ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿ, ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ ಇತ್ಯಾದಿ ಕಾರಣಗಳಿಂದಾಗಿ ಹೆಚ್ಚಿನವರು ಬಹು ಬೇಗನೆ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಈ ಒತ್ತಡವು ಖಿನ್ನತೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಯಾವಾಗಲೂ ಮನಸ್ಥಿತಿಯನ್ನು ಶಾಂತವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ನಮ್ಮ ಮನಸ್ಥಿತಿಯನ್ನು ಸುಧಾರಿಸುವಲ್ಲಿ ಮೆದುಳಿನಲ್ಲಿ ಉತ್ಪತ್ತಿಯಾಗುವ ನಾಲ್ಕು ಬಗೆಯ ಸಂತೋಷದ ಹಾರ್ಮೋನುಗಳಾದ ಡೋಪಮೈನ್, ಎಂಡಾರ್ಫಿನ್, ಆಕ್ಸಿಟೋಸಿನ್, ಸಿರೊಟೋನಿನ್ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಹಾರ್ಮೋನುಗಳು ನಮ್ಮ ದೇಹದ ಕಾರ್ಯನಿರ್ವಹಣೆಯ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇದು ಧನಾತ್ಮಕ ಭಾವನೆಯನ್ನು ಹೆಚ್ಚಿಸುತ್ತದೆ, ನಮ್ಮನ್ನು ಹೆಚ್ಚು ಸಂತೋಷದಿಂದ ಇರುವಂತೆ ಮಾಡುತ್ತದೆ ಮತ್ತು ಇದು ಒತ್ತಡವನ್ನು ನಿವಾರಿಸಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವ್ಯಾಯಾಮ: ನಿಯಮಿತ ವ್ಯಾಯಾಮ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅದೇ ರೀತಿ ಇದು ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಮತ್ತು ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸಲು ಬಯಸಿದರೆ ನಿಯಮಿತವಾಗಿ ವ್ಯಾಯಾಮ ಮಾಡಿ. ಮೇಯೊ ಕ್ಲಿನಿಕ್ ಪ್ರಕಾರ, ನಿಯಮಿತ ದೈಹಿಕ ಚಟುವಟಿಕೆಯು ಎಂಡಾರ್ಫಿನ್ ಎಂಬ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.
ದೇಹವನ್ನು ಸೂರ್ಯ ಬೆಳಕಿಗೆ ಒಡ್ಡಿಕೊಳ್ಳಿ: ಮುಂಜಾನೆ ವಾಕಿಂಗ್ ಹೋಗುವುದು, ತಾಜಾ ಗಾಳಿ ಮತ್ತು ಸೂರ್ಯನ ಬೆಳಕನ್ನು ಪಡೆಯುವುದು ದೇಹದಲ್ಲಿನ ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸಲು ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳಿವೆ. ಈ ಅಭ್ಯಾಸವು ದೇಹದಲ್ಲಿ ಸಂತೋಷದ ಹಾರ್ಮೋನುಗಳಲ್ಲಿ ಒಂದಾದ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಮೆದುಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸಹಕಾರಿಯಾಗಿದೆ.
ನಿಮ್ಮ ಇಷ್ಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ: ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಸ್ವಲ್ಪ ಸಮಯವನ್ನು ನಿಮಗಾಗಿ ಮೀಸಲಿಡುವ ಮೂಲಕ ನಿಮ್ಮ ನೆಚ್ಚಿನ ಚಟುಟಿಕೆಗಳಲ್ಲಿ ತೊಡಗಿಕೊಳ್ಳಿ. ನೆಚ್ಚಿನ ಹವ್ಯಾಸಗಳಲ್ಲಿ ನೀವು ತೊಡಗಿಕೊಂಡಾಗ ಮೆದುಳು ಎಂಡಾರ್ಫಿನ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದು ಸಂತೋಷ ಮತ್ತು ಸಕರಾತ್ಮಕತೆಯ ಭಾವನೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ.
ಇದನ್ನೂ ಓದಿ: ಹ್ಯಾಪಿ ಹಾರ್ಮೋನ್ಗಳು ಎಂದರೇನು? ಹೆಚ್ಚಿಸಿಕೊಳ್ಳುವುದು ಹೇಗೆ?
ನಿಮ್ಮ ನೆಚ್ಚಿನ ಸಂಗೀತವನ್ನು ಆಲಿಸಿ: ನಿಮ್ಮ ನೆಚ್ಚಿನ ಹಾಡುಗಳನ್ನು ಆಲಿಸಿದಾಗ ನಿಮ್ಮ ಮೆದುಳು ಡೋಪಮೈನ್ ಎಂಬ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸಲು ಮತ್ತು ಒತ್ತಡವನ್ನು ನಿವಾರಿಸಲು ತುಂಬಾ ಸಹಕಾರಿಯಾಗಿದೆ. ನಮ್ಮ ನೆಚ್ಚಿನ ಸಂಗೀತವನ್ನು ನಾವು ಕೇಳಿದಾಗ ದೇಹವು ವಿಶ್ರಾಂತಿ ಪಡೆಯುತ್ತದೆ ಮತ್ತು ಇದು ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸಂತೋಷದ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಧ್ಯಾನ: ಧ್ಯಾನವು ಮನಸ್ಸು ಮತ್ತು ದೇಹವನ್ನು ಶಾಂತವಾಗಿರಿಸುತ್ತದೆ. ಧ್ಯಾನವು ಸಿರೊಟೋನಿನ್ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರಿಂದ ನೀವು ನಿರಾಳರಾಗುತ್ತೀರಿ, ನಿಮ್ಮ ಒತ್ತಡವೂ ನಿವಾರಣೆಯಾಗುತ್ತದೆ ಮತ್ತು ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಅಲ್ಲದೆ ಇದು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ವೃದ್ಧಿಸುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ