Kannada Rajyothsava 2023: ಕನ್ನಡ ರಾಜ್ಯೋತ್ಸವದಂದು ಈ ಸಂಕಲ್ಪ ಮಾಡಿಕೊಳ್ಳುವ ಮೂಲಕ ಜೀವನಶೈಲಿಯನ್ನು ಸಕಾರಾತ್ಮಕವಾಗಿ ಬದಲಿಸಿಕೊಳ್ಳಿ
ಈ ಪ್ರಚಂಚದಲ್ಲಿ ಹೆಚ್ಚಿನವರು ಹೊಸ ವರ್ಷ ಆರಂಭದಲ್ಲಿ ಜೀವನಶೈಲಿಯನ್ನು ಬದಲಿಸುವ ಕೆಲವೊಂದು ಸಂಕಲ್ಪಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಕನ್ನಡಿಗರಾದ ನಾವು ಕನ್ನಡ ರಾಜ್ಯೋತ್ಸವದ ಈ ಶುಭ ದಿನದಂದು ಕೆಲವೊಂದು ಜೀವನಶೈಲಿ ಬದಲಾವಣೆಯ ಸಂಕಲ್ಪಗಳನ್ನು ತೆಗೆದುಕೊಳ್ಳುವ ಮೂಲಕ ಇಡೀ ಜೀವನವನ್ನು ಸಕಾರಾತ್ಮಕ ರೀತಿಯಲ್ಲಿ ಬದಲಾಯಿಸಿಕೊಳ್ಳೋಣ.
ಇಂದು ಕನ್ನಡ ರಾಜ್ಯೋತ್ಸವ. ರಾಜ್ಯೋತ್ಸವವನ್ನು ನಾವೆಲ್ಲರೂ ಬಹಳ ವಿಜೃಂಭಣೆಯಿಂದ ಆಚರಿಸುತ್ತೇವೆ. ಮತ್ತು ಸಿಹಿಗಳನ್ನು ಹಂಚುತ್ತಾ ಪರಸ್ಪರ ಶುಭ ಹಾರೈಕೆಗಳನ್ನು ತಿಳಿಸುತ್ತೇವೆ. ಅದರೊಂದಿಗೆ ಒಂದು ಹೆಜ್ಜೆ ಮುಂದೆ ಎಂಬಂತೆ ಈ ಸುದಿನ ನಮ್ಮ ಜೀವನವನ್ನು ಬದಲಾಯಿಸುವ ಕೆಲವೊಂದು ಸಂಕಲ್ಪಗಳನ್ನು ಕೂಡಾ ತೆಗೆದುಕೊಳ್ಳಬಹುದು. ಈ ಪ್ರಪಂಚದಲ್ಲಿ ಹೆಚ್ಚಿನವರು ಹೊಸ ವರ್ಷದ ಆರಂಭದಲ್ಲಿ ಜೀವನಶೈಲಿಯನ್ನು ಆರೋಗ್ಯಕರ ರೀತಿಯಲ್ಲಿ ಬದಲಾಯಿಸುವ ಅದೆಷ್ಟೋ ಸಂಕಲ್ಪಗಳನ್ನು ಕೈಗೊಳ್ಳುತ್ತಾರೆ. ಅದೇ ರೀತಿ ಕನ್ನಡಿಗರಾದ ನಾವು ಕನ್ನಡ ರಾಜ್ಯೋತ್ಸವದ ಈ ಶುಭ ದಿನದಂದು ಕೆಲವೊಂದು ಸಂಕಲ್ಪ ಅಥವಾ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ನಮ್ಮ ಇಡೀ ಜೀವನವನ್ನು ಸಕಾರಾತ್ಮಕ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು.
ಈ ಕೆಲವೊಂದು ಸಂಕಲ್ಪಗಳನ್ನು ಕೈಗೊಳ್ಳುವ ಮೂಲಕ ಜೀವನಶೈಲಿಯನ್ನು ಸಕಾರಾತ್ಮಕವಾಗಿ ಬದಲಾವಣೆ ಮಾಡಿಕೊಳ್ಳುವ:
ಮೊದಲನೆಯದಾಗಿ ಕನ್ನಡಕ್ಕೆ ಆಧ್ಯತೆ ನೀಡಿ:
ಇಂದು ಇಂಗ್ಲೀಷ್ ಭಾಷೆ ಮಾತನಾಡುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಅನೇಕರು ಮನೆಗಳಲ್ಲಿ, ಸ್ನೇಹಿತರೊಂದಿಗೆ ಕೇವಲ ಇಂಗ್ಲೀಷ್ ಭಾಷೆಯಲ್ಲಿಯೇ ಸಂವಹನ ನಡೆಸುತ್ತಾರೆ. ಇದರ ಬದಲು ಕನ್ನಡ ಭಾಷೆಗೆ ಹೆಚ್ಚಿನ ಪ್ರಧಾನ್ಯತೆ ನೀಡಿ. ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಕನ್ನಡ ನಾಡು, ನುಡಿಯ ಮಹತ್ವವನ್ನು ತಿಳಿಸಿಕೊಡಿ. ಬೇರೆ ರಾಜ್ಯದ ಸ್ನೇಹಿತರು ನಿಮ್ಮ ಜೊತೆಗೆ ಇದ್ದರೆ ಅವರೊಂದಿಗೆ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸದೆ, ಕನ್ನಡದಲ್ಲಿ ಮಾತನಾಡಿ, ಅವರಿಗೂ ಕನ್ನಡ ಭಾಷೆಯನ್ನು ಕಲಿಸಿಕೊಡಿ. ಮೊದಲನೆಯದಾಗಿ ಕನ್ನಡ ನಾಡು ನುಡಿಯನ್ನು ರಕ್ಷಣೆ ಮಾಡುವ ಸಂಕಲ್ಪವನ್ನು ಈ ದಿನ ಕೈಗೊಳ್ಳಿ.
ಯೋಗ ಮತ್ತು ಧ್ಯಾನ ಮಾಡಿ:
ಎಲ್ಲರೂ ಹೊಸ ವರ್ಷ ಆರಂಭವಾಗುವಾಗ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವ ಹಲವು ಸಂಕಲ್ಪವನ್ನು ಕೈಗೊಳ್ಳುತ್ತಾರೆ. ಅದೇ ರೀತಿ ನೀವು ಈ ರಾಜ್ಯೋತ್ಸವದ ದಿನದಂದು ನಿಮ್ಮ ಜೀವನವನ್ನು ಬದಲಿಸುವ ಆರೋಗ್ಯಕರ ಸಂಕಲ್ಪವನ್ನು ಕೈಗೊಳ್ಳಬಹುದು. ನೀವು ಇನ್ನು ಮುಂದೆ ಪ್ರತಿನಿತ್ಯ ಧ್ಯಾನ, ಯೋಗ ಮತ್ತು ನಿಯಮಿತ ದೈಹಿಕ ಚಟುವಟಿಕೆಗಳನ್ನು ಮಾಡುವ ಸಂಕಲ್ಪವನ್ನು ಮಾಡಬಹುದು. ಯೋಗ, ವ್ಯಾಯಾಮ ಮತ್ತು ಧ್ಯಾನ ನಿಮ್ಮನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯ ಸದೃಢರನ್ನಾಗಿರಿಸುತ್ತದೆ. ಈ ಅಭ್ಯಾಸವನ್ನು ನಿಮ್ಮ ಜೀವನಶೈಲಿಯಲ್ಲಿ ಸೇರಿಸಿಕೊಳ್ಳುವ ಮೂಲಕ ನಿಮ್ಮ ಜೀವನವನ್ನು ಮತ್ತಷ್ಟು ಉತ್ತಮಗೊಳಿಸಬಹುದು.
ಗುರಿಗಳನ್ನು ಸಾಧಿಸಲು ನಿರ್ಧರಿಸಿ:
ಮೊದಲನೆಯದಾದಿ ಇಂದಿನ ಕೆಲಸವನ್ನು ಇಂದೇ ಮಾಡಿ. ಸೋಮಾರಿತನದಿಂದ ಆ ಕೆಲಸವನ್ನು ನಾಳೆಗೆ ಮುಂದೂಡಿದರೆ, ಕೆಲಸದ ಭಾರವು ಮತ್ತಷ್ಟು ಹೆಚ್ಚಾಗುತ್ತದೆ, ನಿಮಗೆ ಗುರಿಯನ್ನು ಸಾಧಿಸಲು ಕಷ್ಟಕರವಾಗಬಹುದು. ನೀವು ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಬಯಸಿದರೆ, ನಿಮ್ಮ ವೈಫಲ್ಯಗಳ ಬಗ್ಗೆ ದುಃಖ ಪಡದೆ, ಅದು ನನ್ನ ಯಶಸ್ಸಿನ ಮೊದಲ ಮೆಟ್ಟಿಲು ಎಂದು ಮುನ್ನಡೆಯಿರಿ. ಹಾಗೂ ಗುರಿಯನ್ನು ಸಾಧಿಸುವ ಅಚಲ ನಿರ್ಧಾರವನ್ನು ಕೈಗೊಳ್ಳಿ.
ನಿಮಗೂ ಸ್ವಲ್ಪ ಸಮಯ ಮೀಸಲಿಡಿ:
ಇಂದಿನ ಬಿಡುವಿಲ್ಲದ ಜೀವನಶೈಲಿಯ ಕಾರಣ ನಾವು ಕೆಲಸದಲ್ಲಿಯೇ ನಿರತರಾಗಿರುತ್ತೇವೆ. ಇದರಿಂದ ಒತ್ತಡವು ಇನ್ನಷ್ಟು ಹೆಚ್ಚುತ್ತದೆ, ಜೀವನದಲ್ಲಿನ ಉತ್ಸಾಹವು ಕುಂದಿಹೋಗುತ್ತದೆ. ಅದಕ್ಕಾಗಿ ಪ್ರತಿದಿನ ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟು ನಿಮ್ಮ ನೆಚ್ಚಿನ ಚಟುವಟಿಕೆಗಳನ್ನು ಮಾಡಿ, ಸ್ನೇಹಿತರೊಂದಿಗೆ ಪ್ರವಾಸ ಹೋಗಿ, ಇದು ನಿಮ್ಮ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಮತ್ತು ಈ ಅಭ್ಯಾಸದಿಂದ ನಿಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ.
ಇದನ್ನೂ ಓದಿ: ಜಾನಪದ ಕಲಾವಿದೆ ಚೌಡಮ್ಮಗೆ ಒಲಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಸಹಾಯದ ಮನೋಭಾವವನ್ನು ಬೆಳೆಸಿಕೊಳ್ಳಿ:
ಅಸಹಾಯಕರಿಗೆ, ಹಿರಿಯರಿಗೆ ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡುವ ಗುಣವನ್ನು ಬೆಳೆಸಿಕೊಳ್ಳಿ. ಯಾರಾದರೂ ನಿಮ್ಮ ಬಳಿ ಸಹಾಯವನ್ನು ಕೇಳಿಕೊಂಡು ಬಂದರೆ, ಅವರೊಂದಿಗೆ ದರ್ಪದಿಂದ ಮಾತನಾಡದೆ, ಅವರನ್ನು ಹೀಯಾಳಿಸದೆ ಸಹಾನುಭೂತಿಯಿಂದ ನಡೆದುಕೊಳ್ಳಿ. ಮತ್ತು ನಿಮ್ಮ ಕೈಲಾದಷ್ಟು ಇತರರಿಗೆ ಸಹಾಯವನ್ನು ಮಾಡಿ. ಜೀವನದಲ್ಲಿ ಈ ಒಂದು ಉತ್ತಮ ಗುಣವನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ಜೀವನವು ಧನಾತ್ಮಕ ರೀತಿಯಲ್ಲಿ ಬದಲಾಗುತ್ತದೆ.
ಮಾದಕ ವಸ್ತುಗಳಿಂದ ದೂರವಿರುವ ಸಂಕಲ್ಪವನ್ನು ತೆಗೆದುಕೊಳ್ಳಿ:
ಮಧ್ಯಪಾನ, ಸಿಗರೇಟು, ತಂಬಾಕು ಸೇವನೆಯಂತಹ ಚಟಗಳಿದ್ದರೆ ಅದು ಆರೋಗ್ಯಕ್ಕೆ ತುಂಬಾ ಕೆಟ್ಟದು. ಆದ್ದರಿಂದ ಏನೇ ಆಗಾಲಿ, ಈ ಬಾರಿಯ ರಾಜ್ಯೋತ್ಸವದ ದಿನ ಈ ಎಲ್ಲಾ ಕೆಟ್ಟ ಚಟಗಳಿಂದ ದೂರವಿರುತ್ತೇನೆ ಎಂಬ ದೃಢ ನಿರ್ಧಾರವನ್ನು ತೆಗೆದುಕೊಳ್ಳಿ. ಈ ಒಂದು ಸಂಕಲ್ಪ ನಿಮ್ಮ ಜೀವನವನ್ನು ಸಕಾರಾತ್ಮಕ ರೀತಿಯಲ್ಲಿ ಬದಲಾಯಿಸುವುದಂತು ಖಂಡಿತ.
ಪರಿಸರದ ಬಗ್ಗೆ ಕಾಳಜಿ ವಹಿಸಿ:
ಇಂದು ನಗರೀಕರಣ, ಕೈಗಾರಿಕರಣದ ಕಾರಣದಿಂದಾಗಿ ಎಲ್ಲೆಡೆಯೂ ಮಾಲಿನ್ಯ ಆವರಿಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ನಾಡನ್ನು ಮಾಲಿನ್ಯ ಮುಕ್ತವಾಗಿರಿಸಲು ಬಯಸಿದರೆ ಸ್ವಂತ ವಾಹನಗಳನ್ನು ಬಳಸುವ ಬದಲು ಓಡಾಟಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸಿ. ಮತ್ತು ನಮ್ಮ ನಾಡಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು, ಅಲ್ಲಲ್ಲಿ ಕಸ ಎಸೆಯುವ, ಉಗುಳುವ ಅಭ್ಯಾಸವನ್ನು ಬಿಟ್ಟುಬಿಡಿ. ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ. ಇನ್ನೂ ರಾಜ್ಯೋತ್ಸವದ ದಿನ ನೀವು ಗಿಡಗಳನ್ನು ನೆಡುವ ಮೂಲಕ ಪರಿಸರದ ಉಳಿವಿಗೆ ಸಣ್ಣ ಕೊಡುಗೆಯನ್ನು ನೀಡಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: