Heath News: ವಿಟಮಿನ್ ಡಿ ನಿರ್ದಿಷ್ಟ ಪ್ರಮಾಣದಲ್ಲಿದ್ದರಷ್ಟೇ ಆರೋಗ್ಯ, ಹೆಚ್ಚು ಕಡಿಮೆಯಾದರೆ ಅನಾರೋಗ್ಯ
Vitamin D Side Effects: ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನಾವು ಪಡೆದರೆ ಮಾತ್ರ ನಾವು ಆರೋಗ್ಯವಾಗಿರಬಹುದು. ಅದರ ಹೊರತಾಗಿ ದೇಹಕ್ಕೆ ಅಗತ್ಯವಿರುವಷ್ಟು ಪೋಷಕಾಂಶಗಳನ್ನು ತೆಗೆದುಕೊಳ್ಳದಿದ್ದರೆ ಅಥವಾ ಅಧಿಕವಾಗಿ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.
ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆದರೆ ಮಾತ್ರ ನಾವು ಆರೋಗ್ಯವಾಗಿರಬಹುದು. ಅದರ ಹೊರತಾಗಿ ಅತಿಯಾದರೆ ಅಮೃತವೂ ವಿಷ ಎಂಬಂತೆ, ಯಾವುದೇ ಪೋಷಕಾಂಶವನ್ನು ದೇಹವು ಅಗತ್ಯ ಪ್ರಮಾಣಕ್ಕಿಂತ ಕಡಿಮೆ ಅಥವಾ ಹೆಚ್ಚು ಸೇವನೆ ಮಾಡಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸೂರ್ಯನ ಬೆಳಕು ಮತ್ತು ಆಹಾರದಿಂದ ಸಿಗುವ ವಿಟಮಿನ್ ಡಿ (Vitamin D) ನಮ್ಮ ಹಲ್ಲು ಮತ್ತು ಮೂಳೆಗಳನ್ನು ಸದೃಢಗೊಳಿಸುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕೂಡ ಬಲಪಡಿಸುತ್ತದೆ ಮತ್ತು ಸೀಸನ್ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅಡ್ಡ ಪರಿಣಾಮಗಳು ದೂರವಾಗುತ್ತವೆ ಎನ್ನುತ್ತಾರೆ ತಜ್ಞರು. ಹಾಗಿದ್ದರೆ ಮಿಟಮಿನ್ ಡಿ ಹೆಚ್ಚಳದಿಂದ ಆಗುವ ಆರೋಗ್ಯ ಸಮಸ್ಯೆಗಳೇನು? ಮತ್ತು ಕಡಿಮೆಯಾದರೆ ಆಗುವ ದುಷ್ಪರಿಣಾಮವೇನು? ಇಲ್ಲಿದೆ ನೋಡಿ.
ವಾಕರಿಕೆ, ವಾಂತಿ: ವಿಟಮಿನ್ ಡಿ ಅತಿಯಾದ ಸೇವನೆಯು ವಾಂತಿ ಮತ್ತು ವಾಕರಿಕೆಗೆ ಕಾರಣವಾಗಬಹುದು. ಈ ರೋಗಲಕ್ಷಣವು ಊಟದ ನಂತರ ತಕ್ಷಣವೇ ಕಾಣಿಸಿಕೊಂಡರೆ, ನಿಮ್ಮ ದೇಹದಲ್ಲಿ ವಿಟಮಿನ್ ಡಿ ಹೆಚ್ಚಿದೆ ಎಂದು ನೀವು ತಿಳಿಯಬೇಕು.
ಕಡಿಮೆ ಹಸಿವು: ದೇಹದಲ್ಲಿ ವಿಟಮಿನ್ ಡಿ ಹೆಚ್ಚಿರುವುದರಿಂದ ಹಸಿವು ಕಡಿಮೆಯಾಗುತ್ತದೆ. ನಾವು ಯಾವುದೇ ಆಹಾರ ಸೇವನೆ ಮಾಡದಿದ್ದಲ್ಲಿ ಅದು ಇನ್ನೊಂದು ರೀತಿಯ ಆರೋಗ್ಯ ಸಮಸ್ಯೆಗೆ ಎಡೆ ಮಾಡಿಕೊಡಬಹುದು.
ಕ್ಯಾಲ್ಸಿಯಂ ಶೇಖರಣೆ: ದೇಹದಲ್ಲಿ ವಿಟಮಿನ್ ಡಿ ಹೆಚ್ಚಾದಾಗ ರಕ್ತದಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗುತ್ತದೆ. ಪರಿಣಾಮವಾಗಿ, ಹೈಪರ್ಕಾಲ್ಸೆಮಿಯಾವು ವಾಕರಿಕೆ, ವಾಂತಿ, ಆಲಸ್ಯ ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆಯಂತಹ ರೋಗಲಕ್ಷಣಗಳು ಕಂಡುಬರುತ್ತವೆ.
ಕಿಡ್ನಿ ಸಮಸ್ಯೆಗಳು: ದೇಹದಲ್ಲಿ ಹೆಚ್ಚುವರಿ ವಿಟಮಿನ್ ಡಿ ಉಂಟಾಗುವ ಹೈಪರ್ಕಾಲ್ಸೆಮಿಯಾದಿಂದ ಕಿಡ್ನಿ ಸಮಸ್ಯೆಗಳು ಸಹ ಉಂಟಾಗಬಹುದು. ಇದು ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗುತ್ತದೆ ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದು ಸಂಭವಿಸಿದಲ್ಲಿ, ಮೂತ್ರಪಿಂಡಗಳ ನೆಫ್ರೋಕಾಲ್ಸಿನೋಸಿಸ್ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು.
ವಿಟಮಿನ್ ಡಿ ಸಮಸ್ಯೆ ನಿವಾರಣೆಗೆ ಕಡಿಮೆ ಸೇವಿಸಬೇಕಾದ ಆಹಾರಗಳು
ಅಧಿಕ ವಿಟಮಿನ್ ಡಿ ಸಮಸ್ಯೆಯನ್ನು ತೊಡೆದುಹಾಕಲು ಅಥವಾ ದೇಹದಲ್ಲಿ ಅದರ ಪ್ರಮಾಣವನ್ನು ಕಡಿಮೆ ಮಾಡಲು, ಅಣಬೆಗಳು, ಕಾಡ್ ಲಿವರ್ ಎಣ್ಣೆ, ಸಾಲ್ಮನ್ ಮೀನು, ಮೊಟ್ಟೆಯ ಹಳದಿ ಲೋಳೆ, ಸೋಯಾ ಹಾಲು ಮುಂತಾದ ಆಹಾರವನ್ನು ಕಡಿಮೆ ಸೇವಿಸಿ.
ವಿಟಮಿನ್ ಡಿ ಕೊರತೆಯ ಪರಿಣಾಮಗಳು
ಸೋಂಕು: ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ವಿಟಮಿನ್ ಡಿ ನಮ್ಮ ದೇಹದಲ್ಲಿ ಕಡಿಮೆಯಾದರೆ ಅನಾರೋಗ್ಯ ಉಂಟುಮಾಡುವ ಸೋಂಕುಗಳು ವಕ್ಕರಿಸುತ್ತವೆ.
ಆಯಾಸ ಮತ್ತು ಸುಸ್ತು: ಅನೇಕರು ಆಯಾಸ ಮತ್ತು ಸುಸ್ತು ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಆದರೆ ಇದಕ್ಕೆ ಕಾರಣವಾಗುವ ಅಂಶಗಳಲ್ಲಿ ವಿಟಮಿನ್ ಡಿ ಕೊರತೆಯೂ ಒಂದಾಗಿರಬಹುದು.
ಮೂಳೆ ಮತ್ತು ಬೆನ್ನು ನೋವು: ಮೂಳೆಗಳ ಆರೋಗ್ಯ ಕಾಪಾಡುವ ವಿಟಮಿನ್ ಡಿ ನಿರ್ದಿಷ್ಟ ಪ್ರಮಾಣಕ್ಕಿಂತ ಕಡಿಮೆಯಾದರೆ ಮೂಳೆ ಮತ್ತು ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.
ಖಿನ್ನತೆ: ವಿಟಮಿನ್ ಡಿ ಕೊರತೆಯಿಂ ಖಿನ್ನತೆ ಉಂಟಾಗಬಹುದು. ವಿಶೇಷವಾಗಿ ಹಿರಿಯರು ಈ ಸಮಸ್ಯೆಗೆ ಬಹಳ ಬೇಗ ತುತ್ತಾಗುತ್ತಾರೆ.
ಗಾಯಗಳು ವಾಸಿಯಾಗದಿರುವುದು: ದೇಹದಲ್ಲಿ ಆದ ಗಾಯಗಳು ಬೇಗ ವಾಸಿಯಾಗದೇ ಇರುವುದು ಅಥವಾ ನಿಧಾನವಾಗಿ ವಾಸಿಯಾಗಲು ವಿಟಮಿನ್ ಡಿ ಕೊರತೆಯೂ ಕಾರಣವಾಗಿದೆ. ವಿಟಮಿನ್ ಡಿ ಸರಿಯಾದ ಪ್ರಮಾಣದಲ್ಲಿ ಇದ್ದರೆ ಹೊಸ ಚರ್ಮದ ಉತ್ಪತ್ತಿಗೆ ಕಾರಣವಾಗುತ್ತದೆ.
ಆರೋಗ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ