ಕೆಲಸದ ಸ್ಥಳದ ಆತಂಕ ಎಂದರೇನು?; ಇದರ ಲಕ್ಷಣಗಳ ಬಗ್ಗೆ ತಿಳಿದಿರಲಿ
ಕೆಲಸದ ಸ್ಥಳದ ಆತಂಕ ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಅತಿಯಾದ ಕೆಲಸದ ಹೊರೆ, ಕೆಲಸದ ಅಭದ್ರತೆ, ಕೆಲಸದ ಸ್ಥಳದ ಸಂಘರ್ಷಗಳಂತಹ ವಿವಿಧ ರೀತಿಯ ಕೆಲಸಕ್ಕೆ ಸಂಬಂಧಿಸಿದ ಅಂಶಗಳಿಂದ ಈ ಒತ್ತಡ ಉಂಟಾಗಬಹುದು.
ಕೆಲಸ ಮಾಡುವ ಸ್ಥಳದಲ್ಲಿ ನಾವು ಕಡಿಮೆಯೆಂದರೂ ನಮ್ಮ ದಿನದ ಮೂರನೇ ಒಂದು ಭಾಗವನ್ನು ಕಳೆಯುತ್ತೇವೆ. ಹೀಗಾಗಿ, ಕಚೇರಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿನ ವಾತಾವರಣ ಬಹಳ ಮುಖ್ಯ. ನಾವು ಮಾಡುವ ಕೆಲಸ ನಮಗೂ ತೃಪ್ತಿ ನೀಡುವಂತಿದ್ದಾಗ ಮಾತ್ರ ನಾವು ಆ ಕೆಲಸವನ್ನು ಎಂಜಾಯ್ ಮಾಡಿಕೊಂಡು ಮಾಡಲು ಸಾಧ್ಯ. ಆಗ ಅದು ನಮಗೆ ಹೊರೆ ಎನಿಸುವುದಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಕಿರಿಕಿರಿಯ, ಒತ್ತಡದ ವಾತಾವರಣ ಇದ್ದರೆ ಅದು ಕ್ರಮೇಣ ಮನಸಿನ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ, ಮನುಷ್ಯನ ಆರೋಗ್ಯದ ದೃಷ್ಟಿಯಿಂದಲೂ ಕೆಲಸದ ಸ್ಥಳದಲ್ಲಿ ಆರಾಮದಾಯಕವಾದ ವಾತಾವರಣ ಇರುವುದು ಅಗತ್ಯ.
ಈ ಕಾರಣದಿಂದಲೇ ಅನೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಆಫೀಸಿನಲ್ಲಿ ಯಾವುದೇ ರೀತಿಯ ನಿರ್ಬಂಧಗಳನ್ನು ಹಾಕುವುದಿಲ್ಲ. ಹಲವು ಕಂಪನಿಗಳಲ್ಲಿ ಉದ್ಯೋಗಿಗಳಿಗೆ ವಾಕ್ ಮಾಡಲು ಪಾರ್ಕ್, ರಿಲ್ಯಾಕ್ಸ್ ಮಾಡಲು ಪ್ರತ್ಯೇಕ ಕೊಠಡಿ, ಕೆಫೆಟೇರಿಯಾ, ಆಟವಾಡಲು ಮೈದಾನ, ಒಳಾಂಗಣ ಕ್ರೀಡೆಗಳು, ಅವರಿಗೆ ಬೇಕೆನಿಸಿದ್ದನ್ನು ತಿನ್ನಲು, ಕುಡಿಯಲು ಎಲ್ಲ ರೀತಿಯ ಸ್ನ್ಯಾಕ್ಸ್, ಡ್ರಿಂಕ್ಸ್, ಫ್ರೀ ಊಟ, ಎಲ್ಲಿ ಬೇಕಿದ್ದರೂ ಕುಳಿತುಕೊಂಡು ಕೆಲಸ ಮಾಡಲು ಅವಕಾಶ, ಜಿಮ್ ಹೀಗೆ ನಾನಾ ರೀತಿಯ ಸೌಲಭ್ಯಗಳನ್ನು ಆಫೀಸಿನಲ್ಲಿಯೇ ಒದಗಿಸುತ್ತಿವೆ. ಇದರಿಂದ ಉದ್ಯೋಗಿಗಳು ಯಾವುದೇ ಒತ್ತಡವಿಲ್ಲದೆ ಸಂಪೂರ್ಣ ಗಮನ ಕೊಟ್ಟು ಕೆಲಸ ಮಾಡಲು ಸಾಧ್ಯ ಎಂಬುದು ಇದರ ಹಿಂದಿರುವ ಉದ್ದೇಶ.
ಕೆಲಸವನ್ನು ನಾವೆಷ್ಟೇ ಪ್ರೀತಿಯಿಂದ ಮಾಡಿದರೂ ಕೆಲವೊಮ್ಮೆ ಕೆಲಸದ ಬಗ್ಗೆ ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ. ನಮ್ಮ ಕೆಲಸದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿರುವಾಗ, ಕೆಲಸದ ಸ್ಥಳದಲ್ಲಿ ಕಿರಿಕಿರಿ ಉಂಟಾದಾಗ ಮಾನಸಿಕವಾಗಿ ಒತ್ತಡ ಉಂಟಾಗುತ್ತದೆ. ಈ ಕೆಲಸದ ಸ್ಥಳದ ಆತಂಕ, ಒತ್ತಡ ಇತ್ತೀಚೆಗೆ ಸಾಮಾನ್ಯ ಸಮಸ್ಯೆಯಾಗಿದೆ.
ಇದನ್ನೂ ಓದಿ: Nail Care: ಉಗುರಿನ ಮೇಲೆ ಬಿಳಿ ಚುಕ್ಕೆ ಉಂಟಾಗಲು ಕಾರಣವೇನು?
ತಜ್ಞರ ಪ್ರಕಾರ, ಕೆಲಸದ ಸ್ಥಳದ ಆತಂಕವನ್ನು ಅನೇಕ ಉದ್ಯೋಗಿಗಳು ಎದುರಿಸುತ್ತಾರೆ. ತಾವು ಹಾಕುತ್ತಿರುವ ಎಫರ್ಟ್ ಸಾಕಾಗುತ್ತಿಲ್ಲವೆಂದೋ, ತಮ್ಮ ಕೆಲಸಕ್ಕೆ ಸಿಗುತ್ತಿರುವ ಮನ್ನಣೆ ಕಡಿಮೆಯಾಗುತ್ತಿದೆ ಎಂದೋ, ಕೆಲಸದಿಂದ ತೆಗೆದುಹಾಕಿದರೆ ತನ್ನ ಜೀವನಕ್ಕೆ ತೊಂದರೆ ಆಗುತ್ತದೆ ಎಂದೋ ಉದ್ಯೋಗಿಗಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಒತ್ತಡ ಉಂಟಾಗುತ್ತದೆ.
ತಮ್ಮ ಕೆಲಸದ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗದ ಉದ್ಯೋಗಿಗಳು ಆಯಾಸ ಮತ್ತು ದಣಿದ ಅನುಭವವನ್ನು ಅನುಭವಿಸುತ್ತಾರೆ. ಈ ಕೆಲಸದ ಸ್ಥಳದ ಒತ್ತಡ ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ.
ಉದ್ಯೋಗಿಗಳ ಕೆಲಸ ಅಥವಾ ಕೆಲಸದ ವಾತಾವರಣಕ್ಕೆ ಸಂಬಂಧಿಸಿದ ಅತಿಯಾದ ಚಿಂತೆ, ಭಯ ಅಥವಾ ಒತ್ತಡದಿಂದ ಇದು ಉಂಟಾಗುತ್ತದೆ. ಇದು ವಿವಿಧ ರೂಪಗಳಲ್ಲಿ ಪ್ರಕಟವಾಗಬಹುದು. ಅತಿಯಾದ ಕೆಲಸದ ಹೊರೆ, ಕೆಲಸದ ಅಭದ್ರತೆ, ಕೆಲಸದ ಸ್ಥಳದ ಸಂಘರ್ಷಗಳು ಮತ್ತು ಕಾರ್ಯಕ್ಷಮತೆಯ ನಿರೀಕ್ಷೆಗಳಂತಹ ವಿವಿಧ ರೀತಿಯ ಕೆಲಸಕ್ಕೆ ಸಂಬಂಧಿಸಿದ ಅಂಶಗಳಿಂದ ಈ ಒತ್ತಡ ಉಂಟಾಗಬಹುದು.
ಇದನ್ನೂ ಓದಿ: ಮಧುಮೇಹಿಗಳ ಗಾಯಗಳು ಯಾಕೆ ಬೇಗ ವಾಸಿಯಾಗುವುದಿಲ್ಲ?; ಇಲ್ಲಿದೆ ಕಾರಣ
ಕೆಲಸದ ಸ್ಥಳದ ಆತಂಕದ ಸಾಮಾನ್ಯ ಲಕ್ಷಣಗಳು ಹೀಗಿವೆ… 1. ಅತಿಯಾದ ಚಿಂತೆ: ಕೆಲಸದ ಸ್ಥಳದ ಒತ್ತಡ ಹೊಂದಿರುವ ವ್ಯಕ್ತಿಗಳು ತಮ್ಮ ಕೆಲಸದ ಕಾರ್ಯಕ್ಷಮತೆ, ಉದ್ಯೋಗ ಭದ್ರತೆ ಬಗ್ಗೆ ನಿರಂತರ ಚಿಂತೆಯನ್ನು ಅನುಭವಿಸುತ್ತಾರೆ. ಇದು ಅವರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.
2. ದೈಹಿಕ ಲಕ್ಷಣಗಳು: ಒತ್ತಡವು ದೈಹಿಕವಾಗಿ ಪ್ರಕಟವಾಗಬಹುದು. ಇದು ತಲೆನೋವು, ಸ್ನಾಯು ಸೆಳೆತ, ಜಠರಗರುಳಿನ ಸಮಸ್ಯೆಗಳು, ತ್ವರಿತ ಹೃದಯ ಬಡಿತ ಮತ್ತು ಬೆವರುವಿಕೆಯಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.
3. ಏಕಾಗ್ರತೆಯ ಸಮಸ್ಯೆ: ಕೆಲಸದ ಸ್ಥಳದ ಒತ್ತಡದಿಂದ ಉದ್ಯೋಗಿಗಳಿಗೆ ಕೆಲಸದ ಮೇಲೆ ಮನಸನ್ನು ಕೇಂದ್ರೀಕರಿಸಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗಬಹುದು.
4. ಆಲಸ್ಯ: ವ್ಯಕ್ತಿಗಳು ತಮ್ಮ ಮೇಲಧಿಕಾರಿಗಳ ಅಥವಾ ಸಹೋದ್ಯೋಗಿಗಳ ಟೀಕೆಗೆ ಭಯಪಡುವುದರಿಂದ ಅವರೊಳಗಿನ ಆತಂಕ ಕ್ರಮೇಣ ಆಲಸ್ಯಕ್ಕೆ ಕಾರಣವಾಗಬಹುದು.
5. ನಿದ್ರಾಹೀನತೆ: ಒತ್ತಡವು ಸಾಮಾನ್ಯವಾಗಿ ನಿದ್ರೆಯನ್ನು ಅಡ್ಡಿಪಡಿಸುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ಕಳಪೆ ನಿದ್ರೆಯು ಕೆಲಸದ ಸ್ಥಳದ ಆತಂಕವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.