Ganesha Chaturthi 2024 : ಹಬ್ಬಕ್ಕೆ ಮನೆಯಲ್ಲೇ ಮಾಡಿ ತೆಂಗಿನಕಾಯಿ ಬರ್ಫಿ, ಇಲ್ಲಿದೆ ರೆಸಿಪಿ

ಗೌರಿ ಗಣೇಶ ಹಬ್ಬಕ್ಕೆ ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಸೆಪ್ಟೆಂಬರ್ 7 ರಂದು ಗಣೇಶನನ್ನು ಬರ ಮಾಡಿಕೊಳ್ಳಲು ತಯಾರಿ ಜೋರಾಗಿಯೇ ನಡೆಯುತ್ತಿದೆ. ಹಬ್ಬಕ್ಕೆ ನಾನಾ ಬಗೆಯ ಸಿಹಿ ತಿಂಡಿಗಳನ್ನು ತಯಾರಿಸಲು ಹೆಣ್ಣು ಮಕ್ಕಳು ಸಿದ್ಧತೆ ಮಾಡಿಕೊಂಡಿದ್ದಾರೆ. ಗಣೇಶನ ಹಬ್ಬಕ್ಕೆ ಮೋದಕ, ಕಡುಬು, ಚಕ್ಕುಲಿ, ಲಡ್ಡು ಹೀಗೆ ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಇಡಲಾಗುತ್ತದೆ. ಗಣೇಶನಿಗೆ ನೈವೇದ್ಯವಿಡಲು ಮನೆಯಲ್ಲಿ ಸುಲಭವಾಗಿ ತೆಂಗಿನಕಾಯಿ ಬರ್ಫಿಯನ್ನು ಮಾಡಬಹುದು. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Ganesha Chaturthi 2024 : ಹಬ್ಬಕ್ಕೆ ಮನೆಯಲ್ಲೇ ಮಾಡಿ ತೆಂಗಿನಕಾಯಿ ಬರ್ಫಿ, ಇಲ್ಲಿದೆ ರೆಸಿಪಿ
ಸಾಂದರ್ಭಿಕ ಚಿತ್ರ
Edited By:

Updated on: Sep 02, 2024 | 2:08 PM

ಹಬ್ಬ ಎಂದ ಮೇಲೆ ಸಿಹಿ ತಿಂಡಿ ತಿನಿಸುಗಳು ಇಲ್ಲದೇ ಹೋದರೆ ಹೇಳಿ. ಈ ಗಣೇಶನ ಹಬ್ಬಕ್ಕೆ ವಿಶೇಷ ತಿಂಡಿಗಳನ್ನು ಮಾಡಿ ಗಣೇಶನ ಹಬ್ಬವನ್ನು ಆಚರಿಸುವುದು ವಾಡಿಕೆ. ಲಡ್ಡು, ಮೋದಕ, ರವೆ ಉಂಡೆ, ಪಾಯಸ, ಕರ್ಜಿಕಾಯಿ ಮುಂತಾದ ಸಿಹಿ ಸಿಹಿ ತಿಂಡಿಗಳನ್ನೂ ಮಾಡಲಾಗುತ್ತದೆ. ಆದರೆ ಈ ಬಾರಿಯ ಹಬ್ಬಕ್ಕೆ ಸುಲಭವಾಗಿ ಸಿಹಿ ತಿಂಡಿಗಳಲ್ಲಿ ಒಂದಾದ ತೆಂಗಿನಕಾಯಿ ಬರ್ಫಿಯನ್ನು ಮಾಡಬಹುದು. ಮನೆಯಲ್ಲಿ ಈ ಕೆಲವು ಕೆಲವು ಐಟಂಗಳಿದ್ದರೆ ಫಟಾ ಫಟ್ ಎಂದು ತೆಂಗಿನಕಾಯಿ ಬರ್ಫಿ ಸಿದ್ಧವಾದಂತೆಯೇ ಸರಿ.

ತೆಂಗಿನಕಾಯಿ ಬರ್ಫಿ ಮಾಡಲು ಬೇಕಾಗುವ ಸಾಮಗ್ರಿಗಳು

  • ತೆಂಗಿನಕಾಯಿ ತುರಿ – 2 ಕಪ್
  • ಸಕ್ಕರೆ – 1 ಕಪ್
  • ಗೋಡಂಬಿ ಹಾಗೂ ಬಾದಾಮಿ
  • ಏಲಕ್ಕಿ
  • ಮೂರು ನಾಲ್ಕು ಚಮಚ ತುಪ್ಪ
  • ನಾಲ್ಕು ಚಮಚ ಹಾಲು

ತೆಂಗಿನಕಾಯಿ ಬರ್ಫಿ ಮಾಡುವ ವಿಧಾನ

  1. ಮೊದಲಿಗೆ ತೆಂಗಿನಕಾಯಿ ತುರಿಯಲ್ಲಿ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  2. ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿಕೊಂಡು ರುಬ್ಬಿದ ತೆಂಗಿನಕಾಯಿ ತುರಿಯನ್ನು ಹಾಕಿಕೊಂಡು ಮೂರರಿಂದ ನಾಲ್ಕು ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
  3. ತೆಂಗಿನ ತುರಿ ಘಮಬರುತ್ತಿದ್ದಂತೆ ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
  4. ಸಕ್ಕರೆ ನೀರಾಗಿ ಮಿಶ್ರಣ ಗಟ್ಟಿಯಾಗುತ್ತಿದ್ದಂತೆ ಏಲಕ್ಕಿ ಪುಡಿ ಹಾಕಿಕೊಳ್ಳಿ.
  5. ಒಂದು ಪ್ಲೇಟ್‌ಗೆ ತುಪ್ಪ ಸವರಿಕೊಂಡು ಇಟ್ಟುಕೊಳ್ಳಿ. ಈ ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ತಟ್ಟೆಗೆ ಹಾಕಿ ಸಮತಟ್ಟಾಗಿ ಮಾಡಿಕೊಳ್ಳಿ.
  6. ಬಾದಾಮಿ ಹಾಗೂ ಗೋಡಂಬಿಯನ್ನು ಇದರ ಮೇಲೆ ಉದುರಿಸಿಕೊಂಡು, ಮೂರು ಗಂಟೆಗಳ ಕಾಲ ಹಾಗೆ ಬಿಟ್ಟರೆ ತೆಂಗಿನಕಾಯಿ ಬರ್ಫಿ ಸವಿಯಲು ಸಿದ್ಧ.

ಇದನ್ನೂ ಓದಿ: ತೆಂಗಿನಕಾಯಿ ಸೇವನೆಯಿಂದ ಆರೋಗ್ಯದಲ್ಲಾಗುತ್ತೆ ಮ್ಯಾಜಿಕ್

ತೆಂಗಿನ ಕಾಯಿ ಬರ್ಫಿ ಮಾಡುವಾಗ ಈ ವಿಷಯಗಳು ನೆನಪಿನಲ್ಲಿರಲಿ

  • ಕಾಯಿತುರಿಯ ಬದಲು ಒಣಕೊಬ್ಬರಿ ಪುಡಿಯನ್ನೂ ಬಳಸಬಹುದು. ಒಣ ಕೊಬ್ಬರಿಯಲ್ಲಿ ಹಾಲು ಪೂರ್ಣವಾಗಿ ಹೀರಿಕೊಂಡು ಒಣಗುವ ಮುನ್ನವೇ ಒಲೆ ಆಫ್ ಮಾಡಿಕೊಳ್ಳಿ, ಇಲ್ಲದಿದ್ದರೆ ಈ ಮಿಶ್ರಣವು ತೀರಾ ಗಟ್ಟಿಯಾಗುತ್ತದೆ.
  • ಕೊಬ್ಬರಿ ಬರ್ಫಿಗೆ ಏಲಕ್ಕಿ ಪುಡಿಯನ್ನು ಬಳಸುವುದರಿಂದ ಈ ತಿನಿಸು ಪರಿಮಳಯುಕ್ತವಾಗಿರುತ್ತದೆ.
  • ಕೊಬ್ಬರಿ ಬರ್ಫಿ ಮಿಶ್ರಣವನ್ನು ಅತಿಯಾಗಿ ಬೇಯಿಸುವುದನ್ನು ಆದಷ್ಟು ತಪ್ಪಿಸಿ, ಇಲ್ಲದಿದ್ದರೆ ಬರ್ಫಿಯು ಗಟ್ಟಿಯಾಗುತ್ತದೆ.
  • ಕಾಯಿತುರಿಗೆ ಕೊಂಚ ಸಕ್ಕರೆ ಸೇರಿಸಿ ಕೈಯಲ್ಲಿ ಮಿಶ್ರಣ ಮಾಡಿಟ್ಟಿರಿ. ಈ ಪುಡಿಯನ್ನು ಬರ್ಫಿಯನ್ನು ತಟ್ಟೆಗೆ ಹರಡಿದ ಬಳಿಕ ಮೇಲಿಂದ ಉದುರಿಸಿದರೆ ನೋಡುವುದಕ್ಕೆ ಆಕರ್ಷಕವಾಗಿರುತ್ತದೆ.

ಗಣೇಶ ಚತುರ್ಥಿ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ