ಸಾಂದರ್ಭಿಕ ಚಿತ್ರ
ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಗಣೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಲಾಗುತ್ತದೆ. ಹೆಚ್ಚಿನವರ ಮನೆಯಲ್ಲಿ ಗಣೇಶನ ವಿಗ್ರಹವನ್ನು ಕೂರಿಸುವ ಪದ್ದತಿ ಇದೆ. ಹಾಗೂ ಆ ದಿನ ಗಣಪನಿಗೆ ಪ್ರಿಯವಾದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ. ಗಣೇಶನಿಗೆ ಪ್ರಿಯವಾದ ತಿನಿಸು ಎಂದಾಗ ಮೊದಲಿಗೆ ನೆನಪಿಗೆ ಬರುವುದೇ ಮೋದಕ. ಮೋದಕವನ್ನು ಹೊರತು ಪಡಿಸಿ, ಬೇರೆ ಏನನ್ನಾದರೂ ಮಾಡಲು ಬಯಸಿದರೆ ನೀವು ಮೋತಿಚೂರ್ ಲಡ್ಡು ಮಾಡಬಹುದು. ಈ ಒಂದು ಸಿಹಿ ಕೂಡಾ ಗಣೇಶನಿಗೆ ಅತ್ಯಂತ ಪ್ರಿಯವಾದುದು. ಹಾಗಾಗಿ ಈ ಬಾರಿಯ ಗಣೇಶ ಚತುರ್ಥಿಯ ದಿನ ಮೋದಕದ ಜೊತೆಗೆ ಮೋತಿಚೂರು ಲಡ್ಡುಗಳನ್ನು ತಯಾರಿಸಿ, ಗಣಪನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ. ಮೋತಿಚೂರ್ ಲಡ್ಡು ಮಾಡುವುದು ಹೇಗೆ, ಇಲ್ಲಿದೆ ಇದರ ಸುಲಭ ಪಾಕವಿಧಾನ.
ಮೋತಿಚೂರ್ ಲಡ್ಡು ಮಾಡಲು ಬೇಕಾಗುವ ಸಾಮಾಗ್ರಿಗಳು:
• ಕಡ್ಲೆ ಹಿಟ್ಟು
• ತುಪ್ಪ
• ಕಲ್ಲಂಗಡಿ ಬೀಜ,
• ಸಣ್ಣದಾಗಿ ಹೆಚ್ಚಿದ ಪಿಸ್ತಾ, ಗೋಡಂಬಿ, ಬಾದಾಮಿ
• ಸಕ್ಕರೆ
• ಫುಡ್ ಕಲರ್ (ಹಳದಿ ಅಥವಾ ಕೇಸರಿ)
• ಏಲಕ್ಕಿ ಪುಡಿ
• ಹಾಲು
ಮೋತಿಚೂರ್ ಲಡ್ಡು ತಯಾರಿಸುವ ವಿಧಾನ:
ಮೊದಲನೆಯದಾಗಿ ನೀವು ಬೂಂದಿ ತಯಾರಿಸಿಕೊಳ್ಳಬೇಕು. ಅದಕ್ಕಾಗಿ ಒಂದು ದೊಡ್ಡ ಪಾತ್ರೆಯಲ್ಲಿ ಕಡ್ಲೆ ಹಿಟ್ಟನ್ನು ಹಾಕಿ, ಅದಕ್ಕೆ ನೀರನ್ನು ಸೇರಿಸಿ, ಯಾವುದೇ ರೀತಿಯ ಗಂಟು ಕಟ್ಟಿಕೊಳ್ಳದ ಹಾಗೆ ನಯವಾದ ಹಿಟ್ಟನ್ನು ತಯಾರಿಸಿಕೊಳ್ಳಿ. ಇದಾದ ನಂತರ ಒಂದು ಬಾಣಲೆಗೆ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಅದನ್ನು ಬಿಸಿ ಮಾಡಿ. ತುಪ್ಪ ಕಾದ ಬಳಿಕ ಸಣ್ಣ ರಂಧ್ರಗಳಿರುವ ಪಾತ್ರೆ ಅಥವಾ ಜರಡಿಯ ಸಹಾಯದಿಂದ ಮೊದಲೇ ತಯಾರಿಸಿಟ್ಟ ಕಡ್ಲೆಹಿಟ್ಟಿನ ಮಿಶ್ರಣವನ್ನು ಬಾಣಲೆಗೆ ಹಾಕಿ, ಬೂಂದಿ ತಯಾಸಿಕೊಳ್ಳಿ. ಇದಾದ ಬಳಿಕ ನೀವು ಸಿರಪ್ ತಯಾರಿಸಿಕೊಳ್ಳಬೇಕು. ಅದಕ್ಕಾಗಿ ಒಂದು ಬಾಣಲೆಯನ್ನು ಸಕ್ಕರೆ ಮತ್ತು ಹಾಲು ಸೇರಿಸಿ ಚೆನ್ನಾಗಿ ಕುದಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿದ ಬಳಿಕ ಅದಕ್ಕೆ ಸ್ವಲ್ಪ ಹಳದಿ ಅಥವಾ ಕೇಸರಿ ಬಣ್ಣದ ಫುಡ್ ಕಲರ್ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಕೊನೆಯದಾಗಿ ಈ ಮಿಶ್ರಣಕ್ಕೆ ಮೊದಲೇ ತಯಾರಿಸಿಟ್ಟ ಬೂಂದಿಯನ್ನು ಸೇರಿಸಿಕೊಂಡು ಈ ಎಲ್ಲಾ ಮಿಶ್ರಣವು ದಪ್ಪವಾಗುವರೆಗೆ ಚೆನ್ನಾಗಿ ಬೆರೆಸಿಕೊಳ್ಳಿ. ಕೊನೆಯಲ್ಲಿ ಅದಕ್ಕೆ ಕಲ್ಲಂಗಡಿ ಬೀಜ ಹಾಗೂ ಕತ್ತರಿಸಿಟ್ಟ ಪಿಸ್ತಾ, ಬಾದಾಮಿ ತುಂಡುಗಳನ್ನು ಸೇರಿಸಿ. ಈಗ ಸ್ಟವ್ ಆಫ್ ಮಾಡಿ, ಮೋತಿಚೂರ್ ಮಿಶ್ರಣವನ್ನು ತಣ್ಣಗಾಗಲು ಬಿಡಿ. ನಂತರ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಸಣ್ಣ ಸಣ್ಣ ಲಡ್ಡುಗಳನ್ನು ತಯಾರಿಸಿ, ರುಚಿಕರವಾದ ಮೋತಿಚೂರ್ ಲಡ್ಡನ್ನು ಗಣೇಶನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ.