ಮದುವೆ ಎಂಬುವುದು ಒಬ್ಬ ಗಂಡು ಮತ್ತು ಹೆಣ್ಣಿನ ನಡುವೆ ಬೆಸೆಯುವ ಸುಂದರ ಬಂಧವಾಗಿದೆ. ವಿವಾಹದ ಬಳಿಕ ಗಂಡು ಮತ್ತು ಹೆಣ್ಣು ಇವರಿಬ್ಬರ ಜೀವನದಲ್ಲೂ ಹಲವಾರು ಬದಲಾವಣೆಗಳಾಗುತ್ತವೆ. ಪರುಷರಿಗೆ ಹೋಲಿಸಿದರೆ ಮದುವೆಯಾದ ಬಳಿಕ ಮಹಿಳೆಯರ ಜೀವನದಲ್ಲಿ ಬಹಳಷ್ಟು ಬದಲಾವಣೆಯಾಗುತ್ತದೆ. ಅವಳು ತನ್ನ ಮನೆಯನ್ನು ಬಿಟ್ಟು ಹೊಸ ಮನೆಗೆ ಕಾಲಿಡುತ್ತಾಳೆ. ತನಗಿಷ್ಟವಿಲ್ಲದಿದ್ದರೂ, ತನ್ನ ಗಂಡನ ಮನೆಯವರಿಗಾಗಿ ತನ್ನತನವನ್ನು ಬದಲಾಯಿಸಬೇಕಾಗುತ್ತದೆ, ಅಲ್ಲದೆ ಆಕೆಯ ಮನಸ್ಥಿತಿಯಲ್ಲಿ ಬದಲಾವಣೆಗಳಾಗುತ್ತದೆ. ಹೀಗೆ ಹೊಸ ವಾತವರಣಕ್ಕೆ ಹೊಂದಿಕೊಳ್ಳಲು ಆಕೆಗೆ ತುಂಬಾ ಕಷ್ಟಕರವಾಗುತ್ತದೆ. ಇದು ಮಾತ್ರವಲ್ಲದೆ ಮದುವೆಯಾದ ಬಳಿಕ ಕೆಲವೊಂದು ವಿಚಾರಗಳು ಮಹಿಳೆಯರನ್ನು ಹೆಚ್ಚು ಕೋಪಗೊಳ್ಳುವಂತೆ ಹಾಗೂ ಅವರಿಗೆ ಕಿರಿಕಿರಿಯನ್ನು ಉಂಟುಮಾಡುತ್ತವೆ. ಹಾಗಿದ್ದರೆ ಮದುವೆಯ ಬಳಿಕ ಹೆಣ್ಣು ಮಕ್ಕಳು ಹೆಚ್ಚಾಗಿ ಕೋಪಗೊಳ್ಳಲು ಕಾರಣವೇನು ಎಂಬುದನ್ನು ನೋಡೋಣ.
ಗಂಡನ ಮನೆಗೆ ಹೋಲಿಸಿದರೆ ತವರು ಮನೆಯಲ್ಲಿ ಪ್ರತಿಯೊಬ್ಬ ಹೆಣ್ಣು ಕೂಡ ಹೆಚ್ಚು ಸ್ವತಂತ್ರ್ಯವಾಗಿರುತ್ತಾಳೆ ಮತ್ತು ಸಂತೋಷವಾಗಿರುತ್ತಾಳೆ. ಎಲ್ಲದರ ಬಗ್ಗೆಯೂ ತನ್ನ ಮನೆಯವರ ಜೊತೆಗೆ ಮುಕ್ತವಾಗಿ ಮಾತನಾಡುತ್ತಾಳೆ. ಆದರೆ ಅತ್ತೆ ಮನೆಯ ವಾತಾವರಣ ತಾಯಿ ಮನೆಯಂತೆ ಇರುವುದಿಲ್ಲ. ಮುಕ್ತವಾಗಿ ಮಾತನಾಡಬೇಕೆಂದರೂ ಅತ್ತೆ ಮನೆಯವರು ಏನೆಂದುಕೊಳ್ಳುತ್ತಾರೆ ಎಂಬ ಕಾರಣದಿಂದ ತನ್ನೆಲ್ಲಾ ಭಾವನೆ, ಆಸೆ ಆಕಾಂಕ್ಷೆಗಳನ್ನು ಮನಸ್ಸಿನಲ್ಲಿಯೇ ಮುಚ್ಚಿಡುತ್ತಾಳೆ. ಇದರಿಂದ ಹೆಚ್ಚಿನ ಮಹಿಳೆಯರಿಗೆ ಕಿರಿಕಿರಿ ಭಾವನೆ ಉಂಟಾಗುತ್ತದೆ. ಸಹಜವಾಗಿಯೇ ಇದು ಅವರನ್ನು ಕೋಪಗೊಳ್ಳುವಂತೆ ಮಾಡುತ್ತದೆ.
ಅಮ್ಮನ ಮನೆಯಲ್ಲಿ ತೋರಿಸುವಷ್ಟೇ ಪ್ರೀತಿ ಕಾಳಜಿ ತೋರಿಸುವ ಅತ್ತೆ ಮನೆಗೆ ಹೋಗುವ ಅದೃಷ್ಟ ಎಲ್ಲರಿಗೂ ಲಭಿಸುವುದಿಲ್ಲ. ಹೆಚ್ಚಿನವರಿಗೆ ಅತ್ತೆ ಮನೆಯಲ್ಲಿ ಪ್ರೀತಿ ಮತ್ತು ಕಾಳಜಿ ಅಷ್ಟಾಗಿ ಸಿಗುವುದಿಲ್ಲ. ಗಂಡನ ಮನೆಯಲ್ಲಿ ಪ್ರೀತಿ ಗೌರವ ಸಿಗದಿದ್ದಾಗ ಹೆಣ್ಣು ತುಂಬಾ ಅಸಹಾಯಕಳಾಗುತ್ತಾಳೆ. ಅದರಲ್ಲೂ ಅತ್ತೆಯ ನಡವಳಿಕೆ ಮತ್ತು ಕೊಂಕು ಮಾತುಗಳು ಮದುವೆಯಾದ ಬಳಿಕ ಹೆಣ್ಣು ಮಕ್ಕಳಿಗೆ ಹೆಚ್ಚು ಸಿಟ್ಟು ತರಿಸುತ್ತದೆ.
ಇದನ್ನೂ ಓದಿ: ಮದ್ಯಪಾನ ಮಾಡುವಾಗ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ, ಯಾಕೆ ಗೊತ್ತಾ?
ಕೆಲವು ಮಹಿಳೆಯರಿಗೆ ಮದುವೆಯಾದ ಬಳಿಕ ಉದ್ಯೋಗಕ್ಕೆ ಹೋಗುವ ಸ್ವಾತಂತ್ರ್ಯ ಇರುವುದಿಲ್ಲ. ಆಕೆ ತನ್ನ ಉದ್ಯೋಗವನ್ನು ತೊರೆಯಬೇಕಾಗುತ್ತದೆ. ಮತ್ತು ಆಕೆ ತನ್ನ ಆಸೆ ಮತ್ತು ಅಗತ್ಯಗಳನ್ನು ಪೂರೈಸಲು ತನ್ನ ಪತಿ ಅಥವಾ ಅವನ ಕುಟುಂಬದ ಅವಲಂಬಿತವಾಗಬೇಕಾಗುತ್ತದೆ.ಈ ಸಂದರ್ಭದಲ್ಲಿ ಆಕೆ ಕೇಳಿದಾಗಲೆಲ್ಲಾ ಗಂಡ ಹಣ ಕೊಡುತ್ತಾನೆ ಎಂಬ ಯಾವ ಭರವಸೆಯೂ ಇರುವುದಿಲ್ಲ. ಕೊನೆಗೆ ಆಕೆಯ ಆರ್ಥಿಕ ಸ್ವಾತಂತ್ರ್ಯದ ಅಂತ್ಯದಿಂದಾಗಿ ಸಹಜವಾಗಿ ಆಕೆ ಕೋಪಗೊಳ್ಳಲು ಪ್ರಾರಂಭಿಸುತ್ತಾಳೆ.
ಮದುವೆಯ ಬಳಿಕ ಪ್ರತಿಯೊಬ್ಬ ಹೆಣ್ಣು ಕೂಡಾ ಹೆಚ್ಚಾಗಿ ಗಂಡನ ಮೇಲೆ ಅವಲಂಬಿತಳಾಗಿರುತ್ತಾಳೆ. ತನ್ನ ಇಷ್ಟಕಷ್ಟಗಳನ್ನು ಪತಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಾಳೆ. ಆದರೆ ತನ್ನ ಭಾವನೆಗಳಿಗೆ ಗಂಡನ ಬೆಂಬಲ ಸಿಗದಿದ್ದಾಗ, ಇದು ಸಹಜವಾಗಿಯೇ ಆಕೆಯಲ್ಲಿ ಕೋಪ ಮತ್ತು ಹತಾಶೆಯ ಭಾವನೆ ಮೂಡಲು ಕಾರಣವಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: