ಸಾಂದರ್ಭಿಕ ಚಿತ್ರ
ಉತ್ತರ ಕರ್ನಾಟಕದ ಜನರು ಖಡಕ್ ಜೋಳದ ರೊಟ್ಟಿ ಜೊತೆಗೆ ಖಾರವಾದ ಚಟ್ನಿ ಸವಿದರೆ, ಮಲೆನಾಡಿನ ಜನರಿಗೆ ಕಜ್ಜಾಯದ ಜೊತೆಗೆ ಕೋಳಿ ಸಾರು ಇದ್ದು ಬಿಟ್ಟರೆ ಬೇರೇನೂ ಬೇಕಾಗಿಯೇ ಇಲ್ಲ. ಅಕ್ಕಿ ಹಿಟ್ಟಿನಿಂದ ಮಾಡುವ ವಿಶೇಷ ಖಾದ್ಯವಾಗಿದ್ದು, ಇದು ನೋಡಲು ಕೊಡುಬಳೆ ಆಕಾರದಲ್ಲಿರುತ್ತದೆ. ಆದರೆ ಅದರಷ್ಟು ಸಣ್ಣದಾಗಿರುವುದಿಲ್ಲ. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಈಡಿಗರ ಮನೆಯಲ್ಲಿ ತಯಾರಾಗುವ ವಿಶೇಷವಾದ ಆಹಾರವಿದು. ಈ ಹಬ್ಬ ಹರಿದಿನಗಳು ಈ ಕಜ್ಜಾಯವಿಲ್ಲದೇ ಪೂರ್ಣವಾಗುವುದೇ ಇಲ್ಲ. ಒಮ್ಮೆ ರುಚಿ ಸವಿದರೆ ಮತ್ತೆ ಮತ್ತೆ ಬೇಕೇನಿಸುತ್ತದೆ.
ಕೋಳಿ ಕಜ್ಜಾಯ ಮಾಡಲು ಬೇಕಾಗುವ ಸಾಮಗ್ರಿಗಳು
*ಅಕ್ಕಿ ಹಿಟ್ಟು, ಈರುಳ್ಳಿ, ತೆಂಗಿನ ತುರಿ, ಸ್ವಲ್ಪ ಅನ್ನ, ಚಿರೋಟಿ ರವೆ, ಹತ್ತು ಬೆಳ್ಳುಳ್ಳಿ ಎಸಳು, ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ಇದನ್ನೂ ಓದಿ: ಅಡುಗೆ ಮನೆಯ ಗೋಡೆ ಮೇಲೆ ಎಣ್ಣೆ ಜಿಡ್ಡಿನ ಕಲೆ ಇದ್ಯಾ? ಇಲ್ಲಿದೆ ಸಿಂಪಲ್ ಟಿಪ್ಸ್
ಕೋಳಿ ಕಜ್ಜಾಯ ಮಾಡುವ ವಿಧಾನ
- ಮೊದಲಿಗೆ ಅಕ್ಕಿಯನ್ನು ನೀರಲ್ಲಿ ತೊಳೆದು, ಒಣಗಿಸಿದ ನಂತರದಲ್ಲಿ ತರಿತರಿಯಾಗಿ ಹಿಟ್ಟು ಮಾಡಿಟ್ಟುಕೊಳ್ಳಬೇಕು.
- ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಒಲೆ ಮೇಲಿಟ್ಟು, ಬಿಸಿಯಾಗುತ್ತಿದ್ದಂತೆ ಸಣ್ಣಗೆ ಕತ್ತರಿಸಿಟ್ಟುಕೊಂಡ ಈರುಳ್ಳಿ, ತೆಂಗಿನಕಾಯಿ ತುರಿ, ಬೆಳ್ಳುಳ್ಳಿ, ಅನ್ನ ಹಾಕಿ ಚೆನ್ನಾಗಿ ತಿರುಗಿಸಬೇಕು.
- ನಂತರದಲ್ಲಿ ಅಕ್ಕಿ ಹಿಟ್ಟನ್ನು ಕುದಿಯುತ್ತಿರುವ ನೀರಿಗೆ ಹಾಕಿ ಕೈಯಾಡಿಸುತ್ತಿರಬೇಕು.
- ರುಚಿಗೆ ತಕ್ಕಷ್ಟು ಉಪ್ಪು, ಚಿರೋಟಿ ರವೆ ಹಾಕಿ ಚೆನ್ನಾಗಿ ಕುದಿಸಬೇಕು. ಚೆನ್ನಾಗಿ ಕುದಿದು ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಪಾತ್ರೆಯನ್ನು ಒಲೆಯಿಂದ ಕೆಳಗಿಟ್ಟು ತಣ್ಣಗಾಗಲು ಬಿಡಬೇಕು.
- ತಣ್ಣಗಾಗುತ್ತಿದ್ದಂತೆ ಅಗಲವಾದ ಪಾತ್ರೆಗೆ ಹಿಟ್ಟನ್ನು ಸುರಿದುಕೊಂಡು ಚೆನ್ನಾಗಿ ನಾದಿಕೊಳ್ಳಬೇಕು.
- ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಕೋಲಿನ ರೂಪದಲ್ಲಿ ಉದ್ದ ಮಾಡಿ, ಎರಡು ತುದಿಗಳನ್ನು ಜೋಡಿಸಿದರೆ ಕೋಡುಬಳೆಯಂತಾಗುತ್ತದೆ.
- ಇದನ್ನು ಎಣ್ಣೆಗೆ ಹಾಕಿ ಕರಿಯಬೇಕು. ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಎಣ್ಣೆಯಿಂದ ತೆಗೆದರೆ ಗರಿ ಗರಿಯಾದ ಕಜ್ಜಾಯ ಸವಿಯಲು ಸಿದ್ಧವಾಗಿರುತ್ತದೆ. ಕೋಳಿ ಸಾರಿನೊಂದಿಗೆ ಸವಿದರೆ ಅದರ ರುಚಿಯೇ ಬೇರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ