
ಹಿಂದಿನ ಕಾಲದಿಂದಲೂ ಹಲವಾರು ಧಾರ್ಮಿಕ ಆಚರಣೆ, ನಂಬಿಕೆ, ಸಂಪ್ರದಾಯಗಳನ್ನು ಪಾಲಿಸುತ್ತಾ ಬರಲಾಗುತ್ತಿದೆ. ಅವುಗಳಲ್ಲಿ ನದಿಗಳಿಗೆ (river) ನಾಣ್ಯ (coin) ಎಸೆಯುವುದು ಕೂಡಾ ಒಂದು. ಹೆಚ್ಚಿನ ಜನರು ಧಾರ್ಮಿಕ ಸ್ಥಳಗಳಿಗೆ ಹೋದಾಗ ಅಥವಾ ಪ್ರಯಾಣದ ವೇಳೆ ಹರಿಯುವ ನದಿಯನ್ನು ನೋಡಿದರೆ ಅದಕ್ಕೆ ನಾಣ್ಯವನ್ನು ಎಸೆಯುತ್ತಾರೆ. ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತೇವೆ, ಸಂಪತ್ತು ಸಮೃದ್ಧಿ ಲಭಿಸುತ್ತದೆ, ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ಜನ ನದಿಗಳಿಗೆ ನಾಣ್ಯಗಳನ್ನು ಎಸೆಯುತ್ತಾರೆ. ಹೀಗೆ ನದಿಗಳಿಗೆ ನಾಣ್ಯ ಎಸೆಯುವುದರಿಂದ ನಿಜಕ್ಕೂ ಪುಣ್ಯ ಲಭಿಸುತ್ತದೆಯೇ? ಈ ಬಗ್ಗೆ ಭಕ್ತನೊಬ್ಬ ವೃಂದಾವನದ ಸಂತ ಪ್ರೇಮಾನಂದ ಜೀ ಮಹಾರಾಜ್ (Premanand Ji Maharaj) ಅವರ ಬಳಿ ಪ್ರಶ್ನೆಯನ್ನು ಕೇಳಿದ್ದು, ಈ ಪ್ರಶ್ನೆಗೆ ಪ್ರೇಮಾನಂದ ಮಹಾರಾಜ್ ಅವರ ಉತ್ತರ ಹೇಗಿತ್ತು ನೋಡಿ.
ಭಾರತದ ಪ್ರಸಿದ್ಧ ಆಧ್ಯಾತ್ಮಿಕ ಗುರುಗಳಾದ ವೃಂದಾವನದ ಪ್ರೇಮಾನಂದ ಮಹಾರಾಜ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ಸತ್ಸಂಗದ ಮೂಲಕ ಭಕ್ತರಿಗೆ ಆಧ್ಯಾತ್ಮಿಕ ಜೀವನದ ಬಗ್ಗೆ ತಿಳಿಸಿಕೊಡುವ ಇವರು, ಭಕ್ತರ ಪ್ರಶ್ನೆಗಳು, ಸಮಸ್ಯೆಗಳಿಗೆ ಪರಿಹಾರವನ್ನು ಸಹ ನೀಡುತ್ತಾರೆ. ಅದೇ ರೀತಿ ಇತ್ತೀಚಿಗೆ ನದಿಗೆ ನಾಣ್ಯವನ್ನು ಎಸೆಯುವುದರಿಂದ ಪುಣ್ಯ ಲಭಿಸುತ್ತದೆಯೇ, ಇಷ್ಟಾರ್ಥಗಳು ಈಡೇರುತ್ತದೆಯೇ ಎಂದು ಸಂತ ಪ್ರೇಮಾನಂದ ಮಹಾರಾಜ್ ಅವರ ಬಳಿ ಪ್ರಶ್ನೆಯನ್ನು ಕೇಳಿದ್ದು, ಇದಕ್ಕೆ ಒಂದೊಳ್ಳೆ ಉತ್ತರ ನೀಡಿದ ಅವರು ಹೀಗೆ ನಾಣ್ಯಗಳನ್ನು ಎಸೆಯುವುದರಿಂದ ಯಾವುದೇ ಪುಣ್ಯ ಸಿಗುವುದಿಲ್ಲ, ಈ ಬಗ್ಗೆ ಯಾವುದೇ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿಲ್ಲ. ಜನರು ತಮ್ಮ ಮನಸ್ಸಿನಿಂದ ಈ ಕಾರ್ಯವನ್ನು ಮಾಡುತ್ತಾರೆ. ಹೀಗೆ ಮಾಡುವುದರಿಂದ ಪುಣ್ಯ ಲಭಿಸುವುದಿಲ್ಲ ಬದಲಿಗೆ ನದಿಯ ಸ್ವಚ್ಛತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೇಶದ ಪ್ರಗತಿಯ ಬಹುದೊಡ್ಡ ಶಕ್ತಿ ಕಾರ್ಮಿಕರು; ಶ್ರಮಜೀವಿಗಳ ದಿನದ ಮಹತ್ವ ತಿಳಿಯಿರಿ
ನದಿಗಳಿಗೆ ಹೀಗೆ ನಾಣ್ಯ ಎಸೆಯುವುದರಿಂದ ಯಾವುದೇ ಆಸೆಗಳು, ಇಷ್ಟಾರ್ಥಗಳು ಈಡೇರುವುದಿಲ್ಲ. ಬದಲಿಗೆ ಹೀಗೆ ಮಾಡುವುದರಿಂದ ನದಿಯಲ್ಲಿರುವ ಜಲಚರಗಳಿಗೆ ಹಾನಿಯುಂಟಾಗುತ್ತದೆ. ನಿಜವಾಗಿಯೂ ನಿಮಗೆ ಪುಣ್ಯ ಲಭಿಸಬೇಕು ಎಂದು ಬಯಸಿದರೆ ನಾಣ್ಯವನ್ನು ಎಸೆಯುವ ಬದಲು ಅದೇ ದುಡ್ಡಿನಿಂದ ಆಹಾರವನ್ನು ಖರೀದಿಸಿ ನದಿಗೆ ಎಸೆಯಿರಿ. ಇದರಿಂದ ಜಲಚರಗಳಿಗೆ ಆಹಾರ ಸಿಕ್ಕಂತಾಗುತ್ತದೆ ಎಂದು ಪ್ರೇಮಾನಂದ ಮಹಾರಾಜ್ ಅವರು ಹೇಳಿದ್ದಾರೆ.
ಹೀಗೆ ನಾಣ್ಯಗಳನ್ನು ನದಿಗೆ ಎಸೆಯುವ ಬದಲು ಆ ಒಂದೊಂದು ರೂಪಾಯಿಯನ್ನು ಸಂಗ್ರಹಿಸಿ, ಆ ದುಡ್ಡನ್ನು ದಾನ ಮಾಡಬಹುದು. ಇಲ್ಲವೇ ಅದೇ ದುಡ್ಡಿನಿಂದ ಹಸಿದ ವ್ಯಕ್ತಿಗೆ ಆಹಾರವನ್ನು ಕೊಡಬಹುದು ಅಥವಾ ಬಡವರಿಗೆ ಬಟ್ಟೆಯನ್ನು ಕೊಡಬಹುದು, ಅನಾರೋಗ್ಯ ಪೀಡಿತ ವ್ಯಕ್ತಿಗೆ ಆ ಹಣವನ್ನು ಕೊಡಬಹುದು. ಜೊತೆಗೆ ಅದೇ ದುಡ್ಡಿನಿಂದ ಹಸುಗಳಿಗೆ ಮೇವು ಕೊಡುವಂತಹ ಪುಣ್ಯದ ಕಾರ್ಯವನ್ನೂ ಸಹ ಮಾಡಬಹುದು. ಇದು ನಿಜವಾದ ಪುಣ್ಯದ ಕೆಲಸ ಎಂದು ಸಂತ ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Thu, 1 May 25