ಉತ್ತರ ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿನಿಸು ಸುರುಳಿ ಹೋಳಿಗೆ, ಇಲ್ಲಿದೆ ರೆಸಿಪಿ
ಯಾವುದೇ ಹಬ್ಬವಿರಲಿ, ಮದುವೆ ಇರಲಿ ಅಲ್ಲಿ ಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿದ್ದರೆ ಹೇಗೆ ಹೇಳಿ. ಈ ಹೋಳಿಗೆ ಎಂದಾಕ್ಷಣ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಸಿಹಿ ಸಿಹಿಯಾದ ಹೋಳಿಗೆಯಲ್ಲಿ ವಿವಿಧ ಬಗೆಯಿದ್ದು, ಸಿಹಿ ಪ್ರಿಯರಿಗಂತೂ ಎಲ್ಲಾ ಹೋಳಿಗೆಯು ಇಷ್ಟವೇ. ಆದರೆ ಉತ್ತರ ಕರ್ನಾಟಕದ ಸುರುಳಿ ಹೋಳಿಗೆಯ ಬಗ್ಗೆ ಕೇಳಿದ್ದಿರಬಹುದು. ಈ ಭಾಗದ ಸಾಂಪ್ರಾದಾಯಿಕ ಸಿಹಿ ತಿನಿಸು ಇದಾಗಿದ್ದು, ಬಾಯಲ್ಲಿಟ್ಟರೆ ಕರಗುವ ಈ ಹೋಳಿಗೆ ಮಾಡುವುದು ಸುಲಭ. ಹಾಗಾದ್ರೆ ಸುರುಳಿಕಾರದ ಹೋಳಿಗೆ ರೆಸಿಪಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೋಳಿಗೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಸಿಹಿಸಿಹಿಯಾದ ಹೂರಣವನ್ನು ಬಾಯಲ್ಲಿಟ್ಟರೆ ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಹಬ್ಬದ ಅಡುಗೆಯಲ್ಲಿ ಹೋಳಿಗೆ ಇದ್ದರೆ ಅದರ ಮಜಾನೇ ಬೇರೆ. ಉತ್ತರ ಕರ್ನಾಟಕದಲ್ಲಿ ವಿವಿಧ ಬಗೆಯ ಹೋಳಿಗೆಯು ಸಿಕ್ಕಾಪಟ್ಟೆ ಫೇಮಸ್. ಇಲ್ಲಿ ಈ ಸುರುಳಿ ಹೋಳಿಗೆಯಂತೂ ತುಂಬಾನೇ ಸ್ಪೆಷಲ್. ಹೆಸರೇ ಹೇಳುವಂತೆ ಸುರುಳಿಯಾಕಾರದಲ್ಲಿರುವ ಈ ಹೋಳಿಗೆ ನೋಡಿದ ಕೂಡಲೇ ತಿನ್ನಬೇಕೆನಿಸುತ್ತದೆ. ಮನೆಯಲ್ಲಿರುವ ಕೆಲವೇ ಕೆಲವು ಐಟಂನಿಂದ ಮಾಡಬಹುದಾದ ಈ ಹೋಳಿಗೆಯನ್ನು ಒಮ್ಮೆ ಸವಿದರೆ ಬೇಡ ಎನ್ನಲು ಮನಸ್ಸೇ ಆಗುವುದಿಲ್ಲ.
ಸುರುಳಿ ಹೋಳಿಗೆ ಮಾಡಲು ಬೇಕಾಗುವ ಸಾಮಗ್ರಿಗಳು
* ಮೈದಾ ಹಿಟ್ಟು
* ಎರಡು ಚಮಚದಷ್ಟು ಎಣ್ಣೆ
* ಒಂದು ಕಪ್ ಪುಡಿ ಬೆಲ್ಲ
* ಒಂದು ಕಪ್ ಒಣಕೊಬ್ಬರಿ ತುರಿ
* ಅರ್ಧ ಕಪ್ ಹುರಿದ ಗಸಗಸೆ
* ಒಂದೆರಡು ಚಮಚ ಏಲಕ್ಕಿ ಪುಡಿ
ಇದನ್ನೂ ಓದಿ: ಬೆಳಗ್ಗೆ ತಿಂಡಿಗೆ ಬೆಸ್ಟ್ ಕೂರ್ಗ್ ಸ್ಪೆಷಲ್ ಪಾಪುಟ್ಟು, ಮಾಡೋದು ಹೇಗೆ?
ಸುರುಳಿ ಹೋಳಿಗೆ ಮಾಡುವ ವಿಧಾನ
* ಒಂದು ಕಪ್ ಮೈದಾ ಹಿಟ್ಟಿಗೆ ಎಣ್ಣೆ ಹಾಗೂ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ನೆನೆಯಲು ಬಿಡಿ.
* ಆ ಬಳಿಕ ಬೆಲ್ಲಕ್ಕೆ ಒಣ ಕೊಬ್ಬರಿ ತುರಿ, ಹುರಿದ ಗಸಗಸೆ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿಕೊಂಡು ಹೂರಣ ಸಿದ್ಧಮಾಡಿಕೊಳ್ಳಿ.
* ನಂತರದಲ್ಲಿ ಮೈದಾ ಹಿಟ್ಟಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ತೆಳ್ಳಗೆ ಲಟ್ಟಿಸಿ ಎರಡೂ ಕಡೆ ಅರ್ಧ ಬೇಯಿಸಬೇಕು.
* ಒಂದು ತುದಿಗೆ ಹೂರಣ ಹಾಕಿ ಸುರುಳಿ ಮಾಡಿ, ಎರಡೂ ಕಡೆ ಬೇಯಿಸಿದರೆ ರುಚಿಕರವಾದ ಸುರುಳಿ ಹೋಳಿಗೆ ಸವಿಯಲು ಸಿದ್ಧ. ತುಪ್ಪದೊಂದಿಗೆ ಇದನ್ನು ಸವಿಯಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ