ಈರುಳ್ಳಿ ರಸ ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ? ಇದರ ಕುರಿತ ಸತ್ಯ ಮತ್ತು ಮಿಥ್ಯಗಳೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 01, 2023 | 6:39 PM

ಈರುಳ್ಳಿ ರಸವನ್ನು ಕೂದಲಿಗೆ ಅನ್ವಯಿಸುವ ಮೂಲಕ ಕೂದಲು ಬೆಳವಣಿಗೆಯನ್ನು ಉತ್ತೇಜಿಸಬಹುದು ಎಂದು ಹೇಳಲಾಗುತ್ತದೆ. ಹಾಗೂ ಹಿಂದಿನಿಂದಲೂ ಬಳಸಿಕೊಂಡು ಬಂದಂತಹ ಮನೆಮದ್ದಾಗಿದೆ. ಆದರೆ ಎಲ್ಲರಿಗೂ ಇದು ಒಂದೇ ರೀತಿಯ ಪರಿಹಾರವನ್ನು ನೀಡದಿರಬಹುದು. ತಜ್ಞರು ಇದರ ಕುರಿತು ಏನು ಹೇಳುತ್ತಾರೆ ಎಂಬುದು ಇಲ್ಲಿದೆ.

ಈರುಳ್ಳಿ ರಸ ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ? ಇದರ ಕುರಿತ ಸತ್ಯ ಮತ್ತು ಮಿಥ್ಯಗಳೇನು?
ಸಾಂದರ್ಭಿಕ ಚಿತ್ರ
Follow us on

ಹೊಳೆಯುವ ಮತ್ತು ಬಲವಾದ ಕೂದಲನ್ನು ಪಡೆಯಲು ಈರುಳ್ಳಿ ರಸವನ್ನು ನೆತ್ತಿಯ ಮೇಲೆ ಹಾಕುವುದು ಅನಾದಿ ಕಾಲದಿಂದಲೂ ಜನರು ಅನುಸರಿಕೊಂಡು ಬರುತ್ತಿರುವ ಮನೆಮದ್ದಾಗಿದೆ. ಇದು ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕಾರಣ ಹಾಗೂ ಯಾವುದೇ ಕೆಮಿಕಲ್ ಬಳಸದೆ ನೈಸರ್ಗಿಕವಾಗಿ ಈರುಳ್ಳಿಯ ಹೇರ್ ಮಾಸ್ಕ್​ನ್ನ ತಯಾರಿಸುವ ಕಾರಣ ಹೆಚ್ಚಿನವರು ತಮ್ಮ ಕುದಲ ಸೌಂದರ್ಯಕ್ಕಾಗಿ ಇದನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ ಈ ನೈಸರ್ಗಿಕ ಹೇರ್ ಮಾಸ್ಕ್​​ನಿಂದ ಧನಾತ್ಮಕ ಪ್ರಯೋಜನವನ್ನು ಪಡೆದಿದ್ದೇವೆ ಎಂದು ಅನೇಕರು ಹೇಳುತ್ತಾರೆ. ಈರುಳ್ಳಿಯ ಉರಿಯೂತ ನಿವಾರಕ ಹಾಗೂ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಪೌಷ್ಟಿಕಾಂಶದ ದೃಷ್ಟಿಯಿಂದ ನೋಡುವುದಾದರೆ ಈರುಳ್ಳಿಯು ಸಲ್ಪರ್‌ನಿಂದ ಸಮೃದ್ಧವಾಗಿದೆ ಮತ್ತು ಇದು ಒಡೆಯುವಿಕೆ ಹಾಗೂ ತೆಳುವಾಗುವುದನ್ನು ತಡೆಯುತ್ತದೆ, ಸಲ್ಪರ್ ಕೂದಲು ಕಿರುಚೀಲಗಳ ಪುನರುತ್ಪಾದನೆಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಚರ್ಮರೋಗ ತಜ್ಞೆ ಡಾ. ಜೈ ಶ್ರೀ ಶರದ್ ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್​​ನಲ್ಲಿ ಇದು ಮಿಥ್ಯ ಮತ್ತು ವೈಜ್ಞಾನಿಕ ಅಧ್ಯಯನನದಲ್ಲಿ ಇದು ಸಾಕಷ್ಟು ಬೆಂಬಲಿತವಾಗಿಲ್ಲ ಎಂದು ಹೇಳುತ್ತಾರೆ. ಈರುಳ್ಳಿ ರಸವು ನಿಜವಾಗಿಯೂ ಕೂದಲಿನ ಬೆಳವಣಿಗೆಗೆ ಒಳ್ಳೆಯದಾಗಿದ್ದರೆ, ಬೋಳು ತಲೆಯ ಜನರೇ ಇರುತ್ತಿರಲಿಲ್ಲ. ಆಗ ಎಲ್ಲರೂ ನೆತ್ತಿಯ ಮೇಲೆ ಈರುಳ್ಳಿಯ ರಸವನ್ನು ಉಜ್ಜುತ್ತಿದ್ದರು ಹಾಗೂ ಹೇರಳವಾಗಿ ಅವರಿಗೆ ಕೂದಲು ಬೆಳೆಯುತ್ತಿತ್ತು. ಈರುಳ್ಳಿ ರಸವು ಪುರುಷರಲ್ಲಿ ಕೂದಲು ಮತ್ತೆ ಬೆಳೆಯಲು ಕಾರಣವಾಗಬಹುದು ಅಥವಾ ಸ್ತ್ರೀಯರಲ್ಲಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಡಾ. ಶರದ್ ಹೇಳುತ್ತಾರೆ.

ಇದು ವಾಸ್ತವವಾಗಿ ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ. ವಾಸ್ತವವಾಗಿ ಇದು ಕಿರಿಕಿರಿ, ದದ್ದುಗಳು, ಸುಟ್ಟಗಾಯಗಳು ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು. ನಿಮಗೆ ಕೂದಲು ಉದುರುತ್ತಿದ್ದರೆ ಚರ್ಮರೋಗ ವೈದ್ಯರನ್ನು ಅಥವಾ ಟ್ರೆಕೊಲಾಜಿಸ್ಟ್​​​ನ್ನು ಸಂಪರ್ಕಿಸಿ. ತಜ್ಞರ ಸಲಹೆ ಇಲ್ಲದೆ ಮನೆಮದ್ದುಗಳನ್ನು ಬಳಸುವುದನ್ನು ತಪ್ಪಿಸಿ ಎಂದು ಡಾ.ಶರದ್ ಹೇಳುತ್ತಾರೆ.

ಇದನ್ನೂ ಓದಿ: ಈರುಳ್ಳಿ ರಸ ಬಳಸುವುದರಿಂದಾಗುವ ಪ್ರಯೋಜನ ತಿಳಿಯಿರಿ

ದಿ ಎಸ್ತೆಟಿಕ್ ಕ್ಲಿನಿಕ್ಸ್​​ನ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್, ಕಾಸ್ಮೆಟಿಕ್ ಡರ್ಮಟಾಲಜಿಸ್ಟ್ ಹಾಗೂ ಡರ್ಮಟೊ ಸರ್ಜನ್ ಆದ ಡಾ. ರಿಂಕಿ ಕಪೂರ್ ಹೇಳುವುದೇನೆಂದರೆ, ಈರುಳ್ಳಿ ರಸವನ್ನು ತಲೆಗೆ ಹಚ್ಚುವುದರಿಂದ ಪ್ರತಿಯೊಬ್ಬರೂ ಒಂದೇ ರೀತಿಯ ಪ್ರಯೋಜನವನ್ನು ಪಡೆಯುವುದಿಲ್ಲ ಮತ್ತು ಕೆಲವರು ಪರಿಣಾಮವನ್ನು ಎದುರಿಸಬಹುದು ಎಂದು ಹೇಳುತ್ತಾರೆ.

ಈರುಳ್ಳಿ ರಸವನ್ನು ಬಳಸುವುದರಿಂದ ನೆತ್ತಿಯ ಮೇಲೆ ಕೇವಲ 2 ವಾರಗಳಲ್ಲಿ ಕೂದಲು ಮತ್ತೆ ಬೆಳೆಯುತ್ತದೆ ಎಂದು ನಂಬಲಾಗಿದೆ. ಆದರೆ, ಮೊದಲು ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ ನಂತರ ಅದನ್ನು ಕೂದಲಿಗೆ ಬಳಸುವುದು ಉತ್ತಮ. ಈರುಳ್ಳಿ ರಸವನ್ನು ತಲೆಗೆ ಹಚ್ಚುವುದರಿಂದ ಎಲ್ಲರಿಗೂ ಪ್ರಯೋಜನವಾಗುವುದಿಲ್ಲ. ಇದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಕೂದಲು ಬೆಳೆಯಲು ಸಹಾಯ ಮಾಡುತ್ತದೆ ಅಥವಾ ಇತರ ಕೂದಲ ಸಮಸ್ಯೆಯನ್ನು ಈರುಳ್ಳಿ ರಸವು ತ್ವರಿತವಾಗಿ ಸರಿಪಡಿಸಲು ಸಹಾಯ ಮಾಡುತ್ತದೆ ಎನ್ನುವ ಸಾಮಾಜಿಕ ಮಾಧ್ಯವದಲ್ಲಿ ತೋರಿಸುವ ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ. ಈರುಳ್ಳಿ ರಸವು ನೆತ್ತಿಯಲ್ಲಿ ಸುಡುವಿಕೆ ಮತ್ತು ತುರಿಕೆಗೆ ಕಾರಣವಾಗಬಹುದು ಮತ್ತು ಇದು ಕೂದಲು ಉದುರುವಿಕೆಯನ್ನು ಉಂಟುಮಾಡಬಹುದು. ಆದ್ದರಿಂದ ನೆತ್ತಿಯ ಮೇಲೆ ಈರುಳ್ಳಿ ರಸವನ್ನು ಹಚ್ಚಿಕೊಳ್ಳುವುದನ್ನು ತಪ್ಪಿಸುವುದು ಉತ್ತಮ ಎಂದು ಡಾ. ರಿಂಕಿ ಕಪೂರ್ ಹೇಳುತ್ತಾರೆ.

Published On - 6:39 pm, Sat, 1 April 23