ಹೆಚ್ಚಿನ ಡೆನಿಮ್ ಜೀನ್ಸ್‌ಗಳಲ್ಲಿ ಹಳದಿ ದಾರದ ಸ್ಟಿಚಿಂಗ್ ಏಕೆ ಇರುತ್ತವೆ ಗೊತ್ತಾ?
ಸಾಮಾನ್ಯವಾಗಿ ಎಲ್ಲಾ ಬಟ್ಟೆಗಳನ್ನು ಆಯಾ ಬಣ್ಣದ ನೂಲುಗಳಿಂದಲೇ ಹೊಲಿಗೆ ಹಾಕಲಾಗುತ್ತದೆ. ಆದ್ರೆ ನೀವು ಇಷ್ಟಪಟ್ಟು ಧರಿಸುವಂತಹ ಹೆಚ್ಚಿನ ಜೀನ್ಸ್ ಪ್ಯಾಂಟ್‌ಗಳಲ್ಲಿ ಹಳದಿ ಬಣ್ಣದ ನೂಲಿನ ಹೊಲಿಗೆಗಳಿರುತ್ತವೆ. ಈ ಸಂಗತಿಯನ್ನು ನೀವು ಸಹ ಗಮನಿಸಿರುತ್ತೀರಿ ಅಲ್ವಾ. ಅಷ್ಟಕ್ಕೂ ಹೆಚ್ಚಿನ ಡೆನಿಮ್ ಜೀನ್ಸ್ ಪ್ಯಾಂಟ್‌ಗಳಲ್ಲಿ ಹಳದಿ ಬಣ್ಣದ ಸ್ಟಿಚಿಂಗ್ ಏಕಿರುತ್ತವೆ, ಇದರ ಹಿಂದಿರುವ ಕಾರಣವಾದರೂ ಏನು ಎಂಬುದು ನಿಮ್ಗೊತ್ತಾ, ಈ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಜೀನ್ಸ್ ಪ್ಯಾಂಟ್‌ಗಳೆಂದರೆ (denim jeans) ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಈಗಂತೂ ಜೀನ್ಸ್ ಪ್ಯಾಂಟ್‌ಗಳನ್ನು ಧರಿಸುವುದು ಫ್ಯಾಶನ್ ಆಗಿಬಿಟ್ಟಿದೆ. ಅದರಲ್ಲೂ ಡೆನಿಮ್ ಜೀನ್ಸ್ ಯುವ ಜನರ ಹಾಟ್ ಫೇವರೆಟ್ ಅಂತಾನೇ ಹೇಳಬಹುದು. ಹೌದು 19 ನೇ ಶತಮಾನದ ಆರಂಭದಲ್ಲಿ ಅಮೆರಿಕದಲ್ಲಿ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವ ಕೂಲಿಕಾರರು ಮತ್ತು ಕಾರ್ಮಿಕರಿಗಾಗಿ ತಯಾರಿಸಲಾದ ಈ ಜೀನ್ಸ್ ಕಾಲಾನಂತರದಲ್ಲಿ ಒಂದು ಫ್ಯಾಶನ್ ಆಗಿ ಪರಿವರ್ತನೆಗೊಂಡಿತು. ನೀವು ಕೂಡ ಡೆನಿಮ್ ಜೀನ್ಸ್‌ಗಳನ್ನು ಧರಿಸುತ್ತೀರಿ ಅಲ್ವಾ. ಆದ್ರೆ ಯಾವತ್ತಾದ್ರೂ ಜೀನ್ಸ್ ಪ್ಯಾಂಟ್‌ಗಳಲ್ಲಿರುವ ಹಳದಿ ಬಣ್ಣದ ನೂಲಿನ ಹೊಲಿಗೆಯನ್ನು ಗಮನಿಸಿದ್ದೀರಾ? ಅಷ್ಟಕ್ಕೂ ಆಯಾ ಪ್ಯಾಂಟ್ ಬಣ್ಣದ ಹೊಲಿಗೆಯ ಬದಲಿಗೆ ಹೆಚ್ಚಿನ ನೀಲಿ ಬಣ್ಣದ ಡೆನಿಮ್ ಪ್ಯಾಂಟ್‌ಗಳಲ್ಲಿ ಈ ಹಳದಿ ಬಣ್ಣದ ದಾರದ ಸ್ಟಿಚಿಂಗ್ ಏಕಿರುತ್ತವೆ ಎಂಬುದರ ಇಂಟರೆಸ್ಟಿಂಗ್ ಸಂಗತಿಯನ್ನು ತಿಳಿಯಿರಿ.
ಜೀನ್ಸ್ ಪ್ಯಾಂಟ್‌ಗಳಲ್ಲಿ ಹಳದಿ ಬಣ್ಣದ ದಾರದ ಹೊಲಿಗೆ ಏಕೆ ಇರುತ್ತದೆ?
ಹಳದಿ ದಾರ ಹೊಲಿಗೆಯ ಪ್ರವೃತ್ತಿ 1800 ರ ದಶಕದ ಉತ್ತರಾರ್ಧದಲ್ಲಿ ಪ್ರಾರಂಭವಾಯಿತು, 1873 ರಲ್ಲಿ ರಿವೆಟೆಡ್ ಡೆನಿಮ್ ಪ್ಯಾಂಟ್‌ಗಳ ಪೇಟೆಂಟ್ ಪಡೆದ ಲೆವಿ ಸ್ಟ್ರಾಸ್ ಮತ್ತು ಜಾಕೋಬ್ ಡೇವಿಸ್ ಅವರು ಆ ಸಮಯದಲ್ಲಿ, ಹಳದಿ-ಕಿತ್ತಳೆ ಬಣ್ಣದ ದಾರವನ್ನು ಪ್ಯಾಂಟ್‌ನ ನೋಟಕ್ಕಾಗಿ ಮಾತ್ರವಲ್ಲದೆ ಅದರ ಪ್ರಾಯೋಗಿಕತೆಗಾಗಿ ಆಯ್ಕೆ ಮಾಡಿದರು. ಈ ಹಳದಿ ದಾರವು ಪ್ಯಾಂಟ್‌ನ ಪಾಕೆಟ್‌ಗಳನ್ನು ಬಲಪಡಿಸಲು ಹಾಕಿರುವಂತ ರಿವೆಟ್‌ಗಳಿಗೆ (ಲೋಹದ ಬಟನ್‌ಗಳು) ಹೊಂದಿಕೆಯಾಗುತ್ತವೆ ಮತ್ತು ಆ ಹಳದಿ ಹೊಲಿಗೆ ಜೀನ್ಸ್ ಅನ್ನು ಬಲಪಡಿಸುತ್ತದೆ, ವಿಶಿಷ್ಟ ಲುಕ್ ನೀಡುತ್ತದೆ ಎಂಬ ಕಾರಣಕ್ಕೆ ಜೀನ್ಸ್ ಪ್ಯಾಂಟ್‌ಗಳ ಹೊಲಿಗೆಗೆ ಹಳದಿ ಬಣ್ಣದ ದಾರಗಳನ್ನು ಬಳಸಲು ನಿರ್ಧರಿಸಿದರು.
ನೀಲಿ ಬಣ್ಣದ ಪ್ಯಾಂಟ್‌ಗಳಿಗೆ ಈ ಹಳದಿ ಬಣ್ಣವು ಅಚ್ಚುಕಟ್ಟಾಗಿ ಕಾಣುವುದಲ್ಲದೆ, ಹೊಲಿಗೆಗಳನ್ನು ಹೆಚ್ಚು ಗೋಚರಿಸುವಂತೆ ಮಾಡಿತು, ಈ ಅಂಶಗಳು ಟೈಲರ್‌ಗಳಿಗೆ ಪ್ಯಾಂಟ್ ಹೊಲಿಯಲು ಸುಲಭ ಮಾಡಿತು. ಆರಂಭದಲ್ಲಿ ಕೇವಲ ತಾಂತ್ರಿಕ ಅವಶ್ಯಕತೆಗಾಗಿ ಆರಂಭವಾದ ಹಳದಿ ದಾರ ಫ್ಯಾಶನ್ ಆಗಿ ಪರಿವರ್ತನೆಗೊಂಡಿತು. ಹೌದು ಕಾಲಾನಂತರದಲ್ಲಿ, ಜೀನ್ಸ್ ಕೆಲಸದ ಉಡುಪುಗಳಿಂದ ಜಾಗತಿಕ ಫ್ಯಾಷನ್ ಆಗಿ ಪರಿವರ್ತನೆಗೊಂಡಂತೆ, ಈ ಹಳದಿ ಬಣ್ಣದ ನೂಲಿನ ಹೊಲಿಗೆಯು ಸಿಗ್ನೇಚರ್ ಸ್ಟೈಲ್ ಆಯಿತು. ಇಂದಿಗೂ ಸಹ, ಪ್ರಪಂಚದಾದ್ಯಂತದ ಫ್ಯಾಷನ್ ವಿನ್ಯಾಸಕರು ಈ ಚಿನ್ನದ ಬಣ್ಣದ ಅಥವಾ ಹಳದಿ ಬಣ್ಣದ ದಾರದ ಸಂಪ್ರದಾಯವನ್ನು ಜೀವಂತವಾಗಿಟ್ಟಿದ್ದಾರೆ. ಈ ದಾರ ಡೆನಿಮ್ ಪ್ಯಾಂಟ್‌ಗಳಿಗೆ ಆಳ ಮತ್ತು ವಿಂಟೇಜ್ ಲುಕ್ ನೀಡುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ಹರಪ್ಪಾ ನಾಗರಿಕತೆಯ ಅದ್ಭುತ ವ್ಯಾಪಾರ, ಮೂಲಸೌಕರ್ಯ ವ್ಯವಸ್ಥೆ; ಸಂಶೋಧನೆಯಲ್ಲಿ 2000 ವರ್ಷಗಳ ಹಿಂದಿನ ಕ್ಯಾರವಾನ್ಸೆರೈ ಪತ್ತೆ
ನೀಲಿ ಪ್ಯಾಂಟ್ ಮತ್ತು ಹಳದಿ ದಾರದ ವಿಶಿಷ್ಟ ಸಂಯೋಜನೆ:
ನೀಲಿ ಡೆನಿಮ್ ಮತ್ತು ಹಳದಿ ನೂಲಿನ ಹೊಲಿಗೆಯ ನಡುವೆ ಒಂದು ಕಾವ್ಯಾತ್ಮಕ ರಸಾಯನಶಾಸ್ತ್ರವಿದೆ. ನೀಲಿ ಬಣ್ಣವು ನೆಮ್ಮದಿ, ತಂಪು ಮತ್ತು ಶಾಂತತೆಯನ್ನು ಪ್ರತಿನಿಧಿಸಿದರೆ, ಹಳದಿ ಉಷ್ಣತೆ ಮತ್ತು ಶಕ್ತಿಯನ್ನು ಹೊರಸೂಸುತ್ತದೆ. ಒಟ್ಟಾಗಿ ಇವೆರಡೂ ಬಣ್ಣ ಪರಿಪೂರ್ಣ ಸಮತೋಲನವನ್ನು ಸೃಷ್ಟಿಸುತ್ತದೆ. ಕಾವ್ಯಾತ್ಮಕವಾಗಿ ಹೇಳುವುದಾದರೆ ಜೀನ್ಸ್ ಒಂದು ಹಾಡಾದರೆ, ಇಂಡಿಗೊ ನೀಲಿ ಲಯವಾಗಿರುತ್ತದೆ ಮತ್ತು ಹಳದಿ ದಾರದ ಹೊಲಿಗೆ, ಅದಕ್ಕೆ ಜೀವ ನೀಡುವ ಮಧುರವಾಗಿರುತ್ತದೆ.
ಹಳದಿ ಹೊಲಿಗೆ ಡೆನಿಮ್‌ನ ಪಾಕೆಟ್‌ಗಳು,ಯೋಕ್, ಬೆಲ್ಟ್ ಲೂಪ್‌ಗಳು ಸೇರಿದಂತೆ ಒಟ್ಟಾರೆ ರಚನೆ, ವಿನ್ಯಾಸವನ್ನು ಎತ್ತಿ ತೋರಿಸುತ್ತದೆ. ಕಾಲ ಕಳೆದಂತೆ ಜೀನ್ಸ್‌ನ ಬಣ್ಣ ಮಾಸಿದರೂ ಸಹ ಈ ಹಳದಿ ದಾರ ತನ್ನ ಹೊಳಪನ್ನು ಹಾಗೆಯೇ ಹಿಡಿದಿಟ್ಟುಕೊಳ್ಳುತ್ತದೆ. ಇದು ಕೂಡ ಜೀನ್ಸ್‌ಗೆ ಒಂದು ಸುಂದರ ಲುಕ್ ನೀಡುತ್ತದೆ. ಇಂದು ವಿನ್ಯಾಸಕರು ಆಧುನಿಕ ನೋಟಕ್ಕಾಗಿ ಗುಲಾಬಿ, ಬಿಳಿ ಅಥವಾ ಆಯಾ ಪ್ಯಾಂಟ್‌ಗಳ ಬಣ್ಣದ ನೂಲಿನ ಹೊಲಿಗೆಯೊಂದಿಗೆ ಪ್ರಯೋಗಿಸಬಹುದು, ಆದರೆ ಇವು ಯಾವುದು ಕ್ಲಾಸಿಕ್ ಹಳದಿ ಬಣ್ಣದ ನೂಲಿನ ಹೊಲಿಗೆಗೆ ಸಾಟಿಯಿಲ್ಲ ಎಂಬುದು ಫ್ಯಾಶನ್ ಪ್ರಿಯರ ಅಭಿಪ್ರಾಯವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




