
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಎಷ್ಟು ಮುಖ್ಯವೋ, ಅದೇ ರೀತಿ ನಿದ್ರೆಯು (sleep) ತುಂಬಾನೇ ಮುಖ್ಯ. ಆರೋಗ್ಯದ ದೃಷ್ಟಿಯಿಂದ ಒಬ್ಬ ವ್ಯಕ್ತಿ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆದರೆ ಹಲವರು ಮಲಗಿದ ತಕ್ಷಣ ನಿದ್ದೆಯೇ ಬರುವುದುದಿಲ್ಲ, ಕಣ್ಣು ಮುಚ್ಚಿ ನಿದ್ರೆ ಮಾಡಲು ಪಯತ್ನಿಸಿದರೂ ನಿದ್ರೆ ಮಾತ್ರ ಬರೋದೇ ಇಲ್ಲ ಎಂದು ಹೇಳುತ್ತಿರುತ್ತಾರೆ. ನೀವು ಕೂಡ ಇಂತಹದ್ದೇ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಮಲಗಿದ ತಕ್ಷಣ ಒಳ್ಳೆಯ ನಿದ್ರೆ ಬರಬೇಕು ಎಂದ್ರೆ ಏನು ಮಾಡಬೇಕು ಎಂದು ಯೋಚನೆ ಮಾಡ್ತಿದ್ದೀರಾ? ಹಾಗಿದ್ರೆ ಈ ಒಂದಷ್ಟು ಸಲಹೆಗಳನ್ನು (tips to better sleep) ಪಾಲಿಸಿ, ಖಂಡಿತವಾಗಿಯೂ ನೀವು ಮಲಗಿದ ತಕ್ಷಣವೇ ಒಳ್ಳೆಯ ನಿದ್ರೆಗೆ ಜಾರುತ್ತೀರಿ.
ಸಾಕ್ಸ್ ಧರಿಸುವುದು: ಮಲಗುವಾಗ ಕಾಲಿಗೆ ಸಾಕ್ಸ್ ಧರಿಸುವುದರಿಂದ ಉತ್ತಮ ನಿದ್ರೆ ಪಡೆಯಬಹುದು. ಇದು ಪಾದಕ್ಕೆ ಬೆಚ್ಚಗಿನ ಅನುಭವವನ್ನು ನೀಡುವುದು ಮಾತ್ರವಲ್ಲದೆ ಅದು ಮೆದುಳಿಗೆ ನಿದ್ರೆಯ ಸಂದೇಶವನ್ನು ನೀಡುವಂತಹ ಕಾರ್ಯವನ್ನು ಸಹ ಮಾಡುತ್ತದೆ. ಹಾಗಾಗಿ ಮಲಗುವಾಗ ಸಾಕ್ಸ್ ಧರಿಸುವುದು ತುಂಬಾನೇ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಲೈಟ್ ಆಫ್ ಮಾಡಿ: ಕೆಲವರು ಮಲಗುವಾಗ ಲೈಟ್ ಆಫ್ ಮಾಡುವುದಿಲ್ಲ. ಈ ಅಭ್ಯಾಸ ನಿದ್ರೆಗೆ ತೊಂದರೆಯನ್ನು ಉಂಟುಮಾಡುತ್ತದೆ. ಹೌದು ಅತಿಯಾದ ಬೆಳಕು ಇದ್ದರೆ ಮಲಗಿದ ತಕ್ಷಣ ನಿದ್ದರೆ ಬರುವುದಿಲ್ಲ. ಹಾಗಾಗಿ ಲೈಟ್ ಆಫ್ ಮಾಡಿ ಹಾಗೂ ಯಾವುದೇ ಬೆಳಕು ಕೋಣೆಯೊಳಗೆ ಬೀಳದಂತೆ ನೋಡಿಕೊಳ್ಳಿ. ಈ ಸಲಹೆಯನ್ನು ಪಾಲಿಸುವುದರಿಂದ ನೀವು ಮಲಗಿದ ತಕ್ಷಣವೇ ನಿದ್ರೆಗೆ ಜಾರುತ್ತೀರಿ.
ಉತ್ತಮ ಹಾಸಿಗೆ: ಉತ್ತಮ ನಿದ್ರೆ ಪಡೆಯಬೇಕೆಂದರೆ ಮಲಗುವ ಹಾಸಿಗೆ ಕೂಡ ಚೆನ್ನಾಗಿರಬೇಕು. ದೇಹಕ್ಕೆ ಒತ್ತಡ ಬೀಳದಂತಹ, ನೋವು ಉಂಟುಮಾಡದಂತಹ ಮೃದುವಾಗಿರುವಂತಹ ಹಾಸಿಗೆ ಮತ್ತು ದಿಂಬನ್ನು ಬಳಸಿ. ಇದು ಖಂಡಿತವಾಗಿಯೂ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
ವಾತಾವರಣ ನಿಶ್ಯಬ್ಧವಾಗಿರಲಿ: ಮಲಗುವ ಕೋಣೆಯಲ್ಲಿ ಹೆಚ್ಚು ಶಬ್ದ ಬರದಂತೆ ನೋಡಿಕೊಳ್ಳಿ. ಶಬ್ದಗಳು ಕೇಳಿಸಿದರೆ ತಕ್ಷಣಕ್ಕೆ ನಿದ್ದೆ ಬರೋದೇ ಇಲ್ಲ. ಹಾಗಾಗಿ ನಿಮ್ಮ ಮಲಗುವ ಕೋಣೆ ನಿಶ್ಯಬ್ಧವಾಗಿರಲಿ. ಖಂಡಿತವಾಗಿಯೂ ಇದರಿಂದ ಮಲಗಿದ ತಕ್ಷಣವೇ ನಿದ್ರೆ ಬರುತ್ತದೆ ನೋಡಿ.
ಉಸಿರಾಟದ ವ್ಯಾಯಾಮ: ಮಲಗಿದ ತಕ್ಷಣ ಒಳ್ಳೆಯ ನಿದ್ರೆ ಬರಬೇಕೆಂದರೆ ಮಲಗುವ ಮುನ್ನ ಸ್ವಲ್ಪ ಹೊತ್ತು ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿ. ಮೂಗಿನ ಮುಖಾಂತರ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು, ನಿಧಾನಕ್ಕೆ ಉಸಿರನ್ನು ಬಿಡಿ. ಈ ಉಸಿರಾಟದ ವ್ಯಾಯಾಮ ನಿಮಗೆ ಉತ್ತಮ ನಿದ್ರೆ ಪಡೆಯಲು ಸಹಕಾರಿ.
ಇದನ್ನೂ ಓದಿ: ಬೆಳಗ್ಗೆ ಯಾವ ಸಮಯದಲ್ಲಿ ಏಳೋದು ಸೂಕ್ತ? ಇಲ್ಲಿದೆ ಮಾಹಿತಿ
ಪುಸ್ತಕ ಓದಿ: ಮಲಗುವ ಮುನ್ನ ಮೊಬೈಲ್ ನೋಡುವ ಬದಲು ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಇರುವ ಉತ್ತಮ ಮಾರ್ಗವಾಗಿದೆ. ಇದರ ಮೂಲಕ ನೀವು ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಬಹುದು.
ಮೊಬೈಲ್‌ನಿಂದ ದೂರವಿರಿ: ಮಲಗಿದ ತಕ್ಷಣ ನಿದ್ರೆ ಬರಬೇಕು ಎಂದಾದ್ರೆ, ನೀವು ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಗ್ಯಾಜೆಟ್‌ಗಳನ್ನು ನಿಮ್ಮ ಹಾಸಿಗೆಯಿಂದ ದೂರವಿಡಿ. ಏಕೆಂದರೆ ಇವುಗಳು ನಿಮ್ಮ ಗಮನವನ್ನು ಬೇರೆಡೆ ಸೆಳೆಯುತ್ತದೆ. ಇದರಿಂದ ನೀವು ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ