ಆರೋಗ್ಯಕರ ಜೀವನಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ಈ ಆಯುರ್ವೇದ ನಿಯಮಗಳನ್ನು ಪಾಲಿಸಿ
ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದವು ಆರೋಗ್ಯಕರ ಮತ್ತು ಸಮತೋಲಿತ ಜೀವನವನ್ನು ನಡೆಸಲು ಬೆಳಗಿನ ದಿನಚರಿಯಲ್ಲಿ ಒಂದಷ್ಟು ನಿಯಮ, ಆಚರಣೆಗಳನ್ನು ಅನುಸರಿಸಲು ಶಿಫಾರಸು ಮಾಡುತ್ತದೆ. ಈ ಆಚರಣೆಗಳು ದೈಹಿಕ ಆರೋಗ್ಯವನ್ನು ಉತ್ತೇಜಿಸುವುದಲ್ಲದೆ ಮನಸ್ಸನ್ನು ಶಾಂತಗೊಳಿಸುತ್ತವೆ. ನಿಮ್ಮ ಬೆಳಗಿನ ದಿನಚರಿಯಲ್ಲಿ ನೀವು ಸೇರಿಸಿಕೊಳ್ಳಬಹುದಾದ ಆ ಆಯುರ್ವೇದ ನಿಯಮಗಳು ಯಾವುವು ಎಂಬುದನ್ನು ತಿಳಿಯಿರಿ.

ಆರೋಗ್ಯಕರ ಮತ್ತು ಸದೃಢ ದೇಹವನ್ನು ಕಾಪಾಡಿಕೊಳ್ಳಲು ಆಯುರ್ವೇದವು ಹಲವಾರು ಸಲಹೆಗಳನ್ನು ನೀಡಿದೆ. ನಮ್ಮ ಪೂರ್ವಜರು ಈ ಸಲಹೆಗಳನ್ನು ಅನುಸರಿಸಿ ದೀರ್ಘಕಾಲ ಆರೋಗ್ಯವಂತರಾಗಿ ಜೀವನ (healthy life) ನಡೆಸುತ್ತಿದರು. ಆದ್ರೆ ಇಂದಿನ ದಿನಗಳಲ್ಲಿ ನಾವು ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಕಾರಣದಿಂದಲೇ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಸಣ್ಣ ವಯಸ್ಸಿನಲ್ಲಿಯೇ ಪದೇ ಪದೇ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತೇವೆ. ಹೀಗಿರುವಾಗ ನೀವು ಆರೋಗ್ಯವಾಗಿರಲು, ಫಿಟ್ ಆಗಿರಲು, ಮತ್ತು ದೀರ್ಘಾಯುಷ್ಯವನ್ನು ಹೊಂದಲು ಬಯಸಿದರೆ, ಬೆಳಗಿನ ದಿನಚರಿಯಲ್ಲಿ ಈ ಕೆಲವು ಆಯುರ್ವೇದ ನಿಯಮಗಳನ್ನು ಪಾಲಿಸಿ.
ಬೆಳಗಿನ ದಿನಚರಿಯಲ್ಲಿ ಈ ಆಯುರ್ವೇದ ಸಲಹೆಗಳನ್ನು ಪಾಲಿಸಿ:
ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಿ: ಆಯುರ್ವೇದದ ಪ್ರಕಾರ, ಬೆಳಿಗ್ಗೆ ಹಲ್ಲುಜ್ಜುವುದರ ಜೊತೆಗೆ, ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಸಹ ಅತ್ಯಗತ್ಯ. ನಿಮ್ಮ ನಾಲಿಗೆಯನ್ನು ನಿಧಾನವಾಗಿ ಕೆರೆದುಕೊಳ್ಳಿ. ಇದು ನಿಮ್ಮ ಆಂತರಿಕ ಅಂಗಗಳನ್ನು ಉತ್ತೇಜಿಸುತ್ತದೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಸತ್ತ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ತಲೆಗೆ ಮಸಾಜ್ ಮಾಡಿ: ಆಯುರ್ವೇದದ ಪ್ರಕಾರ, ಮುಂಜಾನೆ ಎದ್ದು ತಲೆ ಮಸಾಜ್ ಮಾಡುವುದು ಪ್ರಯೋಜನಕಾರಿಯಾಗಿದೆ. ಒತ್ತಡದ ಜೀವನದಲ್ಲಿ ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಬೆಚ್ಚಗಿನ ಎಣ್ಣೆಯಿಂದ ತಲೆ ಮತ್ತು ದೇಹವನ್ನು ಮಸಾಜ್ ಮಾಡುವುದರಿಂದ ತಲೆನೋವು, ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಇದಲ್ಲದೆ, ಈ ಎಣ್ಣೆ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಸ್ನಾಯುಗಳು ಮತ್ತು ಕೀಲುಗಳ ಶಕ್ತಿ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದೆ.
ವ್ಯಾಯಾಮ ಮಾಡಿ: ಆಯುರ್ವೇದದಲ್ಲಿ ವ್ಯಾಯಾಮಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ವಿಶೇಷವಾಗಿ, ಪ್ರತಿದಿನ ಯೋಗ ಮಾಡುವುದರಿಂದ ಶಕ್ತಿ, ಆರೋಗ್ಯ ವೃದ್ಧಿಸುತ್ತದೆ ಮತ್ತು ಎಲ್ಲಾ ರೀತಿಯ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಆಯುರ್ವೇದದ ಪ್ರಕಾರ, ಸೂರ್ಯ ನಮಸ್ಕಾರದೊಂದಿಗೆ ದಿನವನ್ನು ಪ್ರಾರಂಭಿಸುವುದು ತುಂಬಾನೇ ಒಳ್ಳೆಯದು. ಇದನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ನೀವು ದಿನವಿಡೀ ಚೈತನ್ಯಶೀಲರಾಗಿರುತ್ತೀರಿ.
ಧ್ಯಾನ ಮಾಡಿ: ಬೆಳಿಗ್ಗೆ ಬೇಗನೆ ಎದ್ದು ಆಳವಾದ ಉಸಿರಾಟ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದು ಸಹ ಮುಖ್ಯ. ಇದು ನಿಮ್ಮ ಮನಸ್ಸು ಮತ್ತು ಭಾವನೆಗಳಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಆಯುರ್ವೇದದ ಪ್ರಕಾರ, ಮನಸ್ಸನ್ನು ಸಮತೋಲನಗೊಳಿಸಲು ಧ್ಯಾನ ಅತ್ಯಗತ್ಯ. ಪ್ರತಿಯೊಬ್ಬರೂ ಇದನ್ನು ಪ್ರತಿದಿನ ಅಭ್ಯಾಸ ಮಾಡಬೇಕು.
ಇದನ್ನೂ ಓದಿ: ಜೀವನದಲ್ಲಿ ಸಂತೋಷ ಬೇಕೆಂದರೆ ನೀವು ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ
ಉಗುರು ಬೆಚ್ಚಗಿನ ನೀರು ಕುಡಿಯಿರಿ: ಬೆಳಿಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದು ಸರಳ ಆದರೆ ಪರಿಣಾಮಕಾರಿ ಆಯುರ್ವೇದ ಪರಿಹಾರವಾಗಿದ್ದು, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಈ ಪರಿಹಾರವು ಚಯಾಪಚಯಕ್ರಿಯೆಯನ್ನು ಸುಧಾರಿಸುತ್ತದೆ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಬೆಚ್ಚಗಿನ ನೀರು ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ತ್ವಚೆಯ ನೈಸರ್ಗಿಕ ಹೊಳಪು ಹೆಚ್ಚುತ್ತದೆ. ಈ ಅಭ್ಯಾಸವು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ತಣ್ಣೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ: ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮುಖ ಮತ್ತು ಕಣ್ಣುಗಳನ್ನು ತಣ್ಣೀರಿನಿಂದ ತೊಳೆಯಿರಿ. ಇದು ಕಣ್ಣು ಮತ್ತು ತ್ವಚೆಯಲ್ಲಿ ಸಂಗ್ರಹವಾಗುವ ವಿಷವನ್ನು ತೊಡೆದುಹಾಕಲು ಮತ್ತು ಇಂದ್ರೀಯಗಳನ್ನು ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ದೃಷ್ಟಿ ಸುಧಾರಣೆ ಮತ್ತು ತ್ವಚೆಯ ಹೊಳಪನ್ನು ಹೆಚ್ಚಿಸಲು ಮುಖ ಹಾಗೂ ಕಣ್ಣನ್ನು ಗುಲಾಬಿ ನೀರು ಅಥವಾ ತ್ರಿಫಲ ನೀರಿನಿಂದ ಸ್ವಚ್ಛಗೊಳಿಸಲು ಆಯುರ್ವೇದ ಸಲಹೆ ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:04 am, Tue, 27 January 26




