
ವಿಶೇಷವಾಗಿ ರಾತ್ರಿಯಲ್ಲಿ ಕಾರು (car) ಚಾಲನೆ ಮಾಡುವಾಗ, ಅದರ ಹೆಡ್ಲೈಟ್ಗಳು ಮತ್ತು ಟೈಲ್ಲೈಟ್ಗಳು ಉತ್ತಮ ಸ್ಥಿತಿಯಲ್ಲಿರುವುದು ಬಹಳ ಮುಖ್ಯ. ಇವು ಉತ್ತಮ ಸ್ಥಿತಿಯಲ್ಲಿಲ್ಲದಿದ್ದರೆ, ಕತ್ತಲೆಯಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸುವುದು ಚಾಲನೆ ಕಷ್ಟಕರವಾಗುತ್ತದೆ. ಹಾಗಾಗಿ ಧೂಳು, ಕೊಳೆ, ಗ್ರೀಸ್ ಸಂಗ್ರಹವಾಗುವುದಿಂದ ಕಾಲಕಾಲಕ್ಕೆ ಹೈಡ್ಲೈಟ್ಗಳನ್ನು ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯ. ಇದಕ್ಕಾಗಿ ಹೆಚ್ಚೇನು ಖರ್ಚು ಮಾಡಬೇಕೆಂದಿಲ್ಲ. ಮನೆಯಲ್ಲಿಯೇ ಕೆಲವು ಸರಳ ತಂತ್ರಗಳೊಂದಿಗೆ ಕಾರಿನ ಹೆಡ್ಲೈಟ್ಗಳನ್ನು ಸ್ವಚ್ಛಗೊಳಿಸಬಹುದು.
ಹೆಚ್ಚಿನ ಕಾರ್ ಹೆಡ್ಲೈಟ್ ಲೆನ್ಸ್ಗಳನ್ನು ಈಗ ಗಾಜಿನ ಬದಲಿಗೆ ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್ನಿಂದ ತಯಾರಿಸಲಾಗುತ್ತದೆ. ಈ ಪ್ಲಾಸ್ಟಿಕ್ ಹಗುರ ಮತ್ತು ಬಲವಾಗಿರುತ್ತದೆ. ಆದರೂ ಇದು ಸೂರ್ಯನ ಬೆಳಕು ಮತ್ತು ಅದರ ನೇರಳಾತೀತ (UV) ಕಿರಣಗಳಿಗೆ ಒಳಗಾಗುತ್ತದೆ. ಇದರಿಂದ ರಕ್ಷಿಸಿಕೊಳ್ಳಲು, ಹೆಡ್ಲೈಟ್ಗಳಿಗೆ ರಕ್ಷಣಾತ್ಮಕ ಲೇಪನವನ್ನು ಹಾಕಲಾಗುತ್ತದೆ. ಆದರೂ ಸಹ ಸೂರ್ಯನ ಬೆಳಕು, ಶಾಖ ಮತ್ತು ಧೂಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಈ ಲೇಪನವು ಕ್ರಮೇಣ ಹದಗೆಡುತ್ತದೆ. ಇದು ಪ್ಲಾಸ್ಟಿಕ್ ಆಕ್ಸಿಡೀಕರಣಗೊಂಡು ಹೆಡ್ಲೈಟ್ ಹಳದಿ ಬಣ್ಣಕ್ಕೆ ತಿರುಗುತ್ತವೆ ಅಥವಾ ಮಸುಕಾಗಿ ಕಾಣಲು ಕಾರಣವಾಗುತ್ತದೆ.
ಹೆಡ್ಲೈಟ್ಗಳು ಧೂಳು, ಕೊಳಕು ಅಥವಾ ಗ್ರೀಸ್ನಿಂದ ಆವೃತವಾಗಿದ್ದರೆ ಅವು ಮಸುಕಾಗಿ ಕಾಣಿಸಬಹುದು. ಅವುಗಳನ್ನು ಸ್ವಚ್ಛಗೊಳಿಸಲು, ಹೆಡ್ಲೈಟ್ ಮೇಲ್ಮೈಯನ್ನು ಶುದ್ಧ ನೀರು ಮತ್ತು ಕಾರ್ ಶಾಂಪೂ ಬಳಸಿ ಸ್ವಚ್ಛಗೊಳಿಸಿ. ಮೃದುವಾದ ಮೈಕ್ರೋಫೈಬರ್ ಬಟ್ಟೆಯಿಂದ ಒರಸಿ ಒಣಗಿಸಿ. ಒರಟಾದ ಬಟ್ಟೆ ಅಥವಾ ಸ್ಕ್ರಬ್ಬರ್ ಬಳಸುವುದನ್ನು ತಪ್ಪಿಸಿ, ಏಕೆಂದರೆ ಇದು ಸ್ಕ್ರಾಚ್ ಬೀಳಲು ಕಾರಣವಾಗಬಹುದು.
ನಿಮ್ಮ ಕಾರ್ ಹೆಡ್ಲೈಟ್ಗಳಲ್ಲಿ ಲಘು ಕಲೆಗಳು ಅಥವಾ ಕೊಳೆ ಕಂಡುಬಂದರೆ, ನೀವು ಟೂತ್ಪೇಸ್ಟ್ನಿಂದ ಸ್ವಚ್ಛಗೊಳಿಸಬಹುದು. ಮೈಕ್ರೋಫೈಬರ್ ಅಥವಾ ಮೃದುವಾದ ಬಟ್ಟೆಗೆ ಸ್ವಲ್ಪ ಪ್ರಮಾಣದ ಟೂತ್ಪೇಸ್ಟ್ ಅನ್ನು ಹಚ್ಚಿ ಮತ್ತು ಅದನ್ನು ಹೆಡ್ಲೈಟ್ ಮೇಲ್ಮೈ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ನಂತರ, ಒದ್ದೆಯಾದ ಬಟ್ಟೆಯಿಂದ ಟೂತ್ಪೇಸ್ಟ್ ಅನ್ನು ಚೆನ್ನಾಗಿ ತೊಳೆಯಿರಿ. ಇದು ಕೆಲವು ಕಲೆಗಳು ಮತ್ತು ಮೇಲ್ಮೈ ಕೊಳೆಯನ್ನು ತೆಗೆದುಹಾಕಬಹುದು.
ಹೆಡ್ಲೈಟ್ಗಳ ಮೇಲೆ ಧೂಳು ಮತ್ತು ಕೊಳಕು ಸಂಗ್ರಹವಾಗಿದ್ದರೆ, ಸೋಪ್ ಮತ್ತು ನೀರು ಸಹ ಸಹಾಯಕವಾಗಬಹುದು. ನೀರಿನೊಂದಿಗೆ ಸ್ವಲ್ಪ ಸೋಪ್ ಬೆರೆಸಿ ದ್ರಾವಣವನ್ನು ತಯಾರಿಸಿ. ದ್ರಾವಣದಲ್ಲಿ ಮೃದುವಾದ ಬಟ್ಟೆಯನ್ನು ಅದ್ದಿ ಮತ್ತು ಹೆಡ್ಲೈಟ್ಗಳನ್ನುನಿಧಾನವಾಗಿ ಒರೆಸಿ. ಇದು ಹೆಡ್ಲೈಟ್ ಮೇಲ್ಮೈಯಿಂದ ಯಾವುದೇ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ರಾತ್ರಿಯಲ್ಲಿ ವಾಹನ ಚಲಾಯಿಸುವಾಗ ಹೈ-ಬೀಮ್ ಲೈಟ್ಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Sat, 28 November 26