Recurring Headaches: ಪ್ರತಿದಿನ ತಲೆನೋವು ಏಕೆ ಬರುತ್ತದೆ? ಅದರ ಹಿಂದಿನ ಕಾರಣ ಇಲ್ಲಿದೆ 

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 01, 2023 | 6:09 PM

ಪ್ರತಿಯೊಬ್ಬರೂ ಕೆಲವೊಂದು ಬಾರಿ ತಲೆನೋವನ್ನು ಅನುಭವಿಸುವುದು ಸಾಮಾನ್ಯ. ಆದರೆ ಪ್ರತಿನಿತ್ಯ ಕಾಣಿಸಿಕೊಳ್ಳುವಂತಹ ತಲೆನೋವಿಗೆ ಹಲವು ಕಾರಣಗಳಿರಬಹುದು. ಈ ಸಮಸ್ಯೆ ದೈನಂದಿನ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಉಂಟುಮಾಡಬಹುದು.  ಆಗಾಗ್ಗೆ  ಕಾಡುವಂತಹ ಈ ತಲೆ ನೋವಿನ ಹಿಂದಿನ ಕಾರಣಗಳು ಮತ್ತು ಅದನ್ನು ತೊಡೆದುಹಾಕಲು ಇರುವ ಸೂಕ್ತ ಪರಿಹಾರ ಮಾರ್ಗಗಳ ಬಗ್ಗೆ ತಿಳಿಯಿರಿ.

Recurring Headaches: ಪ್ರತಿದಿನ ತಲೆನೋವು ಏಕೆ ಬರುತ್ತದೆ? ಅದರ ಹಿಂದಿನ ಕಾರಣ ಇಲ್ಲಿದೆ 
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಒತ್ತಡ ಮತ್ತು ಆತಂಕ ಸೇರಿದಂತೆ ಹಲವು ಕಾರಣಗಳಿಂದ ತಲೆನೋವಿನ ಸಮಸ್ಯೆ ತುಂಬಾ ಸಾಮಾನ್ಯವಾಗಿಬಿಟ್ಟಿದೆ. ತಲೆನೋವಿಗೆ ಒಂದೇ ಕಾರಣವಿಲ್ಲ,  ನೀವು ಹಲವು ಕಾರಣಗಳಿಂದ ತಲೆನೋವನ್ನು ಅನುಭವಿಸಬಹುದು. ಇನ್ನೂ ಕೆಲವರಿಗಂತೂ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣವೇ ತಲೆನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.  ಈ ಸಮಸ್ಯೆ ದೈನಂದಿನ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಉಂಟುಮಾಡಬಹುದು. ನಮ್ಮ ಕೆಲಸಕ್ಕೆ ಅಡ್ಡಿಯುಂಟುಮಾಡಬಹುದು. ಈ ರೀತಿ ಪ್ರತಿನಿತ್ಯ ಕಾಡುವಂತಹ ತಲೆ ನೋವಿನ ಹಿಂದೆ ಒಂದಲ್ಲ ಹಲವು ಕಾರಣಗಳಿವೆ. ವಿವಿಧ ಕಾರಣಗಳಿಂದ ಉಂಟಾಗುವ  ಈ ತಲೆನೋವಿನ ಹಿಂದಿನ ಕಾರಣಗಳು ಮತ್ತು ಇದನ್ನು ತೊಡೆದುಹಾಕಲು ಇರುವ ಸೂಕ್ತ ಪರಿಹಾರ ಮಾರ್ಗಗಳ ಬಗ್ಗೆ ತಿಳಿಯಿರಿ.

ಆಗಾಗ್ಗೆ ಕಾಡುವಂತಹ ತಲೆನೋವಿನ ಹಿಂದಿನ ಕಾರಣಗಳು:

ನಿದ್ರೆಯ ಕೊರತೆ: ಒಬ್ಬ ವ್ಯಕ್ತಿಯು ಸಾಕಷ್ಟು ಸಮಯ  ನಿದ್ದೆ ಮಾಡದಿದ್ದರೂ, ಆತನಿಗೆ ತಲೆನೋವಿನ ಸಮಸ್ಯೆ ಬಾಧಿಸಬಹುದು. ಪ್ರತಿದಿನ ನೀವು 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡದಿದ್ದದೆ, ಆಗಾಗ್ಗೆ ತಲೆನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು.  ಅಲ್ಲದೆ ಈ ನಿದ್ರೆಯ ಕೊರತೆಯು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪ್ರತಿನಿತ್ಯ 7 ರಿಂದ 8 ಗಂಟೆಗಳ ಕಾಲ ನೆಮ್ಮದಿಯಿಂದ ನಿದ್ರಿಸುವುದು ತುಂಬಾನೇ ಮುಖ್ಯ.

ಆತಂಕ ಮತ್ತು ಒತ್ತಡ: ಯಾವುದೋ ವಿಷಯದ ಬಗ್ಗೆ ಹೆಚ್ಚು ಚಿಂತಿಸುವುದು ಅಥವಾ ಅದರ ಬಗ್ಗೆ ಯೋಚಿಸುವುದು ಕೂಡಾ ತಲೆನೋವಿಗೆ ಕಾರಣವಾಗಬಹುದು. ಅತಿಯಾದ ಒತ್ತಡದಿಂದಾಗಿ, ಒಬ್ಬ ವ್ಯಕ್ತಿಯು ಸರಿಯಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಇದು ತಲೆನೋವಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ಒತ್ತಡದ ಮನಸ್ಥಿತಿಯನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ದಿನನಿತ್ಯ ಯೋಗ, ಧ್ಯಾನ ಮತ್ತು ವ್ಯಾಯಾಮವನ್ನು ಅಭ್ಯಾಸ ಮಾಡುವುದು ಸೂಕ್ತ.

ನಿರ್ಜಲೀಕರಣ: ಕೆಲವೊಮ್ಮೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೆ ಇರುವುದು ಕೂಡಾ ತಲೆನೋವಿಗೆ ಕಾರಣವಾಗಬಹುದು. ದೇಹದಲ್ಲಿ ನೀರಿನ ಕೊರತೆಯು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ತಲೆನೋವಿಗೂ ಕಾರಣವಾಗಬಹುದು. ಅಲ್ಲದೆ ಅತಿಯಾದ ಮದ್ಯಪಾನದಿಂದಲೂ ತಲೆನೋವಿನ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿ ಪ್ರತಿನಿತ್ಯ 2 ರಿಂದ 3 ಮೂರು ಲೀಟರ್ ನೀರು ಕುಡಿಯುವುದು ಬಹಳ ಅವಶ್ಯಕ. ಅಲ್ಲದೆ ಇದು ನಮ್ಮ ಒಟ್ಟಾರೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಇದನ್ನೂ ಓದಿ: ಮಾನಸಿಕ ಒತ್ತಡದಿಂದ ಮೈಗ್ರೇನ್ ಬರುತ್ತಾ?

 ಕಣ್ಣುಗಳ ಆಯಾಸದಿಂದಲೂ ತಲೆನೋವು ಬರಬಹುದು: ಲ್ಯಾಪ್ಟಾಪ್ನಲ್ಲಿ ದೀರ್ಘಕಾಲ ಕೆಲಸ ಮಾಡುವುದು ಅಥವಾ ಮೊಬೈಲ್ ನೋಡುವುದು ಸಹ ತಲೆನೋವಿಗೆ ಕಾರಣವಾಗಬಹುದು. ಕಣ್ಣುಗಳಲ್ಲಿ ಆಯಾಸ ಕಾಣಿಸಿಕೊಂಡಾಗ, ಇದರಿಂದ ತಲೆಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆಗ  ತಲೆನೋವು  ಕಾಣಿಸಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ  ಕಣ್ಣಿನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಮಿತಿಮೀರಿತ ಔಷಧಿ ಸೇವನೆಯಿಂದ ತಲೆನೋವು: ಕೆಲವರು  ಹೆಚ್ಚು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ನೋವು ನಿವಾರಕಗಳ ಅತಿಯಾದ ಬಳಕೆಯು ತೀವ್ರ ತಲೆನೋವಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಸಾಧ್ಯವಾದಷ್ಟು, ಔಷಧಿಗಳನ್ನು ಬಳಸುವುದನ್ನು ತಪ್ಪಿಸಬೇಕು.

ಹಾರ್ಮೋನುಗಳ ಬದಲಾವಣೆ: ಹಾರ್ಮೋನು ಮಟ್ಟದಲ್ಲಿನ ಏರುಪೇರು ಕೂಡ ತಲೆನೋವಿಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸಿ ಮತ್ತು ಪ್ರತಿನಿತ್ಯ ವ್ಯಾಯಾಮ ಮಾಡಿ. ಅಲ್ಲದೆ ವಿಟಮಿನ್ ಡಿ ಮತ್ತು ಮೆಗ್ನೇಸಿಯಂನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ

ಇತರ ಕಾರಣಗಳು:  ಮೈಗ್ರೇನ್, ಸೈನಸ್, ಅಧಿಕ ರಕ್ತದೊತ್ತಡ ಕಾಯಿಲೆಯಿಂದಲೂ ತಲೆನೋವು ಸಂಭವಿಸಬಹುದು. ಆದ್ದರಿಂದ ನಿಮಗೆ ಪದೇ ಪದೇ ತಲೆನೋವಿನ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು  ಭೇಟಿ ಮಾಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Wed, 1 November 23