಎದುರಾಗಿದ್ದು, ಒಂದೆಡೆ ಚೀನಾದಲ್ಲಿ ಯುವಕರು ಮದುವೆಯಾಗಲು ಹಿಂಜರಿಯುತ್ತಿದ್ದರೆ, ಮತ್ತೊಂದೆಡೆ ವಿಚ್ಛೇದನ ಪಡೆಯುವ ದಂಪತಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಅಂಕಿಅಂಶಗಳಿಂದ ತಿಳಿದು ಬಂದಿದೆ.
ಚೀನಾದ ನಾಗರಿಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ವರದಿಯ ಪ್ರಕಾರವಾಗಿ ಕಳೆದ ಕೆಲವು ವರ್ಷಗಳಿಂದ ಚೀನಾದಲ್ಲಿ ವಿವಾಹಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕಳೆದ ವರ್ಷ ಚೀನಾದಲ್ಲಿ ಒಟ್ಟು 6.1 ಮಿಲಿಯನ್ ವಿವಾಹಗಳು ನೋಂದಣಿಯಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 20 ರಷ್ಟು ಕಡಿಮೆಯಾಗಿದೆ ಎನ್ನಲಾಗಿದೆ.
ಒಂದೆಡೆ ವಿವಾಹವಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ವಿಚ್ಛೇದನಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ದೇಶದ ಜನಸಂಖ್ಯೆ ಹೆಚ್ಚಿಸಲು ಚೀನಾ ಸರ್ಕಾರವು ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ಅಲ್ಲಿನ ಯುವಕರು ಮದುವೆಯಾಗಲು ಮನಸ್ಸು ಮಾಡುತ್ತಿಲ್ಲ. 1986 ರಲ್ಲಿ ಚೀನಾ ವಿವಾಹ ನೋಂದಣಿ ಆರಂಭಿಸಿದ ನಂತರದಲ್ಲಿ ವಿವಾಹ ನೋಂದಣಿ ಈ ಮಟ್ಟಕ್ಕೆ ಕುಸಿದಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2013 ರಲ್ಲಿ 13 ಮಿಲಿಯನ್ ವಿವಾಹಗಳು ನೋಂದಣಿಯಾಗಿದ್ದರೆ, ಪ್ರಸ್ತುತ ಸಂಖ್ಯೆಯು ಅರ್ಧಕ್ಕಿಂತ ಕಡಿಮೆಯಿದ್ದು, ಈ ಅಂಕಿಅಂಶವು ಚೀನಾದ ಸರ್ಕಾರಿ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಸಿದೆ.
ಅದಲ್ಲದೇ, ಚೀನಾದಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಅಂಕಿಅಂಶದಿಂದ ಬಹಿರಂಗವಾಗಿದೆ. 2024 ರಲ್ಲಿ, 2.6 ಮಿಲಿಯನ್ ಜೋಡಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, 2023 ಕ್ಕೆ ಹೋಲಿಸಿದರೆ ಈ ಪ್ರಮಾಣವು 28,000 ರಷ್ಟು ಹೆಚ್ಚಾಗಿದೆ. ಚೀನಾ ಸರ್ಕಾರ ವಿಚ್ಛೇದನವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಪರಿಸ್ಥಿತಿ ಮಾತ್ರ ಬದಲಾಗುತ್ತಿಲ್ಲ.
ಇದನ್ನೂ ಓದಿ: ತರಕಾರಿ ಕತ್ತರಿಸಲು ಮರದ ಹಲಗೆ ಬಳಸುತ್ತಿದ್ದೀರಾ? ಇದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?
ಅದಲ್ಲದೆ ಚೀನಾದಲ್ಲಿ 16 ರಿಂದ 59 ವರ್ಷದೊಳಗಿನ ದುಡಿಯುವ ವಯಸ್ಕರ ಸಂಖ್ಯೆಯೂ, 2024 ರಲ್ಲಿ 6.83 ಮಿಲಿಯನ್‌ಗಳಷ್ಟು ಕಡಿಮೆಯಾಗಿದೆ. ಒಟ್ಟು ಜನಸಂಖ್ಯೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ ಶೇ. 22 ರಷ್ಟು ಏರಿಕೆಯಾಗಿದೆ. ಆದರೆ, ದೇಶದ ಜನಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣ ವಿವಾಹಗಳ ಸಂಖ್ಯೆಯಲ್ಲಿನ ಇಳಿಕೆ ಎನ್ನಲಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ